* ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿಂದು ಭಾರತಕ್ಕೆ ಐತಿಹಾಸಿಕ ಚಿನ್ನದ ನಿರೀಕ್ಷೆ
* 43 ವರ್ಷಗಳಿಂದಲೂ ಟೂರ್ನಿಯಲ್ಲಿ ಆಡುತ್ತಿರುವ ಭಾರತ
* 21ನೇ ಬಾರಿ ಫೈನಲ್ ಆಡುತ್ತಿರುವ ಇಂಡೋನೇಷ್ಯಾದಿಂದ ಭಾರತಕ್ಕೆ ಕಠಿಣ ಸವಾಲು
ಬ್ಯಾಂಕಾಕ್(ಮೇ.15): ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ (Thomas Cup 2022 final) ಇತಿಹಾಸದಲ್ಲೇ ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ಭಾರತ ಪುರುಷರ ತಂಡ ಐತಿಹಾಸಿಕ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದು, ಭಾನುವಾರ ಹಾಲಿ ಚಾಂಪಿಯನ್ ಇಂಡೋನೇಷ್ಯಾ ಸವಾಲನ್ನು ಎದುರಿಸಲಿದೆ. 43 ವರ್ಷಗಳಿಂದಲೂ ಟೂರ್ನಿಯಲ್ಲಿ ಆಡುತ್ತಿರುವ ಭಾರತ ಈ ಬಾರಿ ಚೊಚ್ಚಲ ಪದಕಕ್ಕೆ ಕೊರಳೊಡ್ಡಲಿದೆ.
ಲೀಗ್ ಹಂತದಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದಿದ್ದ ಭಾರತ ಬಳಿಕ ಕೊರಿಯಾ ವಿರುದ್ಧ ಪರಾಭವಗೊಂಡಿತ್ತು. ಆದರೆ ಕ್ವಾರ್ಟರ್ ಫೈನಲ್ ಹಾಗೂ ಸೆಮೀಸ್‌ನಲ್ಲಿ ಕ್ರಮವಾಗಿ ಮಲೇಷ್ಯಾ ಮತ್ತು ಡೆನ್ಮಾರ್ಕ್‌ಗೆ ಸೋಲುಣಿಸಿತ್ತು. ಮತ್ತೊಂದೆಡೆ ದಾಖಲೆಯ 14 ಬಾರಿ ಚಾಂಪಿಯನ್ ಇಂಡೋನೇಷ್ಯಾ ಲೀಗ್‌ನಲ್ಲಿ ಅಜೇಯವಾಗಿ ಉಳಿದಿದ್ದು, ನಾಕೌಟ್‌ನಲ್ಲಿ ಚೀನಾ ಮತ್ತು ಜಪಾನ್ ವಿರುದ್ಧ ಗೆದ್ದಿತ್ತು. 21ನೇ ಬಾರಿ ಫೈನಲ್ ಆಡುತ್ತಿರುವ ಇಂಡೋನೇಷ್ಯಾದಿಂದ ಭಾರತಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ.
ಲಕ್ಷ್ಯ ಸೆನ್ (Lakshya Sen) ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಸೋತಿದ್ದು, ಮಹತ್ವದ ಪಂದ್ಯದಲ್ಲಿ ಗೆಲ್ಲುವ ತವಕದಲ್ಲಿದ್ದಾರೆ. ಕ್ವಾರ್ಟರ್ ಹಾಗೂ ಸೆಮೀಸ್‌ನ ಜಯದ ರೂವಾರಿ ಎಚ್.ಎಸ್.ಪ್ರಣಯ್ ಮತ್ತೊಂದು ಅವಿಸ್ಮರಣೀಯ ಪಂದ್ಯಕ್ಕೆ ಸಜ್ಜಾಗಿದ್ದು, ಕಿದಂಬಿ ಶ್ರೀಕಾಂತ್ ಜೊತೆ ಡಬಲ್ಸ್ ಆಟಗಾರರು ಭಾರತವನ್ನು ಗೆಲ್ಲಿಸುವ ಉತ್ಸಾಹದಲ್ಲಿದ್ದಾರೆ.
ಐತಿಹಾಸಿಕ ಸಾಧನೆ ಮಾಡಿದ ಭಾರತ ಬ್ಯಾಡ್ಮಿಂಟನ್ ತಂಡ, ಥಾಮಸ್ ಕಪ್ ಫೈನಲ್ ಗೆ ಲಗ್ಗೆ!
ಪಂದ್ಯ: ಬೆಳಗ್ಗೆ 11.30ಕ್ಕೆ
ಉಬರ್ ಕಪ್: ಪ್ರಶಸ್ತಿ ಗೆದ್ದ ದಕ್ಷಿಣ ಕೊರಿಯಾ
ಬ್ಯಾಂಕಾಕ್: ಉಬರ್ ಕಪ್ ಮಹಿಳಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ದಕ್ಷಿಣ ಕೊರಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ನಡೆದ ಫೈನಲ್‌ನಲ್ಲಿ 15 ಬಾರಿ ಚಾಂಪಿಯನ್ ಚೀನಾ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿದ ದ.ಕೊರಿಯಾ, 2ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು. 2010ರಲ್ಲಿ ತಂಡ ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. 2-2ರಲ್ಲಿ ಸಮಬಲ ಸಾಧಿಸಿದ್ದ ತಂಡಗಳ ನಡುವಿನ 3ನೇ ಹಾಗೂ ಅಂತಿಮ ಸಿಂಗಲ್ಸ್ ಪಂದ್ಯ ಭಾರಿ ರೋಚಕತೆಯಿಂದ ಕೂಡಿತ್ತು. ವಿಶ್ವ ನಂ.15 ಚೀನಾದ ವಾಂಗ್ ಝೀಹಿ ವಿರುದ್ಧ ವಿಶ್ವ ನಂ.46 ಕೊರಿಯಾದ ಸಿಮ್ ಯು-ಜಿನ್ 28-26, 18-21, 21-8ರಲ್ಲಿ ಗೆದ್ದು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದಿತ್ತು.
ವಿಶ್ವ ಬಾಕ್ಸಿಂಗ್: ನೀತು ಕ್ವಾರ್ಟರ್ ಫೈನಲ್‌ಗೆ
ನವದೆಹಲಿ: ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನೀತು ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆದ 48 ಕೆ.ಜಿ. ವಿಭಾಗದ ಅಂತಿಮ 16ರ ಸುತ್ತಿನ ಸ್ಪರ್ಧೆಯಲ್ಲಿ ನೀತು ಸ್ಪೇನ್‌ನ ಮಾರ್ಟಾ ಲೋಪೆಜ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು. ಶುಕ್ರವಾರ 81 ಕೆ.ಜಿ. ವಿಭಾಗದಲ್ಲಿ ಪೂಜಾ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿದ್ದರು.
ಮಹಿಳಾ ಹಾಕಿ: ರಾಜ್ಯ ತಂಡ ಸೆಮಿಫೈನಲ್‌ಗೆ
ಭೋಪಾಲ್: ರಾಷ್ಟ್ರೀಯ ಹಿರಿಯ ಮಹಿಳೆಯರ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಶನಿವಾರ ಪಂಜಾಬ್ ವಿರುದ್ಧ ನಡೆದ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜ್ಯ ತಂಡ ಶೂಟೌಟ್‌ನಲ್ಲಿ 5-4 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಪಂದ್ಯದ 3ನೇ ನಿಮಿಷದಲ್ಲೇ ಪಂಜಾಬ್ ಗೋಲಿನ ಖಾತೆ ತೆರೆದರೆ, 37ನೇ ನಿಮಿಷದಲ್ಲಿ ನಿಶಾ ಬಾರಿಸಿದ ಗೋಲು ಕರ್ನಾಟಕ ಸಮಬಲ ಸಾಧಿಸಲು ನೆರವಾಯಿತು. ಬಳಿಕ ನಿಗದಿತ ಸಮಯದ ಮುಕ್ತಾಯದವರೆಗೂ ಉಭಯ ತಂಡಗಳಿಂದ ಗೋಲು ದಾಖಲಾಗಲಿಲ್ಲ. ಹೀಗಾಗಿ ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಬೇಕಾಯಿತು. ಮೇ 16ಕ್ಕೆ ಸೆಮಿಫೈನಲ್ ಪಂದ್ಯ ನಡೆಯಲಿವೆ.