ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆ ಜುಲೈ 06ಕ್ಕೆ ನಿಗದಿ
ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಿಗೆ ಚುನಾವಣೆ ನಡೆಯಲಿದೆ
ನಾಮಪತ್ರ ಸಲ್ಲಿಸಲು ಜೂನ್ 23ರಿಂದ 25ರ ವರೆಗೆ ಸಮಯಾವಕಾಶ
ನವದೆಹಲಿ(ಜೂ.14): ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಬಹುನಿರೀಕ್ಷಿತ ಚುನಾವಣೆ ಜುಲೈ 4ರ ಬದಲಾಗಿ ಜುಲೈ 6ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಜೂನ್ 23ರಿಂದ 25ರ ವರೆಗೆ ಸಮಯಾವಕಾಶ ನೀಡಲಾಗಿದೆ. ಭಾರತದ ತಾರಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಕ್ಕೆ ತುತ್ತಾಗಿರುವ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ್ ಸೇರಿದಂತೆ ಅವರ ಕುಟುಂಬಸ್ಥರು ಯಾರೂ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿದು ಬಂದಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಬ್ರಿಜ್ ಕುಟುಂಬಸ್ಥರಿಲ್ಲ: ಡಬ್ಲ್ಯುಎಫ್ಐಗೆ ಬ್ರಿಜ್ ಈಗಾಗಲೇ 3 ಅವಧಿಗೆ 12 ವರ್ಷ ಅಧ್ಯಕ್ಷರಾಗಿದ್ದು, ಕ್ರೀಡಾ ನಿಯಮಗಳ ಪ್ರಕಾರ ಮತ್ತೊಂದು ಅವಧಿಗೆ ಸ್ಪರ್ಧಿಸುವಂತಿಲ್ಲ. ಆದರೆ ಅವರ ಕುಟುಂಬಸ್ಥರಾರಿಗೆ ಈ ಬಾರಿ ಅರ್ಹತೆ ಇದ್ದರೂ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ. ಇತ್ತೀಚೆಗೆ ಒಲಿಂಪಿಕ್ಸ್ ಸಂಸ್ಥೆ ಕುಸ್ತಿ ಫೆಡರೇಶನ್‌ನ ಆಡಳಿತವನ್ನು ತಾತ್ಕಾಲಿಕ ಸಮಿತಿಗೆ ಒಪ್ಪಿಸುವ ವರೆಗೂ ಬ್ರಿಜ್‌ರ ಪುತ್ರ ಕರಣ್ ಭೂಷಣ್ ಡಬ್ಲ್ಯುಎಫ್‌ಐನ ಉಪಾಧ್ಯಕ್ಷರಾಗಿದ್ದರು. ಬ್ರಿಜ್‌ರ ಓರ್ವ ಅಳಿಯ ಆದಿತ್ಯ ಪ್ರತಾಪ್ ಸಿಂಗ್ ಜಂಟಿ ಕಾರ್ಯದರ್ಶಿಯಾಗಿದ್ದರೆ, ಮತ್ತೋರ್ವ ಅಳಿಯ ವಿಶಾಲ್ ಸಿಂಗ್ ಬಿಹಾರ ಕುಸ್ತಿ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಬಾರಿ ಬ್ರಿಜ್‌ರ ಕುಟುಂಬಸ್ಥರು ಯಾರೂ ಸ್ಪರ್ಧಿಸಬಾರದು ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಜೊತೆ ಸಭೆ ವೇಳೆ ಕುಸ್ತಿಪಟುಗಳು ಷರತ್ತು ಹಾಕಿದ್ದರು. ಇದಕ್ಕೆ ಠಾಕೂರ್ ಒಪ್ಪಿದ್ದು, ಬ್ರಿಜ್ ಕುಟುಂಬಸ್ಥರ ಜೊತೆ ಚರ್ಚಿಸಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ರಿಜ್ ಕೇಸ್: 5 ದೇಶದ ಸಿಸಿಟಿವಿಗಳ ಪರಿಶೀಲನೆ!
ಅಗ್ರ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, 5 ದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
ಬ್ರಿಜ್ ವಿರುದ್ಧ ಏಪ್ರಿಲ್ ಅಂತ್ಯದಲ್ಲೇ 2 ಎಫ್ಐಆರ್ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಂಡೋನೇಷ್ಯಾ, ಬಲ್ಗೇರಿಯಾ, ಕಿರ್ಗಿಸ್ತಾನ, ಮಂಗೋಲಿಯಾ ಹಾಗೂ ಕಜಕಸ್ತಾನದಿಂದ ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ತರಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ 5 ದೇಶಗಳಲ್ಲಿ ಟೂರ್ನಿ ನಡೆದಾಗ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ನಡೆದಿತ್ತು ಎಂದು ಕುಸ್ತಿಪಟುಗಳು ಆರೋಪಿಸಿದ್ದರು.
ಭಾರತೀಯ ಕುಸ್ತಿ ಸಂಸ್ಥೆ ಚುನಾವಣೆಗೆ ಡೇಟ್ ಫಿಕ್ಸ್..!
ಇನ್ನು, ಘಟನೆಗೆ ಸಂಬಂಧೀಸಿ ಕುಸ್ತಿಪಟುಗಳು, ಕೋಚ್‌ಗಳು, ರೆಫ್ರಿಗಳು ಸೇರಿದಂತೆ 200ಕ್ಕೂ ಹೆಚ್ಚು ಮಂದಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಅಲ್ಲದೇ ಆರೋಪಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳು ಫೋಟೋ, ಆಡಿಯೋಗಳನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ ಚಾರ್ಜ್‌ಶೀಟ್?
ಬ್ರಿಜ್ ವಿರುದ್ಧದ ತನಿಖೆಯನ್ನು ಪೊಲೀಸರು ಬಹುತೇಕ ಮುಕ್ತಾಯಗೊಳಿಸಿದ್ದಾರೆ ಎನ್ನಲಾಗಿದ್ದು, ಗುರುವಾರ ನ್ಯಾಯಾಲಯಕ್ಕೆ ಚಾಜ್ರ್ಶೀಟ್ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಕಳೆದ ವಾರ ಈ ಬಗ್ಗೆ ಹೇಳಿಕೆ ನೀಡಿದ್ದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಜೂ.15ರೊಳಗೆ ಜಾಜ್ರ್ಶೀಟ್ ಸಲ್ಲಿಸುವುದಾಗಿ ತಮ್ಮನ್ನು ಭೇಟಿಯಾಗಿದ್ದ ಕುಸ್ತಿಪಟುಗಳಿಗೆ ಭರವಸೆ ನೀಡಿದ್ದರು.
ಮೋದಿ ಮೌನದಿಂದ ಬೇಸರ: ಸಾಕ್ಷಿ ಮಲಿಕ್
ಹಲವು ತಿಂಗಳುಗಳಿಂದ ಹೋರಾಟ ನಿರತರಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಇನ್ನೂ ಮೌನವಾಗಿರುವುದಕ್ಕೆ ಕುಸ್ತಿಪಟು ಸಾಕ್ಷಿ ಮಲಿಕ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾವು ಪದಕ ಗೆದ್ದಾಗ ಅವರು ತಮ್ಮ ಮನೆಗೆ ಕರೆದು ಭೋಜನಕೂಟ ಏರ್ಪಡಿಸುತ್ತಾರೆ. ತುಂಬಾ ಪ್ರೀತಿ, ಗೌರವದಿಂದ ನಡೆಸಿಕೊಳ್ಳುತ್ತಾರೆ. ಆದರೆ ನಮ್ಮ ಹೋರಾಟದ ಬಗ್ಗೆ ಈಗಲೂ ಮೌನವಾಗಿರುವುದು ನೋಡಿ ನೋವಾಗಿದೆ’ ಎಂದಿದ್ದಾರೆ.