
ಮುಂಬೈ: ಟೀಂ ಇಂಡಿಯಾ ಅನುಭವಿ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ತಮ್ಮ ಸುದೀರ್ಘ 25 ವರ್ಷಗಳ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಪರ 22 ಟೆಸ್ಟ್, 36 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿರುವ ಅಮಿತ್ ಮಿಶ್ರಾ ಕ್ರಮವಾಗಿ 76, 64 ಹಾಗೂ 16 ವಿಕೆಟ್ ಕಬಳಿಸಿದ್ದಾರೆ.
ಗಾಯದ ಸಮಸ್ಯೆ ಹಾಗೂ ಮುಂಬರುವ ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ತಾವು ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿರುವುದಾಗಿ ಅಮಿತ್ ಮಿಶ್ರಾ ಹೇಳಿದ್ದಾರೆ. 'ನನ್ನ ಕ್ರಿಕೆಟ್ ಜೀವನದ ಈ 25 ವರ್ಷಗಳು ಸ್ಮರಣೀಯವಾಗಿತ್ತು. ಇಷ್ಟು ದಿನ ನನ್ನೊಂದಿಗಿದ್ದ ಬಿಸಿಸಿಐ, ಆಡಳಿತ, ಹರಿಯಾಣ ಕ್ರಿಕೆಟ್ ಸಂಸ್ಥೆ, ಸಹಾಯಕ ಸಿಬ್ಬಂದಿ, ನನ್ನ ಸಹೋದ್ಯೋಗಿಗಳು ಮತ್ತು ನನ್ನ ಕುಟುಂಬ ಸದಸ್ಯರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ.' ಎಂದು ಲೆಗ್‌ಸ್ಪಿನ್ನರ್ ಹೇಳಿದ್ದಾರೆ.
ನಾನು ಆಡಿದಾಗಲೆಲ್ಲಾ ಮತ್ತು ಎಲ್ಲೆಲ್ಲಿ ಆಟವಾಡಿದರೂ ನನ್ನ ಜರ್ನಿಯನ್ನು ಸ್ಮರಣೀಯವಾಗಿಸಿದ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಕ್ರಿಕೆಟ್ ನನಗೆ ಅಸಂಖ್ಯಾತ ನೆನಪುಗಳು ಮತ್ತು ಅಮೂಲ್ಯವಾದ ಕಲಿಕೆಗಳನ್ನು ನೀಡಿದೆ. ಮೈದಾನದಲ್ಲಿನ ಪ್ರತಿ ಕ್ಷಣವೂ ನಾನು ಜೀವನಪರ್ಯಂತ ನೆನಪಿನಲ್ಲಿಟ್ಟುಕೊಳ್ಳುವ ನೆನಪು ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.
2003ರಲ್ಲಿ ಭಾರತ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅಮಿತ್ ಮಿಶ್ರಾ, ಭಾರತ ಟೆಸ್ಟ್ ತಂಡಕ್ಕೆ ಎಂಟ್ರಿಕೊಡಲು ಬರೋಬ್ಬರಿ 2008ರವರೆಗೆ ಕಾಯಬೇಕಾಯಿತು. 2008ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅಮಿತ್ ಮಿಶ್ರಾ, ತಾವಾಡಿದ ಮೊದಲ ಟೆಸ್ಟ್‌ನಲ್ಲೇ 5 ವಿಕೆಟ್ ಕಬಳಿಸುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದರು.
2013ರಲ್ಲಿ ಜಿಂಬಾಬ್ವೆ ವಿರುದ್ದದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ 18 ವಿಕೆಟ್ ಕಬಳಿಸುವ ಮೂಲಕ ದ್ವಿಪಕ್ಷೀಯ ಸರಣಿಯೊಂದರಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಜಾವಗಲ್ ಶ್ರೀನಾಥ್ ಅವರ ವಿಶ್ವದಾಖಲೆಯನ್ನು ಅಮಿತ್ ಮಿಶ್ರಾ ಸರಿಗಟ್ಟಿದ್ದರು. ಇನ್ನು ಇದಷ್ಟೇ ಅಲ್ಲದೇ 2014ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮಿತ್ ಮಿಶ್ರಾ 10 ವಿಕೆಟ್ ಕಬಳಿಸುವ ಮೂಲಕ ಭಾರತ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಅಮಿತ್ ಮಿಶ್ರಾ 2017ರಲ್ಲಿ ಭಾರತ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇದಾದ ಬಳಿಕವೂ ದೇಶಿ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಮುಂದುವರೆದಿದ್ದರು.
ಐಪಿಎಲ್‌ನಲ್ಲಿ ಅಮಿತ್ ಮಿಶ್ರಾ ಝಲಕ್:
ದೇಶಿ ಕ್ರಿಕೆಟ್‌ನಲ್ಲಿ ಹರ್ಯಾಣ ತಂಡವನ್ನು ಪ್ರತಿನಿಧಿಸಿದ್ದ ಅಮಿತ್ ಮಿಶ್ರಾ, ಐಪಿಎಲ್‌ನಲ್ಲಿ ತಮ್ಮದೇ ಆದ ಝಲಕ್ ಮೂಡಿಸಿದ್ದರು. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ 162 ಪಂದ್ಯಗಳನ್ನಾಡಿ 174 ವಿಕೆಟ್ ಕಬಳಿಸುವ ಮೂಲಕ ಐಪಿಎಲ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅಮಿತ್ ಮಿಶ್ರಾ ಮೂರು ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ.
ಅಮಿತ್ ಮಿಶ್ರಾ ಮೂರು ವಿವಿಧ ತಂಡಗಳ ಪರವಾಗಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. 2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ, 2011ರಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ 2011ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ, ಕೋಚ್ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.