ಬೆಂಗಳೂರಲ್ಲಿಂದು ಕೊಹ್ಲಿ vs ಧೋನಿ ಫೈಟ್

By Web DeskFirst Published Apr 21, 2019, 1:05 PM IST
Highlights

ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿಂದು ಹಾಲಿ ಮತ್ತು ಮಾಜಿ ಟೀಂ ಇಂಡಿಯಾ ನಾಯಕರ ನಡುವಿನ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಚೆಪಾಕ್ ಸೋಲಿನ ಸೇಡು ತೀರಿಸಿಕೊಳ್ಳಲು ವಿರಾಟ್ ಪಡೆ ರೆಡಿಯಾಗಿದೆ.

ಬೆಂಗಳೂರು[ಏ.21]: ಭಾರತ ಕ್ರಿಕೆಟ್‌ ತಂಡದ ಹಾಲಿ ಹಾಗೂ ಮಾಜಿ ನಾಯಕರು ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದಾರೆ. ವಿರಾಟ್‌ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡವನ್ನು ಸೋಲಿಸಿ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತ ಪಡಿಸಿಕೊಳ್ಳಲು ಎಂ.ಎಸ್‌.ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಎದುರು ನೋಡುತ್ತಿದೆ.

ಈ ಆವೃತ್ತಿಯಲ್ಲಿ ಕೇವಲ 2 ಸೋಲು ಕಂಡಿರುವ ಚೆನ್ನೈ, 14 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಚೆನ್ನೈ 16 ಅಂಕ ಗಳಿಸಲಿದ್ದು, ಅಗ್ರ 4ರಲ್ಲಿ ಸ್ಥಾನ ಖಚಿತವಾಗಲಿದೆ. ಮತ್ತೊಂದೆಡೆ ಕೇವಲ 2 ಗೆಲುವು ಸಾಧಿಸಿರುವ ಆರ್‌ಸಿಬಿ, ಪ್ಲೇ-ಆಫ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಮುಂದಿನ ಐದೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ. 5ಕ್ಕೆ 5ರಲ್ಲಿ ಗೆದ್ದರೂ, ಪ್ಲೇ-ಆಫ್‌ನಲ್ಲಿ ಸ್ಥಾನ ಸಿಗುವುದು ಖಚಿತವಿಲ್ಲ. ಆದರೂ ಆರ್‌ಸಿಬಿ ಹೋರಾಟ ಮುಂದುವರಿಸಬೇಕಿದೆ.

ಕೆಕೆಆರ್‌ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ರಸೆಲ್ ಅಸಮಾಧಾನ..?

ಧೋನಿ, ಎಬಿಡಿ ಫಿಟ್‌?: ಚೆನ್ನೈ ನಾಯಕ ಧೋನಿ, ಬೆನ್ನು ನೋವಿನ ಕಾರಣ ಸನ್‌ರೈಸರ್ಸ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಅನಾರೋಗ್ಯದ ಕಾರಣ, ಎಬಿ ಡಿವಿಲಿಯ​ರ್ಸ್ ಕೆಕೆಆರ್‌ ವಿರುದ್ಧದ ಪಂದ್ಯವನ್ನು ಆಡಿರಲಿಲ್ಲ. ಈ ಇಬ್ಬರು ಭಾನುವಾರದ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆ ಇದೆ.

ವಿರಾಟ್‌ ಕೊಹ್ಲಿ ಜತೆ ಮೋಯಿನ್‌ ಅಲಿ ಸಹ ಸ್ಥಿರತೆ ಕಂಡುಕೊಂಡಿರುವುದು ಆರ್‌ಸಿಬಿ ಆತ್ಮವಿಶ್ವಾಸ ಹೆಚ್ಚಿಸಿದೆ. ಡೇಲ್‌ ಸ್ಟೇನ್‌ ತಂಡದ ಬೌಲಿಂಗ್‌ಗೆ ಬಲ ತುಂಬಿದ್ದಾರೆಯಾದರೂ, ಮೊಹಮದ್‌ ಸಿರಾಜ್‌ ದುಬಾರಿಯಾಗುತ್ತಲೇ ಇದ್ದಾರೆ.

ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ದೌರ್ಬಲ್ಯಗಳೇನು ಎನ್ನುವುದು ತಿಳಿದಿದ್ದವು. ಆರ್‌ಸಿಬಿ, ಸಿಎಸ್‌ಕೆ ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರರೂಪಿಸುವುದರ ಜತೆಗೆ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕಿದೆ.

ಪಿಚ್‌ ರಿಪೋರ್ಟ್‌

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ರನ್‌ ಹೊಳೆ ಹರಿಯಲಿದೆ. ಈ ಆವೃತ್ತಿಯಲ್ಲಿ ನಡೆದಿರುವ 3 ಪಂದ್ಯಗಳಲ್ಲಿ 2ರಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. 2 ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಸೋತಿದೆ. ಹೀಗಾಗಿ ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ. ವೇಗಿಗಳಿಗೆ ಪಿಚ್‌ ಹೆಚ್ಚಿನ ನೆರವು ನೀಡಲಿದೆ.

ಪಂದ್ಯಕ್ಕೆ ಮಳೆ ಭೀತಿ

ಆರ್‌ಸಿಬಿ ಹಾಗೂ ಚೆನ್ನೈ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್‌-ಏರ್‌ ವ್ಯವಸ್ಥೆ ಇರುವ ಕಾರಣ, ಮಳೆ ನಿಂತ 20 ನಿಮಿಷಗಳಲ್ಲಿ ಆಟ ಆರಂಭಿಸಬಹುದಾಗಿದೆ.


ಒಟ್ಟು ಮುಖಾಮುಖಿ: 23

ಆರ್‌ಸಿಬಿ: 07

ಚೆನ್ನೈ: 15

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಪಾರ್ಥೀವ್‌ ಪಟೇಲ್‌, ವಿರಾಟ್‌ ಕೊಹ್ಲಿ(ನಾಯಕ), ಎಬಿ ಡಿವಿಲಿಯ​ರ್‍ಸ್, ಮೋಯಿನ್‌ ಅಲಿ, ಮಾರ್ಕಸ್‌ ಸ್ಟೋಯ್ನಿಸ್‌, ಅಕ್‌್ಷದೀಪ್‌ ನಾಥ್‌, ಪವನ್‌ ನೇಗಿ, ಡೇಲ್‌ ಸ್ಟೇನ್‌, ನವ್‌ದೀಪ್‌ ಸೈನಿ, ಮೊಹಮದ್‌ ಸಿರಾಜ್‌, ಯಜುವೇಂದ್ರ ಚಹಲ್‌.

ಚೆನ್ನೈ: ಶೇನ್‌ ವಾಟ್ಸನ್‌, ಫಾಫ್‌ ಡುಪ್ಲೆಸಿ, ಸುರೇಶ್‌ ರೈನಾ, ಅಂಬಟಿ ರಾಯುಡು, ಎಂ.ಎಸ್‌.ಧೋನಿ(ನಾಯಕ), ಕೇದಾರ್‌ ಜಾಧವ್‌, ರವೀಂದ್ರ ಜಡೇಜಾ, ಕಣ್‌ರ್‍ ಶರ್ಮಾ, ಇಮ್ರಾನ್‌ ತಾಹಿರ್‌, ಶಾರ್ದೂಲ್‌ ಠಾಕೂರ್‌, ದೀಪಕ್‌ ಚಾಹರ್‌.

ಸ್ಥಳ: ಬೆಂಗಳೂರು
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

click me!