ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದು, 19ನೇ ಗ್ರ್ಯಾಂಡ್‌ಸ್ಲಾಂ ಎತ್ತಿಹಿಡಿಯುವ ತವಕದಲ್ಲಿದ್ದಾರೆ. ಆದರೆ, ರಷ್ಯಾ ಟೆನಿಸಿಗ ಡಾನಿಲ್ ಮೆಡ್ವೆಡೆವ್ ಸ್ಪೇನ್ ಆಟಗಾರನಿಗೆ ಅಡ್ಡಿಯಾಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನ್ಯೂಯಾರ್ಕ್(ಸೆ.08): 18 ಬಾರಿ ಗ್ರ್ಯಾಂಡ್‌ಸ್ಲಾಂ ಚಾಂಪಿಯನ್ ರಾಫೆಲ್ ನಡಾಲ್ ನಿರೀಕ್ಷೆಯಂತೆ ವರ್ಷಾಂತ್ಯದ ಗ್ರ್ಯಾಂಡ್‌ಸ್ಲಾಂ ಟೂರ್ನಿ ಯುಎಸ್ ಓಪನ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಇಟಲಿ ಆಟಗಾರ ಮಟ್ಟೆವೊ ಬೆರೆಟ್ಟಿನಿ ಅವರನ್ನು ಮಣಿಸಿದ ನಡಾಲ್ ಫೈನಲ್‌ಗೆ ಲಗ್ಗೆ ಇಟ್ಟರು.
US ಓಪನ್ 2019: ಹೊರಬಿದ್ದ ರೋಜರ್ ಫೆಡರರ್!
33 ವರ್ಷದ ನಡಾಲ್ 7-6, 6-4, 6-1 ಸೆಟ್‌ಗಳಿಂದ ಬೆರೆಟ್ಟಿನಿ ವಿರುದ್ಧ ಸುಲಭವಾಗಿ ಜಯಿಸಿದರು. 19ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗೆ ಗುರಿಯಿಟ್ಟ ಸ್ಪೇನ್ ಆಟಗಾರ, ಫೈನಲ್‌ನಲ್ಲಿ ರಷ್ಯಾ ಟೆನಿಸಿಗ ಡಾನಿಲ್ ಮೆಡ್ವೆಡೆವ್‌ರನ್ನು ಎದುರಿಸಲಿದ್ದಾರೆ. ‘ಈ ಋುತುವಿನ ಆರಂಭದಲ್ಲಿ ಹಲವು ಸವಾಲನ್ನು ಎದುರಿಸಿದ್ದೇನೆ. ಯುಎಸ್ ಓಪನ್ ಫೈನಲ್‌ಗೇರಿದ್ದು ಬಹಳ ಸಂತಸ ನೀಡಿದೆ’ ಎಂದು 27ನೇ ಬಾರಿಗೆ ಗ್ರ್ಯಾಂಡ್‌ಸ್ಲಾಂ ಫೈನಲ್ ಪ್ರವೇಶಿಸಿದ ನಡಾಲ್ ಹೇಳಿದರು.
ಪ್ರಶಸಿ ಗೆಲ್ಲುವ ನೆಚ್ಚಿನ ಆಟಗಾರರೆನಿಸಿದ್ದ ಜೋಕೋವಿಕ್ ಗಾಯದಿಂದ ಹೊರಬಿದ್ದರೆ, ಗ್ರಿಗರ್ ಡಿಮಿಟ್ರೋವ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ರೋಜರ್ ಫೆಡರರ್ ಸೋಲುಂಡಿದ್ದರು. ಹೀಗಾಗಿ ನಡಾಲ್ ಪ್ರಶಸ್ತಿ ಹಾದಿ ಸುಗಮಗೊಂಡಿದೆ. 20 ಪ್ರಶಸ್ತಿಗಳೊಂದಿಗೆ ಅತಿಹೆಚ್ಚು ಗ್ರ್ಯಾಂಡ್‌ಸ್ಲಾಂ ಗೆದ್ದ ಆಟಗಾರರ ಪಟ್ಟಿಯಲ್ಲಿ ರೋಜರ್ ಫೆಡರರ್ ಮೊದಲ ಸ್ಥಾನದಲ್ಲಿದ್ದು, ನಡಾಲ್ 2ನೇ ಸ್ಥಾನದಲ್ಲಿದ್ದಾರೆ. ಯುಎಸ್ ಓಪನ್ ಗೆದ್ದರೆ ನಡಾಲ್, ಫೆಡರರ್ ಸಮೀಪಕ್ಕೆ ಬರಲಿದ್ದಾರೆ.
ಮೆಡ್ವೆಡೆವ್‌ಗೆ ಚೊಚ್ಚಲ ಪ್ರಶಸ್ತಿ ಗುರಿ
ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೋವ್‌ರನ್ನು 7-6 (7-5), 6-4, 6-3 ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಡಾನಿಲ್ ಮೆಡ್ವೆಡೆವ್ ಇದೇ ಮೊದಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಫೈನಲ್ ಪ್ರವೇಶಿಸಿದರು. ದಿಗ್ಗಜ ಆಟಗಾರ ನಡಾಲ್‌ರನ್ನು ಫೈನಲ್‌ನಲ್ಲಿ ಸೋಲಿಸಿ ಚೊಚ್ಚಲ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗೆ ಮುತ್ತಿಡುವ ಗುರಿ ಹೊಂದಿದ್ದಾರೆ. ಇತ್ತೀಚೆಗೆ ಮಾಂಟ್ರಿಯಲ್ ಮಾಸ್ಟರ್ಸ್ ಫೈನಲ್‌ನಲ್ಲಿ ಮೆಡ್ವೆಡೆವ್‌ರನ್ನು ಮಣಿಸಿ ನಡಾಲ್ ಪ್ರಶಸ್ತಿ ಗೆದ್ದಿದ್ದರು.