US Open 2025: ಯಾನಿಕ್ ಸಿನ್ನರ್ ಸೆಮೀಸ್‌ಗೆ, ಇಗಾ ಸ್ವಿಯಾಟೆಕ್ ಮನೆಗೆ!

Published : Sep 05, 2025, 09:07 AM IST
Jannik Sinner, Amanda Anisimova, and Naomi Osaka

ಸಾರಾಂಶ

ಯುಎಸ್ ಓಪನ್‌ನಲ್ಲಿ ಸಿನ್ನರ್ ಸೆಮಿಫೈನಲ್ ತಲುಪಿದರೆ, ಹಾಲಿ ಚಾಂಪಿಯನ್ ಸ್ವಿಯಾಟೆಕ್ ಸೋಲನುಭವಿಸಿದ್ದಾರೆ. ಯೂಕಿ ಭಾಂಬ್ರಿ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ನ್ಯೂಯಾರ್ಕ್: ಯುಎಸ್‌ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್, ವಿಶ್ವ ನಂ.1 ಆಟಗಾರ ಯಾನಿಕ್ ಸಿನ್ನರ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ 2022ರ ಚಾಂಪಿಯನ್ ಇಗಾ ಸ್ವಿಯಾಟೆಕ್ ಸೋತು ಹೊರಬಿದ್ದಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಇಟಲಿಯ ಅಗ್ರ ಶ್ರೇಯಾಂಕಿತ ಸಿನ್ನರ್, ತಮ್ಮ ದೇಶದವರೇ ಆದ ಲೊರೆಂಜೊ ಮುಸೆಟ್ಟಿ ವಿರುದ್ಧ 6-1, 6-4, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿ, ಸತತ 5ನೇ ಬಾರಿ ಗ್ರ್ಯಾನ್‌ಸ್ಲಾಂ ಸೆಮಿಫೈನಲ್‌ಗೇರಿದರು. ಈ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿರುವ ಸಿನ್ನರ್‌ಗೆ ಸೆಮಿಫೈನಲ್‌ನಲ್ಲಿ ಕೆನಡಾದ ಫೆಲಿಕ್ಸ್ ಅಲಿಯಾಸಿಮ್ ಸವಾಲು ಎದುರಾಗಲಿದೆ. ಕ್ವಾರ್ಟರ್‌ನಲ್ಲಿ 25ನೇ ಶ್ರೇಯಾಂಕಿತ ಫೆಲಿಕ್ಸ್, ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ವಿರುದ್ದ 4-6, 7-6(7), 7-5, 7-6(4) ಸೆಟ್‌ಗಳಲ್ಲಿ ಗೆದ್ದರು

ಸ್ವಿಯಾಟೆಕ್ ಔಟ್: 6 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ, ಪೋಲೆಂಡ್‌ನ ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ 8ನೇ ಶ್ರೇಯಾಂಕಿತ ಅಮಂಡಾ ಅನಿಸಿಮೋವಾ ವಿರುದ್ಧ 4-6, 3-6 ನೇರ ಸೆಟ್‌ಗಳಲ್ಲಿ ಸೋಲನುಭವಿಸಿದರು. ಇತ್ತೀಚೆಗಷ್ಟೇ ವಿಂಬಲ್ಡನ್ ಫೈನಲ್‌ಗೇರಿ ರನ್ನರ್-ಅಪ್ ಆಗಿದ್ದ 24 ವರ್ಷದ ಅಮಂಡಾ, ಇದೇ ಮೊದಲ ಬಾರಿ ಯುಎಸ್‌ ಓಪನ್ ಸೆಮಿಫೈನಲ್‌ಗೇರಿದ್ದಾರೆ.

ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ 2018, 2020ರ ಚಾಂಪಿಯನ್, ಜಪಾನ್‌ನ ನವೊಮಿ ಒಸಾಕ ಅವರು ಚೆಕ್ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ವಿರುದ್ಧ 6-4, 7-6(7/3) ಸೆಟ್ ಗಳಲ್ಲಿ ಗೆದ್ದು ಸೆಮೀಸ್‌ಗೇರಿದರು. ಸೆಮೀಸ್‌ನಲ್ಲಿ ಒಸಾಕಗೆ ಅಮಂಡಾ ಸವಾಲು ಎದುರಾಗಲಿದೆ.

ಚೊಚ್ಚಲ ಗ್ರ್ಯಾನ್‌ಸ್ಲಾಂ ಸೆಮಿಗೆ ಯೂಕಿ ಭಾಂಬ್ರಿ

ಭಾರತದ ತಾರಾ ಟೆನಿಸಿಗ ಯೂಕಿ ಭಾಂಬ್ರಿ ತಮ್ಮ ಅಭೂತಪೂರ್ವ ಪ್ರದರ್ಶನ ಮುಂದುವರಿಸಿದ್ದು, ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಯುಎಸ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ನ್ಯೂಜಿಲೆಂಡ್‌ನ ಮೈಕಲ್‌ ವೇನಸ್‌ ಜೊತೆಗೂಡಿ ಆಡುತ್ತಿರುವ ಯೂಕಿ, ಕ್ವಾರ್ಟರ್‌ ಫೈನಲ್‌ನಲ್ಲಿ 11ನೇ ಶ್ರೇಯಾಂಕಿತ ಕ್ರೊವೇಷಿಯಾದ ನಿಕೋಲಾ ಮೆಕ್ಟಿಕ್‌-ಅಮೆರಿಕದ ರಾಜೀವ್‌ ರಾಮ್‌ ಜೋಡಿ ವಿರುದ್ಧ 6-3, 6-7(8), 6-3 ಸೆಟ್‌ಗಳಲ್ಲಿ ಜಯಗಳಿಸಿದರು. ಸೆಮಿಫೈನಲ್‌ನಲ್ಲಿ ಇಂಡೋ-ಕಿವೀಸ್‌ ಜೋಡಿಗೆ ಬ್ರಿಟನ್‌ನ ಜೋ ಸಲಿಸ್ಬರಿ-ನೀಲ್‌ ಸ್ಕುಪ್ಸ್ಕಿ ಜೋಡಿ ಸವಾಲು ಎದುರಾಗಲಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!