ವಿರಾಟ್ ಕೊಹ್ಲಿಗೆ 5ನೇ ಬಾರಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ

First Published Jun 13, 2018, 2:23 PM IST
Highlights

ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. 2016-17 ಹಾಗೂ 2017-18ರ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿ, ಪ್ರಶಸ್ತಿ ಪಡೆದ ಟೀಂ ಇಂಡಿಯಾ ಕ್ರಿಕೆಟ್ ಸಾಧಕರು ಯಾರು? ಇಲ್ಲಿದೆ ವಿವರ.

ಬೆಂಗಳೂರು(ಜೂನ್.13): ಟೀಂ ಇಂಡಿಯಾ ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದ ಕ್ರಿಕೆಟಿಗರಿಗೆ ಬಿಸಿಸಿಐ ಪ್ರಶಸ್ತಿ ಪ್ರಧಾನ ಮಾಡಿತು. ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು ವಾರ್ಷಿಕ ಪ್ರಶಸ್ತಿ ಪಡೆದು ಸಂಭ್ರಮಿಸಿದರು.

2016-17 ಹಾಗೂ 2017-18ರ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಾಯಕ ವಿರಾಟ್ ಕೊಹ್ಲಿ ವರ್ಷದ ಶ್ರೇಷ್ಠ ಕ್ರಿಕೆಟಿಗ ಪಾಲಿ ಉಮ್ರಿಗರ್ ಪ್ರಶಸ್ತಿ ಪಡೆದರು. ಈ ಮೂಲಕ 5 ಬಾರಿ ಪಾಲಿ ಉಮ್ರಿಗರ್ ಪ್ರಶಸ್ತಿ ಪಡೆದ ಸಾಧನೆ ಮಾಡಿದರು.

ಅಂಶುಮಾನ್ ಗಾಯಕ್ವಾಡ್ ಹಾಗೂ ಮಹಿಳಾ ಕ್ರಿಕೆಟರ್ ಸುಧಾ ಶಾ, ಜೀವಮಾನ ಶ್ರೇಷ್ಠ ಸಾಧನೆಗೆ ನೀಡುವ ಸಿಕೆ ನಾಯ್ಡು ಪ್ರಶಸ್ತಿ ಪಡೆದರು. ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜಲಜ್ ಸಕ್ಸೇನಾ ಹಾಗೂ ಪರ್ವೇಜ್ ರಸೂಲ್ ಆಲ್‌ರೌಂಡರ್ ಆಟಗಾರ ಪ್ರಶಸ್ತಿ ಪಡೆದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರುನಾಲ್ ಪಾಂಡ್ಯಾಗೂ ಪ್ರಶಸ್ತಿ ಸಿಕ್ಕಿದೆ. ಆದರೆ ಪಾಂಡ್ಯ ಭಾರತ ಎ ತಂಡದ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿರೋ ಕಾರಣ ಸಮಾರಂಭಕ್ಕೆ ಗೈರಾಗಿದ್ದರು.

2017-18ರ ಸಾಲಿನ ರಣಜಿ ಟ್ರೋಫಿಯಲ್ಲಿ ಗರಿಷ್ಠ ರನ್ ಸಿಡಿಸಿದ ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಮಾಧವ್ ರಾವ್ ಸಿಂಧಿಯಾ ಪ್ರಶಸ್ತಿ ನೀಡಲಾಯಿತು. ಕಳೆದ ವರ್ಷ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಫೈನಲ್ ಹಾದಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹರ್ಮನ್‌ಪ್ರೀತ್ ಕೌರ್‌ ಹಾಗೂ ಸ್ಮೃತಿ ಮಂದನಾಗೆ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ನೀಡಲಾಯಿತು.

ಸಮಾರಂಭದ  ಪ್ರಮುಖ ಅಟ್ರಾಕ್ಶನ್ ಎಂದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ. ಬಿಸಿಸಿಐ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದ ಈ ಜೋಡಿ, ಎಲ್ಲರ ಕೇಂದ್ರಬಿಂದುವಾಗಿದ್ದರು. 

click me!