ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಬಯಸ್ಸಿದ್ದ ನಾಯಕ ವಿರಾಟ್ ಕೊಹ್ಲಿ ದಿಢೀರ್ ನಿರ್ಧಾರ ಬದಲಿಸಿದ್ದರು. ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಕೊಹ್ಲಿ ಪ್ಲಾನ್ ಬದಲಿಸಿದ್ದರು. ಕೊಹ್ಲಿ ವಿಶ್ರಾಂತಿ ಮೊಟಕುಗೊಳಿಸಿ, ವಿಂಡೀಸ್ ಪ್ರವಾಸ ಆಯ್ಕೆ ಮಾಡಿಕೊಂಡ ಹಿಂದಿನ ಕಾರಣವೇನು? ಇಲ್ಲಿದೆ ವಿವರ
ಮುಂಬೈ(ಜು.24): ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗಲಿದೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಜೊತೆಗೆ ನಿಗದಿತ ಓವರ್ ಹಾಗೂ ಟೆಸ್ಟ್‌ಗೆ ಬೇರೆ ಬೇರೆ ನಾಯಕ ಹಾಗೂ ವಿಂಡೀಸ್ ಪ್ರವಾಸದಿಂದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಕ್ರಿಕೆಟ್ ಪಂಡಿತರು ವಿಶ್ಲೇಷಿಸಿದ್ದರು. ಆದರೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡ ಪ್ರಕಟವಾದಾಗ ಮೂರು ಮಾದರಿಯಲ್ಲಿ ಕೊಹ್ಲಿ ನಾಯಕರಾಗಿ ಮುಂದವರಿದಿದ್ದರು. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬಿತ್ತು.
ಇದನ್ನೂ ಓದಿ: ’ವಿರಾಟ್ ಕೊಹ್ಲಿ’ ಟಿಕ್ ಟಾಕ್ ವಿಡಿಯೋ ಸಿಕ್ಕಾಪಟ್ಟೆ ವೈರಲ್..!
ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆಯಲು ನಾಯಕ ವಿರಾಟ್ ಕೊಹ್ಲಿ ಬಯಸಿದ್ದರು. ಆದರೆ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಸೋಲಿನ ಬಳಿಕ ಕೊಹ್ಲಿ ದಿಢೀರ್ ನಿರ್ಧಾರ ಬದಲಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಸೋಲಿನಿಂದ ಟೀಂ ಇಂಡಿಯಾ ಆಘಾತಕ್ಕೊಳಗಾಗಿತ್ತು. ತಂಡದ ಆತ್ಮವಿಶ್ವಾಸ ಕುಗ್ಗಿತ್ತು. ಈ ಸಂದರ್ಭದಲ್ಲಿ ತಾನು ವಿಶ್ರಾಂತಿ ಪಡೆಯುವುದು ಸೂಕ್ತವಲ್ಲ. ತಂಡದ ಜೊತೆಗಿರುವ ಅವಶ್ಯಕತೆ ಇದೆ ಎಂದು ವಿಶ್ರಾಂತಿ ಪ್ಲಾನ್ ಬದಲಿಸಿ, ವೆಸ್ಟ್ ಇಂಡೀಸ್ ಪ್ರವಾಸದ ಆಯ್ಕೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಕೊಹ್ಲಿ ಆಪ್ತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ವಿಂಡೀಸ್ ಪ್ರವಾಸಕ್ಕೂ ಮುನ್ನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ
ವಿಶ್ವಕಪ್ ಟೂರ್ನಿ ಬಳಿಕ ವಿಶ್ರಾಂತಿಗೆ ಜಾರಿದ್ದ ಟೀಂ ಇಂಡಿಯಾ, ಆಗಸ್ಟ್ 3 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಆಡಲಿದೆ. 3 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯದ ಸರಣಿಯಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇನ್ನು ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸೇನಾ ತರಬೇತಿ ಕಾರಣದಿಂದ, ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.