US ಓಪನ್ 2019: ಪ್ರಿ ಕ್ವಾರ್ಟರ್‌ಗೆ ಒಸಾಕ, ನಡಾಲ್‌

By Kannadaprabha NewsFirst Published Sep 2, 2019, 11:46 AM IST
Highlights

ಹಾಲಿ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕ ನಿರೀಕ್ಷೆಯಂತೆಯೇ 16ನೇ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಅಮೆರಿಕಾದ 15 ವರ್ಷದ ಆಟಗಾರ್ತಿ ವಿರುದ್ಧ ನೇರ ಸೆಟ್‌ಗಳಲ್ಲಿ ಒಸಾಕ ಜಯಭೇರಿ ಬಾರಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ನ್ಯೂಯಾರ್ಕ್[ಸೆ.02]: ಹಾಲಿ ಚಾಂಪಿಯನ್‌, ವಿಶ್ವ ನಂ.1 ಜಪಾನ್‌ನ ನವೊಮಿ ಒಸಾಕ, ಯುಎಸ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ 16ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಮಹಿಳಾ ಸಿಂಗಲ್ಸ್‌ ವಿಭಾಗದ 3ನೇ ಸುತ್ತಿನಲ್ಲಿ ಒಸಾಕ, ಅಮೆರಿಕದ 15 ವರ್ಷ ವಯಸ್ಸಿನ ಕೋರಿ ಗಫ್‌ ವಿರುದ್ಧ 6-3, 6-0 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

ಅದ್ಭುತ ಆಟದ ಮೂಲಕ ಗಮನಸೆಳೆದಿದ್ದ ಅಮೆರಿಕದ ಟೆನಿಸ್‌ ಆಟಗಾರ್ತಿ ಗಫ್‌, ಸೋತ ಬಳಿಕ ಅಂಕಣದಲ್ಲಿ ಕಣ್ಣೀರು ಹಾಕಿದರು. ವಿಂಬಲ್ಡ್‌ನ್‌ ನಲ್ಲಿಯೂ ಗಫ್‌ ಉತ್ತಮ ಆಟವಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.

US ಓಪನ್ 2019: ಪ್ರಿ ಕ್ವಾರ್ಟರ್‌ಗೆ ಜೋಕೋ, ಫೆಡರರ್‌

ಮತ್ತೊಂದು 3ನೇ ಸುತ್ತಿನ ಪಂದ್ಯದಲ್ಲಿ ಸ್ವಿಜರ್‌ಲೆಂಡ್‌ನ ಬೆಲಿಂದಾ ಬೆನ್ಸಿಕ್‌ ಪ್ರಿ ಕ್ವಾರ್ಟರ್‌ಫೈನಲ್‌ಗೇರಿದರು. ಈಸ್ಟೋನಿಯಾದ ಅನೆಟ್‌ ಕೊಂಟಾವೀಟ್‌ ನಿವೃತ್ತಿ ಪಡೆದಿದ್ದರಿಂದ ಬೆಲಿಂದಾ 4ನೇ ಸುತ್ತಿಗೆ ಪ್ರವೇಶಿಸಿದರು.

ನಡಾಲ್‌ಗೆ ಜಯ:

18 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ಪೇನ್‌ನ ರಾಫೆಲ್‌ ನಡಾಲ್‌, ಪ್ರಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದ 3ನೇ ಸುತ್ತಿನ ಪಂದ್ಯದಲ್ಲಿ ನಡಾಲ್‌, ಶ್ರೇಯಾಂಕ ರಹಿತ ದ.ಕೊರಿಯಾದ ಚಂಗ್‌ ಹ್ಯೂಯಾನ್‌ ವಿರುದ್ಧ 6-3, 6-4, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 4ನೇ ಸುತ್ತಿನಲ್ಲಿ ನಡಾಲ್‌, 2014ರ ಚಾಂಪಿಯನ್‌ ಕ್ರೋವೇಷಿಯಾದ ಮರಿನ್‌ ಸಿಲಿಕ್‌ರನ್ನು ಎದುರಿಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ವಿಶ್ವ ನಂ.6 ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಸ್ಲೋವೇನಿಯಾದ ಆಲ್ಜಾಜ್‌ ಬೆದೆನೆ ಎದುರು 6-7(4-7), 7-6(7-4), 6-3, 7-6(7-3) ಸೆಟ್‌ಗಳಲ್ಲಿ ಪ್ರಯಾಸದ ಗೆಲುವು ಪಡೆದು 4ನೇ ಸುತ್ತಿಗೆ ಪ್ರವೇಶಿಸಿದರು.

ಬೋಪಣ್ಣ ಜೋಡಿಗೆ ಜಯ:

ಭಾರತದ ರೋಹನ್‌ ಬೋಪಣ್ಣ-ಕೆನಡಾದ ಡೆನಿಸ್‌ ಶೆಪವಾಲೊವ್‌ ಜೋಡಿ, 3ನೇ ಸುತ್ತು ಪ್ರವೇಶಿಸಿತು. 2ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಆ್ಯಂಡ್ರೆಸ್‌ ಸೆಪ್ಪಿ ಹಾಗೂ ಮಾರ್ಕೊ ಕೆಚಿನಾಟೊ ಜೋಡಿ ಗಾಯಗೊಂಡು ನಿವೃತ್ತಿ ಪಡೆದಿದ್ದರಿಂದ ಬೋಪಣ್ಣ ಜೋಡಿ ನಿರಾಯಸವಾಗಿ 3ನೇ ಸುತ್ತಿಗೇರಿತು.  ಪ್ರಿ ಕ್ವಾರ್ಟರ್‌ನಲ್ಲಿ ಬೋಪಣ್ಣ ಜೋಡಿ, ಬ್ರಿಟನ್‌ನ ನೀಲ್‌, ಜ್ಯಾಮಿ ಮರ್ರೆ ಜೋಡಿಯನ್ನು ಎದುರಿಸಲಿದೆ.
 

click me!