
ನವದೆಹಲಿ(ಡಿ.24): ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ)ಗೆ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ರ ಆಪ್ತರು ಆಯ್ಕೆಯಾಗಿದ್ದಕ್ಕೆ ಅಸಮಾಧಾನಗೊಂಡಿರುವ ಕಿವುಡರ ಒಲಿಂಪಿಕ್ ಚಿನ್ನ ವಿಜೇತ ಕುಸ್ತಿಪಟು ವಿರೇಂದರ್ ಸಿಂಗ್ ಯಾದವ್ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ.
ಈಗಾಗಲೇ ಒಲಿಂಪಿಕ್ಸ್ ಸಾಧಕಿ ಸಾಕ್ಷಿ ಮಲಿಕ್ ಕುಸ್ತಿಗೆ ನಿವೃತ್ತಿ ಘೋಷಿಸಿದ್ದು, ಬಜರಂಗ್ ಪೂನಿಯಾ ಪದ್ಮಶ್ರೀ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಅವರಿಗೆ ಬೆಂಬಲ ಸೂಚಿಸಿರುವ ವಿರೇಂದರ್, ‘ನನ್ನ ಸಹೋದರಿ ಮತ್ತು ದೇಶದ ಮಗಳಿಗಾಗಿ ನಾನು ಪದ್ಮಶ್ರೀ ಹಿಂದಿರುಗಿಸುತ್ತೇನೆ. ಪ್ರಧಾನಿ ಮೋದಿ ಅವರೇ, ನಿಮ್ಮ ಮಗಳು ಮತ್ತು ನನ್ನ ಸಹೋದರಿ ಸಾಕ್ಷಿ ಮಲಿಕ್ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ವಿರೇಂದರ್ 2005, 2013, 2017ರ ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದಿದ್ದಾರೆ. ಅವರಿಗೆ 2021ರಲ್ಲಿ ಪದ್ಮಶ್ರೀ ನೀಡಲಾಗಿತ್ತು. 2015ರಲ್ಲಿ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದರು.
ಜೈಪುರ, ಜೈಂಟ್ಸ್ ಜಯಭೇರಿ
ಚೆನ್ನೈ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಶನಿವಾರ ಗುಜರಾತ್ ಜೈಂಟ್ಸ್ ಹಾಗೂ ಜೈಪುರ ತಂಡಗಳು ಗೆಲುವು ಸಾಧಿಸಿವೆ. ಆರಂಭಿಕ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಜೈಪುರ ತಂಡ 25-24 ಅಂಕಗಳಿಂದ ರೋಚಕ ಜಯಗಳಿಸಿತು. ಮೊದಲಾರ್ಧಕ್ಕೆ ತಲೈವಾಸ್ 16-10ರಲ್ಲಿ ಮುಂದಿದ್ದರೂ, ಬಳಿಕ ಪುಟಿದೆದ್ದ ಜೈಪುರ ಗೆಲುವು ತನ್ನದಾಗಿಸಿಕೊಂಡಿತು. ಇದು ತಲೈವಾಸ್‌ಗೆ ಸತತ 3ನೇ ಸೋಲು. ಜೈಪುರ 7 ಪಂದ್ಯಗಳಲ್ಲಿ 4ನೇ ಗೆಲುವು ದಾಖಲಿಸಿತು.
ಇವತ್ ನನ್ ಮದ್ವೆ, ಈಗಲೇ ಬಂದು ಬಿಡು, ಧೋನಿ ವಿವಾಹ ಆಮಂತ್ರಣ ಸೀಕ್ರೆಟ್ ಬಹಿರಂಗಪಡಿಸಿದ ರೈನಾ!
ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ ಗುಜರಾತ್ ಜೈಂಟ್ಸ್ 38-30 ಅಂಕಗಳಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ಹ್ಯಾಟ್ರಿಕ್ ಸೋಲಿನ ಬಳಿಕ ಜೈಂಟ್ಸ್ ಮತ್ತೆ ಗೆಲುವಿನ ಹಳಿಗೆ ಮರಳಿತು. ರಾಕೇಶ್ 14 ಅಂಕಗಳನ್ನು ಪಡೆದು ಗೆಲುವಿನ ರೂವಾರಿಯಾದರೆ, ಯೋಧಾಸ್‌ನ ಸುರೇಂದರ್(13) ಹೋರಾಟ ಫಲ ನೀಡಲಿಲ್ಲ.
ಇಂದಿನ ಪಂದ್ಯಗಳು
ಯು ಮುಂಬಾ-ಬೆಂಗಾಲ್, ರಾತ್ರಿ 8ಕ್ಕೆ
ಬೆಂಗಳೂರು ಬುಲ್ಸ್-ಟೈಟಾನ್ಸ್, ರಾತ್ರಿ 9ಕ್ಕೆ
ಎರಡನೇ ಆವೃತ್ತಿ ಅಲ್ಟಿಮೇಟ್ ಖೋ-ಖೋ ಇಂದು ಶುರು
ಭುವನೇಶ್ವರ್: ಎರಡನೇ ಆವೃತ್ತಿಯ ಅಲ್ಟಿಮೇಟ್ ಖೋ-ಖೋ ಲೀಗ್‌ಗೆ ಭಾನುವಾರ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಒಡಿಶಾ ಜಗ್ಗರ್‌ನಾಟ್ಸ್-ರಾಜಸ್ಥಾನ ವಾರಿಯರ್ಸ್ ಮುಖಾಮುಖಿಯಾಗಲಿವೆ. ಮತ್ತೊಂದು ಪಂದ್ಯದಲ್ಲಿ ತೆಲುಗು ಯೋಧಾಸ್-ಮುಂಬೈ ಕಿಲಾಡಿಸ್ ಸೆಣಸಾಡಲಿವೆ.
ಟೂರ್ನಿಯಲ್ಲಿ 6 ತಂಡಗಳು ಭಾಗಿಯಾಗಲಿದ್ದು, ಪ್ರತಿ ತಂಡಗಳು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿವೆ. ಅಗ್ರ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಜನವರಿ 13ಕ್ಕೆ ಫೈನಲ್ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.