
ಟ್ಯಾಂಪಿರಿಂಗ್[ಜು.13]: ಇಲ್ಲಿ ನಡೆಯುತ್ತಿರುವ ಐಎಎಎಫ್ ಅಂಡರ್ -20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ 400ಮೀ. ಓಟದಲ್ಲಿ ಭಾರತದ ಯುವ ಓಟಗಾರ್ತಿ ಹಿಮಾ ದಾಸ್ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಈ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಹಿಮಾ ಪಾತ್ರರಾದರು.
3ನೇ ದಿನವಾದ ಗುರುವಾರ ನಡೆದ ಮಹಿಳೆಯರ 400 ಮೀ. ಓಟದ ಫೈನಲ್ ಸ್ಪರ್ಧೆಯಲ್ಲಿ 18 ವರ್ಷದ ಹಿಮಾ, 51.46 ಸೆ.ಗಳಲ್ಲಿ ಗುರಿ ತಲುಪಿ ಚೊಚ್ಚಲ ಚಿನ್ನಕ್ಕೆ ಮುತ್ತಿಟ್ಟರು. 2016ರ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ದಾಖಲೆ ಮೂಲಕ ಚಿನ್ನ ಗೆದ್ದಿದ್ದರು. ಇದೀಗ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿರುವ ಹಿಮಾ, ನೀರಜ್ ಸಾಲೀನಲ್ಲಿ ಸ್ಥಾನ ಪಡೆದರು.
2002ರಲ್ಲಿ ಸೀಮಾ ಪೂನಿಯಾ ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದಿದ್ದರು. 2014ರಲ್ಲಿ ಡಿಸ್ಕಸ್ ಥ್ರೋವರ್ ನವ್‌ಜೋತ್ ಕೌರ್ ದಿಲ್ಲೋನ್ ಕಂಚು ಜಯಿಸಿದ್ದರು. ಗುವಾಹಟಿಯಲ್ಲಿ ನಡೆದಿದ್ದ ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹಿಮಾ 51.13 ಸೆ. ಗಳಲ್ಲಿ ಗುರಿ ಪೂರ್ಣಗೊಳಿಸಿ ಚಿನ್ನ ಗೆದ್ದಿದ್ದರು.
ಚಿನ್ನ ಗೆದ್ದ ಹಿಮಾ ದಾಸ್ ಸಾಧನೆಯನ್ನು ವಿರೇಂದ್ರ ಸೆಹ್ವಾಗ್ ಸೆಹ್ವಾಗ್, ಅಮಿತಾಬ್ ಬಚ್ಚನ್, ರಾಷ್ಟ್ರಪತಿ ರಾಮ್’ನಾಥ್ ಕೋವಿಂದ್ ಸೇರಿದಂತೆ ದಿಗ್ಗಜರು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.