ಶಮಿ-ಜಡೇಜಾ ಅಬ್ಬರ; ಟೀಂ ಇಂಡಿಯಾ ಕೈವಶವಾದ ವೈಜಾಗ್ ಟೆಸ್ಟ್

By Web DeskFirst Published Oct 6, 2019, 2:02 PM IST
Highlights

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಮೆರೆದ ಭಾರತ ತಂಡ ನಿರೀಕ್ಷೆಯಂತೆಯೇ ಮೊದಲ ಟೆಸ್ಟ್ ಪಂದ್ಯವನ್ನು ಕೈವಶ ಮಾಡಿಕೊಂಡಿದೆ. ರೋಹಿತ್ ಶರ್ಮಾ, ಮಯಾಂಕ್ ಅಗರ್‌ವಾಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಮೊದಲ ಟೆಸ್ಟ್ ಪಂದ್ಯದ ಗೆಲುವಿನ ರೂವಾರಿಗಳೆನಿಸಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ವೈಜಾಗ್[ಅ.06]: ರೋಹಿತ್ ಶರ್ಮಾ, ಮಯಾಂಕ್ ಅಗರ್‌ವಾಲ್ ಆಕರ್ಷಕ ಬ್ಯಾಟಿಂಗ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಮಾರಕ ದಾಳಿಯ ನೆರವಿನಿಂದ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು 203 ರನ್’ಗಳ ಭಾರೀ ಅಂತರದ ಜಯ ಸಾಧಿಸಿದೆ. ಎರಡನೇ ಇನಿಂಗ್ಸ್’ನಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 191 ರನ್’ಗಳಿಗೆ ಆಲೌಟ್ ಆಯಿತು. ರವೀಂದ್ರ ಜಡೇಜಾ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 5 ವಿಕೆಟ್ ಪಡೆದು ಟೀಂ ಇಂಡಿಯಾಗೆ ಸುಲಭ ಗೆಲುವು ತಂದಿತ್ತರು. 

ನನ್ನ ನೀ ಗೆಲ್ಲಲಾರೆ, ತಿಳಿದು ತಿಳಿದು ಅನುಕರಣೆ ಏತಕೆ? ಡಿಕಾಕ್‌ಗೆ ಚಹಾಲ್ ಸವಾಲ್!

ಗೆಲ್ಲಲು 395 ರನ್’ಗಳ ಗುರಿ ಪಡೆದಿದ್ದ ಹರಿಣಗಳ ಪಡೆ ನಾಲ್ಕನೇ ದಿನದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 11 ರನ್ ಬಾರಿಸಿತ್ತು. ಅಂತಿಮ ದಿನವಾದ ಇಂದು ಮೊದಲ ಇನಿಂಗ್ಸ್’ನಂತೆ ದಕ್ಷಿಣ ಆಫ್ರಿಕಾ ತಂಡದಿಂದ ಪ್ರತಿರೋಧವನ್ನು ನಿರೀಕ್ಷಿಸಲಾಗಿತ್ತು. ಮೊದಲ ಇನಿಂಗ್ಸ್’ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದ ಅಶ್ವಿನ್, 5ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ಡಿ ಬ್ರುಯಾನ್ 10 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್’ನಲ್ಲಿ ಅತಿವೇಗವಾಗಿ 350 ವಿಕೆಟ್ ಬೌಲರ್ ಎಂದು ಮುತ್ತಯ್ಯ ಮುರುಳೀಧರನ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡರು. ತಾವಾಡುತ್ತಿರುವ 67ನೇ ಪಂದ್ಯದಲ್ಲೇ 350 ವಿಕೆಟ್ ಕಬಳಿಸುವ ಮೂಲಕ ಭಾರತದ ಪರ ಅತಿವೇಗವಾಗಿ 350 ವಿಕೆಟ್ ಪಡೆದ ಬೌಲರ್ ಎನ್ನುವ ಕೀರ್ತಿಗೂ ಭಾಜನರಾದರು.

ಭಾರತದ ಬಿಗಿ ಹಿಡಿತದಲ್ಲಿ ಆಫ್ರಿಕಾ; ಹರಿಣಗಳ ಗೆಲುವಿಗೆ 395 ಟಾರ್ಗೆಟ್

ಗೆಲುವು ತಡ ಮಾಡಿದ ಬಾಲಂಗೋಚಿಗಳು: ಒಂದು ಹಂತದಲ್ಲಿ 70 ರನ್’ಗಳಿಗೆ 8 ವಿಕೆಟ್ ಕಬಳಿಸಿ ಸುಲಭ ಜಯದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಡೇನ್ ಫಿಯೆಟ್-ಸೆನುರನ್ ಮುತ್ತುಸ್ವಾಮಿ ಕೆಚ್ಚೆದೆಯ ಹೋರಾಟ ತೋರುವ ಮೂಲಕ ಭಾರತದ ಗೆಲುವನ್ನು ತಡಮಾಡಿದರು. 9ನೇ ವಿಕೆಟ್’ಗೆ ಈ ಜೋಡಿ ದಾಖಲೆಯ 91 ರನ್’ಗಳ ಜತೆಯಾಟ ನಿಭಾಯಿಸಿತು. ಮೊದಲ 8 ವಿಕೆಟ್’ಗಳಲ್ಲಿ ಆಫ್ರಿಕಾ ತಂಡ 70 ರನ್ ಬಾರಿಸಿದರೆ, ಈ ಜೋಡಿ 91 ರನ್  ಜತೆಯಾಟವಾಡುವ ಮೂಲಕ ಹರಿಣಗಳ ಹೀನಾಯ ಸೋಲನ್ನು ತಪ್ಪಿಸಿತು. ಡೇನ್ ಫಿಯೆಟ್ 107 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 56 ರನ್ ಬಾರಿಸಿ ಶಮಿ ಬೌಲಿಂಗ್’ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು 10ನೇ ವಿಕೆಟ್’ಗೆ ರಬಾಡ-ಮುತ್ತುಸ್ವಾಮಿ ಜೋಡಿ 30 ರನ್’ಗಳ ಜತೆಯಾಟ ನಿಭಾಯಿಸಿತು. ಮತ್ತುಸ್ವಾಮಿ ಅಜೇಯ 49 ರನ್ ಬಾರಿಸಿದರು. ಮೊಹಮ್ಮದ್ ಶಮಿ, ರಬಾಡ ವಿಕೆಟ್ ಪಡೆಯುವುದರೊಂದಿಗೆ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಕೈವಶ ಮಾಡಿಕೊಂಡಿತು.

ಶಮಿ ಕಮಾಲ್: ಮೊದಲ ಇನಿಂಗ್ಸ್’ನಲ್ಲಿ ಒಂದೂ ವಿಕೆಟ್ ಪಡೆಯಲು ವಿಫಲರಾಗಿದ್ದ ಮೊಹಮ್ಮದ್ ಶಮಿ, ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಹರಿಣಗಳ ಪಡೆಯ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದರು. ಕೊನೆಯ ದಿನ ಅಶ್ವಿನ್  ಬೌಲಿಂಗ್ ಎದುರಿಸುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಶಮಿ ಅಚ್ಚರಿಯ ಶಾಕ್ ನೀಡಿದರು. ತೆಂಬ ಬವುಮಾ[00], ನಾಯಕ ಫಾಫ್ ಡುಪ್ಲೆಸಿಸ್[13] ಹಾಗೂ ಮೊದಲ ಇನಿಂಗ್ಸ್ ಶತಕವೀರ ಕ್ವಿಂಟನ್[00] ಅವರನ್ನು ಪೆವಿಲಿಯನ್’ಗೆ ಅಟ್ಟುವ ಮೂಲಕ ಹರಿಣಗಳ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಇನ್ನು ಕೊನೆಯ ಎರಡು ವಿಕೆಟ್ ಕಬಳಿಸುವ ಮೂಲಕ ಶಮಿ 5 ವಿಕೆಟ್ ಗೊಂಚಲು ತಮ್ಮ ತೆಕ್ಕೆಗೆ ಹಾಕಿಕೊಂಡರು. 

ಶಮಿಗೆ ಸಾಥ್ ಕೊಟ್ಟ ಜಡೇಜಾ: ನಾಲ್ಕನೇ ಇನಿಂಗ್ಸ್’ನಲ್ಲಿ ತಾನೆಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ರವೀಂದ್ರ ಜಡೇಜಾ ಮತ್ತೊಮ್ಮೆ ಸಾಬೀತು ಮಾಡಿದರು. ಮೊದಲ ಇನಿಂಗ್ಸ್’ನಲ್ಲಿ 2 ವಿಕೆಟ್ ಪಡೆಯುವುದರೊಂದಿಗೆ ಅತಿವೇಗವಾಗಿ 200 ವಿಕೆಟ್ ಪಡೆದ ಎಡಗೈ ಬೌಲರ್ ಎನ್ನುವ ವಿಶ್ವದಾಖಲೆ ಬರೆದಿದ್ದ ಜಡ್ಡು, ನಾಲ್ಕನೇ ದಿನದಾಟದ ಅಂತ್ಯದಲ್ಲಿ ಭಾರತಕ್ಕೆ ಮೊದಲ ಯಶಸ್ಸು ದಕ್ಕಿಸಿ ಕೊಟ್ಟಿದ್ದರು. ಒಂದು ಕಡೆ ಶಮಿ ಕೊಟ್ಟ ಆಘಾತದಿಂದ ಹೊರಬರುವ ಮೊದಲೇ ಹರಿಣಗಳಿಗೆ ಮತ್ತೊಂದು ಆಘಾತ ಎದುರಾಯಿತು. ಒಂದೇ ಓವರ್’ನಲ್ಲಿ 3 ವಿಕೆಟ್ ಪಡೆಯುವುದರೊಂದಿಗೆ ಭಾರತಕ್ಕೆ ಸಂಪೂರ್ಣ ಮೇಲುಗೈ ತಂದಿತ್ತರು. ವೆರ್ನಾನ್ ಫಿಲಾಂಡರ್, ಕೇಶವ್ ಮಹರಾಜ್ ಎಲ್ ಬಿ ಬಲೆಗೆ ಬಿದ್ದರೆ, ಏಡನ್ ಮಾರ್ಕ್ ರಮ್ ನೇರವಾಗಿ ಜಡೇಜಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. 

ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತ್ತು. ರೋಹಿತ್ ಶರ್ಮಾ ಶತಕ ಬಾರಿಸಿದರೆ, ಮಯಾಂಕ್ ಅರ್ಧಶತಕ ಬಾರಿಸಿದ್ದರು. ಇನ್ನು ಎರಡನೇ ದಿನವೂ ವಿರಾಟ್ ಪಡೆ ಆಫ್ರಿಕಾ ಮೇಲೆ ಸವಾರಿ ಮಾಡಿತು. ಮಯಾಂಕ್ ದ್ವಿಶತಕ ಸಿಡಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಇನ್ನು ಮೂರನೇ ದಿನದಾಟದ ಗೌರವಕ್ಕೂ ಉಭಯ ತಂಡಗಳು ಸಮನಾಗಿ ಹಂಚಿಕೊಂಡವು. ಮೂರನೇ ದಿನದಾಟದಲ್ಲಿ ಡೀನ್ ಎಲ್ಗಾರ್[160], ಕ್ವಿಂಟನ್ ಡಿಕಾಕ್[111] ಭರ್ಜರಿ ಶತಕ ಸಿಡಿಸಿದರೆ, ಅಶ್ವಿನ್ 5 ವಿಕೆಟ್ ಪಡೆಯುವ ಮೂಲಕ ಭಾರತ ಕಮ್ ಬ್ಯಾಕ್ ಮಾಡುವಂತೆ ಮಾಡಿದರು. ಇನ್ನು ನಾಲ್ಕನೇ ದಿನದಾಟದಲ್ಲಿ ರೋಹಿತ್ ಶರ್ಮಾ ಅವರಿಂದ ಮತ್ತೊಂದು ದಾಖಲೆಯ ಶತಕ ಮೂಡಿಬಂತು. ಪೂಜಾರ ಸಹಾ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಹರಿಣಗಳ ಮೇಲೆ ಮತ್ತೊಮ್ಮೆ ಭಾರತ ಬಿಗಿ ಹಿಡಿತ ಸಾಧಿಸಿತು. ಇನ್ನು 5ನೇ ದಿನದಲ್ಲಂತೂ  ಪ್ರವಾಸಿ ತಂಡವನ್ನು ಭಾರತೀಯ ಬೌಲರ್’ಗಳು ಇನ್ನಿಲ್ಲದಂತೆ ಕಾಡುವ ಮೂಲಕ ತಂಡಕ್ಕೆ ಮೊದಲ ಗೆಲುವು ತಂದಿತ್ತರು. 

ಮೂರು ಪಂದ್ಯಗಳ ಟೆಸ್ಟ್ ಚಾಂಪಿಯನ್’ಶಿಪ್’ನ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಇದೀಗ ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 10ರಂದು ಪುಣೆಯಲ್ಲಿ ಜರುಗಲಿದೆ. 

ಸಂಕ್ಷಿಪ್ತ ಸ್ಕೋರ್:

ಭಾರತ: 502/7&323/4

ದಕ್ಷಿಣ ಆಫ್ರಿಕಾ: 431&191
 

click me!