3 ಗಂಟೆ 41 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಮೇಲುಗೈ ಸಾಧಿಸಿದ ಜೋಕೋವಿಚ್, ತಮ್ಮ ಪ್ರಶಸ್ತಿ ಹಾದಿಯಲ್ಲಿ ಬಿಟ್ಟುಕೊಟ್ಟಿದ್ದು ಕೇವಲ 2 ಸೆಟ್‌ಗಳನ್ನಷ್ಟೇ(3ನೇ ಸುತ್ತಿನಲ್ಲಿ ಲಾಸ್ಲೋ ಜೆರೆ ವಿರುದ್ಧ) ಎನ್ನುವುದು ಗಮನಾರ್ಹ.
ನ್ಯೂಯಾರ್ಕ್(ಸೆ.12): ಸಾರ್ವಕಾಲಿಕ ಶ್ರೇಷ್ಠ ಟೆನಿಸಿಗರ ಪಟ್ಟಿಯಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವ ನೋವಾಕ್ ಜೋಕೋವಿಚ್ ಈಗ ಎರಡು ಡಜ಼ನ್ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳ ಒಡೆಯ. ಯುಎಸ್ ಓಪನ್ ಗ್ರ್ಯಾನ್ ಸ್ಲಾಂನ ಪುರುಷರ ಸಿಂಗಲ್ಸ್ ಚಾಂಪಿಯನ್ ಆದ ಸರ್ಬಿಯಾದ ಟೆನಿಸ್ ದೊರೆ, ತಮ್ಮ ಗ್ರ್ಯಾನ್ ಸ್ಲಾಂ ಗೆಲುವುಗಳ ಸಂಖ್ಯೆಯನ್ನು 24ಕ್ಕೆ ಹೆಚ್ಚಿಸಿಕೊಂಡಿದ್ದು, ತಮ್ಮಲ್ಲಿ ಇನ್ನೂ ಗೆಲ್ಲಬೇಕೆಂಬ ಹಸಿವು ಕಡಿಮೆಯಾಗಿಲ್ಲ ಎನ್ನುವುದನ್ನು ತೋರಿಸಿದ್ದಾರೆ.
ಸೋಮವಾರ ಬೆಳಗ್ಗಿನ ಜಾವ(ಭಾರತೀಯ ಕಾಲಮಾನ) ನಡೆದ ಫೈನಲ್‌ನಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 6-3, 7-6(7/5), 6-3 ನೇರ ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದ ಜೋಕೋವಿಚ್, 4ನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟರು.
Novak hits 2️⃣4️⃣
How it sounded on US Open radio 🎙 pic.twitter.com/BPwpFlp0fy
ಮೊದಲ ಸೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಜೋಕೋಗೆ, 1 ಗಂಟೆ 44 ನಿಮಿಷಗಳ ಕಾಲ ನಡೆದ 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಮೆಡ್ವೆಡೆವ್ 6-6 ಗೇಮ್‌ಗಳಲ್ಲಿ ಸಮಬಲ ಸಾಧಿಸಿ, ಸೆಟನ್ನು ಟೈ ಬ್ರೇಕರ್‌ಗೆ ಕೊಂಡೊಯ್ದರೂ ಜೋಕೋಗೆ ಹಿನ್ನಡೆ ಉಂಟು ಮಾಡಲು ಸಾಧ್ಯವಾಗಲಿಲ್ಲ. ಮೊದಲೆರಡು ಸೆಟ್‌ಗಳನ್ನು ವಶಪಡಿಸಿಕೊಂಡಿದ್ದ ವಿಶ್ವ ನಂ.1 ಆಟಗಾರನಿಗೆ 3ನೇ ಸೆಟ್ ಗೆದ್ದು ಚಾಂಪಿಯನ್‌ಶಿಪ್ ತಮ್ಮದಾಗಿಸಿಕೊಳ್ಳಲು ಹೆಚ್ಚು ಕಷ್ಟವಾಗಲಿಲ್ಲ. 5ನೇ ಬಾರಿಗೆ ಗ್ರ್ಯಾನ್ ಸ್ಲಾಂ ಫೈನಲ್‌ನಲ್ಲಿ ಆಡಿದ 27ರ ಮೆಡ್ವೆಡೆವ್ 4ನೇ ಸಲ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.
ತಂದೆಯಾದ ಬುಮ್ರಾಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಪಾಕ್ ವೇಗಿ ಶಾಹೀನ್ ಅಫ್ರಿದಿ..! ಹೃದಯಗೆದ್ದ ವಿಡಿಯೋ ವೈರಲ್
3 ಗಂಟೆ 41 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಮೇಲುಗೈ ಸಾಧಿಸಿದ ಜೋಕೋವಿಚ್, ತಮ್ಮ ಪ್ರಶಸ್ತಿ ಹಾದಿಯಲ್ಲಿ ಬಿಟ್ಟುಕೊಟ್ಟಿದ್ದು ಕೇವಲ 2 ಸೆಟ್‌ಗಳನ್ನಷ್ಟೇ(3ನೇ ಸುತ್ತಿನಲ್ಲಿ ಲಾಸ್ಲೋ ಜೆರೆ ವಿರುದ್ಧ) ಎನ್ನುವುದು ಗಮನಾರ್ಹ.
ಮಾರ್ಗರೆಟ್ ದಾಖಲೆ ಸರಿಗಟ್ಟಿದ ಜೋಕೋ!
ಈ ವರ್ಷ ಫ್ರೆಂಚ್ ಓಪನ್ ಗೆದ್ದು ಪುರುಷರ ಟೆನಿಸ್‌ನಲ್ಲಿ ಅತಿಹೆಚ್ಚು ಗ್ರ್ಯಾನ್ ಸ್ಲಾಂ ಗೆದ್ದ ಆಟಗಾರ ಎನ್ನುವ ದಾಖಲೆ ಬರೆದಿದ್ದ ಜೋಕೋ, ಯುಎಸ್ ಓಪನ್ ಗೆಲ್ಲುವ ಮತ್ತೊಂದು ದಾಖಲೆ ಬರೆದರು. ಅತಿಹೆಚ್ಚು ಗ್ರ್ಯಾನ್ ಸ್ಲಾಂ ಗೆಲುವು ಸಾಧಿಸಿದ ಟೆನಿಸಿಗರ ಪಟ್ಟಿಯಲ್ಲಿ (ಪುರುಷ ಹಾಗೂ ಮಹಿಳೆ) ಆಸ್ಟ್ರೇಲಿಯಾದ ಮಾರ್ಗರೆಟ್ ಕೋರ್ಟ್‌ರ ದಾಖಲೆ ಸರಿಗಟ್ಟಿದರು. ಮಾರ್ಗರೆಟ್ ಸಹ 24 ಗ್ರ್ಯಾನ್ ಸ್ಲಾಂ ಗೆದ್ದಿದ್ದು, ಇದರಲ್ಲಿ 13 ಪ್ರಶಸ್ತಿಗಳ ಗೆಲುವು 1968(ಟೆನಿಸ್‌ನ ಓಪನ್ ಯುಗ)ಕ್ಕೂ ಮೊದಲು ದಾಖಲಾಗಿದ್ದವು. ಇದೇ ವೇಳೆ ಅಮೆರಿಕದ ದಿಗ್ಗಜೆ ಸೆರೆನಾ ವಿಲಿಯಮ್ಸ್ (23 ಗ್ರ್ಯಾನ್ ಸ್ಲಾಂ ಜಯ)ರನ್ನು ಜೋಕೋ ಹಿಂದಿಕ್ಕಿದ್ದಾರೆ.
That's a lot of hardware. 🤯 pic.twitter.com/eRPA0vxNMl
— US Open Tennis (@usopen)4ನೇ ಯುಎಸ್ ಕಿರೀಟ!
ಜೋಕೋವಿಚ್‌ಗೆ ಇದು 4ನೇ ಯುಎಸ್ ಓಪನ್ ಪ್ರಶಸ್ತಿ. 2011ರಲ್ಲಿ ಮೊದಲ ಬಾರಿಗೆ ಅಮೆರಿಕದಲ್ಲಿ ಗ್ರ್ಯಾನ್ ಸ್ಲಾಂ ಗೆದ್ದಿದ್ದ ಜೋಕೋ ಆ ಬಳಿಕ 2015, 2018ರಲ್ಲೂ ಟ್ರೋಫಿ ಎತ್ತಿಹಿಡಿದಿದ್ದರು. ಇದರ ಜೊತೆಗೆ 10 ಬಾರಿ ಆಸ್ಟ್ರೇಲಿಯನ್ ಓಪನ್, 3 ಬಾರಿ ಫ್ರೆಂಚ್ ಓಪನ್, 7 ಬಾರಿ ವಿಂಬಲ್ಡನ್‌ನಲ್ಲೂ ಚಾಂಪಿಯನ್ ಆಗಿದ್ದಾರೆ.
US Open 2023 ಅಮೆರಿಕದ ಕೊಕೊ ಗಾಫ್‌ಗೆ ಒಲಿದ ಚೊಚ್ಚಲ ಯುಎಸ್ ಓಪನ್ ಕಿರೀಟ
ಯುಎಸ್ ಓಪನ್ ಗೆದ್ದ ಅತಿಹಿರಿಯ!
36 ವರ್ಷದ ಜೋಕೋವಿಚ್ ಯುಎಸ್ ಓಪನ್ ಪ್ರಶಸ್ತಿ ಗೆದ್ದ ಅತಿಹಿರಿಯ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. 1970ರಲ್ಲಿ ತಮಗೆ 35 ವರ್ಷ ವಯಸ್ಸಿದ್ದಾಗ ಆಸ್ಟ್ರೇಲಿಯಾದ ಕೆನ್ ರೋಸ್‌ವಾಲ್ ಯುಎಸ್ ಓಪನ್ ಗೆದ್ದು ಬರೆದಿದ್ದ ದಾಖಲೆಯನ್ನು ಜೋಕೋ ಮುರಿದಿದ್ದಾರೆ.
2022ರಲ್ಲಿ ನಿರ್ಬಂಧ, 2023ರಲ್ಲಿ ಪ್ರಶಸ್ತಿ!
ಜೋಕೋವಿಚ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಕಾರಣ 2022ರಲ್ಲಿ ಅವರಿಗೆ ಅಮೆರಿಕಕ್ಕೆ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಆದರೆ 2023ರಲ್ಲಿ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕೋವಿಡ್ ಲಸಿಕೆ ಕಾರಣದಿಂದಲೇ 2022ರಲ್ಲಿ ಆಸ್ಟ್ರೇಲಿಯಾದಿಂದ ಗಡಿಪಾರಾಗಿದ್ದ ಜೋಕೋ, 2023ರಲ್ಲಿ ಅಲ್ಲಿಯೂ ಪ್ರಶಸ್ತಿ ಗೆದ್ದರು ಎನ್ನುವುದನ್ನು ಮರೆಯುವಂತಿಲ್ಲ.
4ನೇ ಬಾರಿಗೆ ಒಂದು ವರ್ಷದಲ್ಲಿ 3 ಗ್ರ್ಯಾನ್‌ಸ್ಲಾಂ ಜಯ: ದಾಖಲೆ!
ಜೋಕೋವಿಚ್ ಈ ವರ್ಷ 3 ಗ್ರ್ಯಾನ್ ಸ್ಲಾಂಗಳನ್ನು ಗೆದ್ದಿದ್ದಾರೆ. ಆಸ್ಟ್ರೇಲಿಯನ್, ಫ್ರೆಂಚ್ ಹಾಗೂ ಯುಎಸ್ ಓಪನ್‌ಗಳಲ್ಲಿ ಚಾಂಪಿಯನ್ ಆದ ಜೋಕೋ, ವಿಂಬಲ್ಡನ್ ಫೈನಲಲ್ಲಿ ಕಾರ್ಲೋಸ್ ಆಲ್ಕರಜ್ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಜೋಕೋವಿಚ್ ಒಂದು ವರ್ಷದಲ್ಲಿ 3 ಗ್ರ್ಯಾನ್‌ಸ್ಲಾಂಗಳನ್ನು ಗೆದ್ದಿರುವುದು ಇದು 4ನೇ ಬಾರಿ. ಈ ಸಾಧನೆ ಮಾಡಿದ ಮೊದಲ ಟೆನಿಸಿಗ ಎನ್ನುವ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.
ಕಳೆದ 3 ವರ್ಷದಲ್ಲಿ 7 ಗ್ರ್ಯಾನ್ ಸ್ಲಾಂ ಜಯ!
ಗೆಲ್ಲಬೇಕೆಂಬ ಛಲ ಇದ್ದವನಿಗೆ ವಯಸ್ಸಿನ ಹಂಗಿಲ್ಲ ಎನ್ನುವ ಮಾತಿನಂತೆ, ಜೋಕೋ ಆಟ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ತೀವ್ರಗೊಳ್ಳುತ್ತಿದೆ. ಕಳೆದ 3 ವರ್ಷದಲ್ಲಿ ನಡೆದಿರುವ ಒಟ್ಟು 12 ಗ್ರ್ಯಾನ್‌ಸ್ಲಾಂಗಳಲ್ಲಿ ಅವರು 7ರಲ್ಲಿ ಚಾಂಪಿಯನ್ ಆಗಿದ್ದಾರೆ. 2022ರ ಆಸ್ಟ್ರೇಲಿಯನ್, ಯುಎಸ್ ಓಪನ್‌ಗಳಿಗೆ ಅವರು ಗೈರಾಗಿದ್ದರು. 2021ರ ಯುಎಸ್ ಓಪನ್, 2023ರ ವಿಂಬಲ್ಡನ್‌ನಲ್ಲಿ ಫೈನಲ್‌ನಲ್ಲಿ ಸೋತಿದ್ದ ಜೋಕೋ, 2022ರ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಹೊರಬಿದ್ದಿದ್ದರು.
19 ವರ್ಷ, 72 ಟೂರ್ನಿ, 24ರಲ್ಲಿ ಚಾಂಪಿಯನ್!
ನೋವಾಕ್ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಂ ಟೂರ್ನಿಗೆ ಪ್ರವೇಶಿಸಿದ್ದು 2005ರ ಆಸ್ಟ್ರೇಲಿಯನ್ ಓಪನ್‌ನಲ್ಲಿ. ಆ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತಿದ್ದರು. 2008ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ಚೊಚ್ಚಲ ಗ್ರ್ಯಾನ್ ಸ್ಲಾಂ ಜಯಿಸಿದ್ದರು. 2005ರಿಂದ 2023ರ ವರೆಗೂ ಒಟ್ಟು 72 ಗ್ರ್ಯಾನ್ ಸ್ಲಾಂ ಟೂರ್ನಿಗಳಲ್ಲಿ ಆಡಿರುವ ಅವರು, 24ರಲ್ಲಿ ಗೆದ್ದಿದ್ದಾರೆ. ಟೆನಿಸ್ ಲೋಕವನ್ನು ಜೋಕೋ ಹೇಗೆ ಆಳುತ್ತಿದ್ದಾರೆ ಎನ್ನುವುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ.
₹24.87 ಕೋಟಿ: ಚಾಂಪಿಯನ್ ಜೋಕೋವಿಚ್‌ಗೆ 30 ಲಕ್ಷ ಅಮೆರಿಕನ್ ಡಾಲರ್ (ಅಂದಾಜು 24.87 ಕೋಟಿ ರು.) ಬಹುಮಾನ ಮೊತ್ತ ದೊರೆಯಿತು.
₹12.43 ಕೋಟಿ: ರನ್ನರ್-ಅಪ್ ಸ್ಥಾನ ಪಡೆದ ಮೆಡ್ವೆಡೆವ್‌ಗೆ 15 ಲಕ್ಷ ಅಮೆರಿಕನ್ ಡಾಲರ್ (ಅಂದಾಜು 12.43 ಕೋಟಿ ರು.) ಬಹುಮಾನ ಮೊತ್ತ ದೊರೆಯಿತು.
24ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲುವಿನ ಬಗ್ಗೆ ನಿಮ್ಮೆಲ್ಲರ ಮುಂದೆ ನಿಂತು ಮಾತನಾಡುತ್ತೇನೆ ಎಂದು ಊಹಿಸಿರಲಿಲ್ಲ. ವಾಸ್ತವದಲ್ಲಿ ಇಂಥದ್ದೊಂದು ಕ್ಷಣ ಬರಲಿದೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. - ನೋವಾಕ್ ಜೋಕೋವಿಚ್