ನಂ.1 ಪಟ್ಟಕ್ಕೇರುತ್ತಾ ವಿರಾಟ್ ಪಡೆ..?

By Suvarna Web DeskFirst Published Jan 30, 2018, 10:58 AM IST
Highlights

ಸದ್ಯ ಐಸಿಸಿ ಟೆಸ್ಟ್ ರ್ಯಾಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತಕ್ಕೆ ಇದೀಗ ಏಕದಿನದಲ್ಲೂ ನಂ.1 ಪಟ್ಟಕ್ಕೇರಲು ಸುವರ್ಣಾವಕಾಶ ದೊರೆತಿದೆ. ಇದೇ ಫೆ.1ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ.

ಬೆಂಗಳೂರು : ಸದ್ಯ ಐಸಿಸಿ ಟೆಸ್ಟ್ ರ್ಯಾಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತಕ್ಕೆ ಇದೀಗ ಏಕದಿನದಲ್ಲೂ ನಂ.1 ಪಟ್ಟಕ್ಕೇರಲು ಸುವರ್ಣಾವಕಾಶ ದೊರೆತಿದೆ. ಇದೇ ಫೆ.1ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 6 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ.

ಇದೇ ಪಟ್ಟ ಉಳಿಸಿಕೊಳ್ಳಲು ವಿರಾಟ್ ಪಡೆ 4-2 ರಿಂದ ಸರಣಿ ಜಯಿಸಬೇಕಾಗಿದೆ. 3-3ರಿಂದ ಸರಣಿ ಡ್ರಾಗೊಂಡರೆ, ಆಫ್ರಿಕಾ ಅಗ್ರ ಸ್ಥಾನದಲ್ಲೇ ಉಳಿಯಲಿದೆ. ಸರಣಿಯನ್ನು ಆಫ್ರಿಕಾ ಕ್ಲೀನ್ ಸ್ವೀಪ್ ಮಾಡಿದರೆ ಭಾರತ ಈಗಿರುವ 2ನೇ ಸ್ಥಾನವನ್ನು ಕಳೆದುಕೊಂಡು 4ನೇ ಸ್ಥಾನಕ್ಕೆ ಕುಸಿಯಲಿದೆ. ಇಂಗ್ಲೆಂಡ್ 2ನೇ ಮತ್ತು ನ್ಯೂಜಿಲೆಂಡ್ 3ನೇ ಸ್ಥಾನ ಪಡೆಯಲಿದೆ.

ಒಂದೊಮ್ಮೆ ಆಫ್ರಿಕಾ 5-1 ರಿಂದ ಸರಣಿ ಜಯಿಸಿದರೆ ಭಾರತ ಪಾಯಿಂಟ್ ಲೆಕ್ಕಚಾರದಲ್ಲಿ ಪ್ರಸ್ತುತ ಇರುವ 3 ಅಂಕಗಳನ್ನು ಕಳೆದುಕೊಂಡು 116 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಉಳಿಯಲಿದೆ. 116 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ 3ನೇ ಸ್ಥಾನದಲ್ಲಿ ಮುಂದುವರಿಯಲಿದೆ. ಪ್ರಸ್ತುತ ಭಾರತ ತಂಡ ಏಕದಿನ ರ್ಯಾಕಿಂಗ್‌ನಲ್ಲಿ (119) ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ (120) ಅಂಕಗಳಿಂದ ಅಗ್ರ ಸ್ಥಾನ ಪಡೆದಿದೆ. ಹೀಗಾಗಿ ಭಾರತ ತಂಡ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಪ್ರಭಾವಿ ಆಟದೊಂದಿಗೆ ಉತ್ತಮ ಪ್ರದರ್ಶನ ತೋರಬೇಕಾದ ಒತ್ತಡದಲ್ಲಿದೆ. ಸ್ಪೀಡ್ ಟೆಸ್ಟ್ ಎಂದೇ ಹೆಸರಾಗಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಫ್ರಿಕಾ 2-1 ರಿಂದ ವಶಪಡಿಸಿಕೊಂಡಿದೆ. ಇದೀಗ 6 ಪಂದ್ಯಗಳ ಏಕದಿನ ಸರಣಿಯ ಮೇಲೂ ಕಣ್ಣಿಟ್ಟಿರುವ ಆಫ್ರಿಕಾ ಇದನ್ನು ಗೆಲ್ಲುವ ಲೆಕ್ಕಚಾರದಲ್ಲಿ ಕಣಕ್ಕಿಳಿಯುತ್ತಿದೆ. ಮೊದಲ ಎರಡೂ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಳಪೆ ಪ್ರದರ್ಶನ ತೋರಿದ ಭಾರತ ಭಾರೀ ಟೀಕೆಗೆ ಗುರಿಯಾಗಿತ್ತು.

ಕೊನೆಯ ಟೆಸ್ಟ್ ನಲ್ಲಿ ವೇಗಿಗಳ ಮಾರಕ ಬೌಲಿಂಗ್ ದಾಳಿಯಿಂದ ಆಫ್ರಿಕಾವನ್ನು ಮಣಿಸಿ ಮಾನ ಉಳಿಸಿಕೊಂಡಿತ್ತು. ಏಕದಿನ ಪಂದ್ಯಗಳ ಸರಣಿಯಲ್ಲಿ ಹೀಗಾಗದಂತೆ ಕೊಹ್ಲಿ ಪಡೆ ಎಚ್ಚರ ವಹಿಸಬೇಕಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಆಟಗಾರರು ಪ್ರಬುದ್ಧ ಆಟ ತೋರಿದರೆ ಮಾತ್ರ ಪಂದ್ಯಗಳನ್ನು ಸುಲಭವಾಗಿ ಬಿಟ್ಟುಕೊಡುವುದನ್ನು ತಪ್ಪಿಸಬಹುದಾಗಿದೆ.

ಅಗ್ರಸ್ಥಾನದ ಮೇಲೆ ಎಬಿಡಿ ಕಣ್ಣು: ಏಕದಿನ ಬ್ಯಾಟ್ಸ್ ಮನ್‌ಗಳ ರ್ಯಾಕಿಂಗ್ ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (876) ಅಂಕಗಳಿಂದ ನಂ.1 ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ (872) ರಿಂದ 2ನೇ ಸ್ಥಾನ ಪಡೆದಿದ್ದರೆ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (823), ರೋಹಿತ್ ಶರ್ಮಾ (816), ಪಾಕಿಸ್ತಾನದ ಬಾಬರ್ ಅಜಾಂ (813) ನಂತರದ ಸ್ಥಾನದಲ್ಲಿದ್ದಾರೆ. ಕೊಹ್ಲಿಗಿಂತ, ಡಿವಿಲಿಯರ್ಸ್‌ ಕೇವಲ 4 ಅಂಕಗಳಿಂದ ಹಿಂದಿದ್ದು, ಅಗ್ರಸ್ಥಾನದ ಮೇಲೆ ಕಣ್ಣಿರಿಸಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಸಹ ಪ್ರಚಂಡ ಫಾರ್ಮ್ ನಲ್ಲಿದ್ದು, ಅಗ್ರಸ್ಥಾನ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

click me!