#RIPAndrewSymonds: ಸೈಮಂಡ್ಸ್‌ ನಿಧನಕ್ಕೆ ಕಂಬನಿ ಮಿಡಿದ ಹರ್ಭಜನ್ ಸಿಂಗ್‌..!

By Naveen KodaseFirst Published May 15, 2022, 9:35 AM IST
Highlights

* ಕಾರು ಅಪಘಾತದಲ್ಲಿ ಕೊನೆಯುಸಿರೆಳೆದ ಆಂಡ್ರ್ಯೂ ಸೈಮಂಡ್ಸ್

* ಸೈಮಂಡ್ಸ್ ನಿಧನಕ್ಕೆ ಕಂಬನಿ ಮಿಡಿದ ಹರ್ಭಜನ್ ಸಿಂಗ್

*  ಮಂಕಿಗೇಟ್ ಪ್ರಕರಣದಲ್ಲಿ ವಿವಾದ ಮಾಡಿಕೊಂಡಿದ್ದ ಭಜ್ಜಿ-ಸೈಮಂಡ್ಸ್‌

ಬೆಂಗಳೂರು(ಮೇ.15): ಆಸ್ಟ್ರೇಲಿಯಾದ ದಿಗ್ಗಜ ಆಲ್ರೌಂಡರ್‌ ಆಂಡ್ರ್ಯೂ ಸೈಮಂಡ್ಸ್‌ (Andrew Symonds) ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಆಂಡ್ರ್ಯೂ ಸೈಮಂಡ್ಸ್‌ಗೆ 46 ವರ್ಷ ವಯಸ್ಸಾಗಿತ್ತು. ಕ್ವೀನ್ಸ್‌ಲ್ಯಾಂಡ್ ರಾಜ್ಯದ ಟೌನ್ಸ್‌ವಿಲ್ಲೇ ನಗರದ ಹೊರಭಾಗದಲ್ಲಿ ನಡೆದ ಕಾರು ಅಪಘಾತದಲ್ಲಿ ಸೈಮಂಡ್ಸ್‌ ಕೊನೆಯುಸಿರೆಳೆದಿದ್ದಾರೆ. ಆಂಡ್ರ್ಯೂ ಸೈಮಂಡ್ಸ್‌ ಪತ್ನಿ ಲೌರಾ ಹಾಗೂ ಇಬ್ಬರು ಮಕ್ಕಳಾದ ಕ್ಲೋಯ್ ಹಾಗೂ ಬಿಲ್ಲೇಯನ್ನು ಅಗಲಿದ್ದಾರೆ. ಆಂಡ್ರ್ಯೂ ಸೈಮಂಡ್ಸ್‌ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತವಾಗಿದ್ದು, ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಸೈಮಂಡ್ಸ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಆಂಡ್ರ್ಯೂ ಸೈಮಂಡ್ಸ್‌ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಟ್ವೀಟ್ ಮಾಡಿದ ಹರ್ಭಜನ್ ಸಿಂಗ್ (Harbhajan Singh), ಆಂಡ್ರ್ಯೂ ಸೈಮಂಡ್ಸ್‌ ಅವರ ನಿಧನದ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾದೆ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅವರು ನಮ್ಮನ್ನು ಅಗಲಿದ್ದಾರೆ. ಅವರ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಈ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅಗಲಿದ ಆತ್ಮಕ್ಕೆ ಭಾವಪೂರ್ಣ ಶ್ರದ್ದಾಂಜಲಿಗಳು ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Shocked to hear about the sudden demise of Andrew Symonds. Gone too soon. Heartfelt condolences to the family and friends. Prayers for the departed soul 🙏

— Harbhajan Turbanator (@harbhajan_singh)

ದೊಡ್ಡ ಸದ್ದು ಮಾಡಿದ್ದ ಭಜ್ಜಿ-ಸೈಮಂಡ್ಸ್‌ ಮಂಕಿಗೇಟ್‌ ಪ್ರಕರಣ:

2007-08ರಲ್ಲಿ ಅನಿಲ್ ಕುಂಬ್ಳೆ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿತ್ತು. ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಸಿಡ್ನಿ ಮೈದಾನ ಆತಿಥ್ಯವನ್ನು ವಹಿಸಿತ್ತು. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದ ಮೂರನೇ ದಿನ ಬ್ಯಾಟಿಂಗ್ ಮಾಡುತ್ತಿದ್ದ ಹರ್ಭಜನ್ ಸಿಂಗ್ ಹಾಗೂ ಆಸ್ಟ್ರೇಲಿಯಾದ ಆಲ್ರೌಂಡರ್‌ ಆಂಡ್ರ್ಯೂ ಸೈಮಂಡ್ಸ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಸ್ಲೆಡ್ಜಿಂಗ್‌ಗೆ ಹೆಸರುವಾಸಿಯಾದ ಆಸ್ಟ್ರೇಲಿಯನ್ನರು ಎದುರಾಳಿ ಆಟಗಾರರನ್ನು ಕೆಣಕುಕುವುದು ಸಾಮಾನ್ಯ. ಅದೇ ರೀತಿ ಹರ್ಭಜನ್ ಸಿಂಗ್ ಅವರನ್ನು ಸೈಮಂಡ್ಸ್‌ ಕಾಲೆಳೆದಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್, ಅಸ್ಟ್ರೇಲಿಯಾದ ಆಲ್ರೌಂಡರ್‌ ಸೈಮಂಡ್ಸ್ ಅವರನ್ನು ಮಂಕಿ(ಮಂಗ) ಎಂದು ಕರೆದರು ಎಂದು ಕರೆದರು ಎಂದು ಆರೋಪಿಸಲಾಗಿತ್ತು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಆಟಗಾರರನ್ನು ಟೀಂ ಇಂಡಿಯಾ ಕ್ರಿಕೆಟಿಗರು ಮಂಕಿ ಎಂದು ಕಡೆಯುವ ಮೂಲಕ ಜನಾಂಗೀಯ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

Andrew Symonds: ಆಕ್ಸಿಡೆಂಟ್‌ನಲ್ಲಿ ಆಸ್ಟ್ರೇಲಿಯಾ ಮಾಜಿ ಆಲ್ರೌಂಡರ್ ಸೈಮಂಡ್ಸ್ ದುರಂತ ಸಾವು..!

ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿಯೂ ಸೋಲೊಪ್ಪಿಕೊಂಡಿತ್ತು. ಟೀಂ ಇಂಡಿಯಾ ಪರ ಸಚಿನ್ ತೆಂಡುಲ್ಕರ್, ಕೆಚ್ಚೆದೆಯ ಶತಕ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಿರಲಿಲ್ಲ. ಇನ್ನೊಂದೆಡೆ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಶತಕ, ಅರ್ಧಶತಕ ಹಾಗೂ ಬೌಲಿಂಗ್‌ನಲ್ಲಿ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಆಸೀಸ್ ಗೆಲುವಿನಲ್ಲಿ ಸೈಮಂಡ್ಸ್‌ ಮಹತ್ವದ ಪಾತ್ರ ವಹಿಸಿದ್ದರು. ಇನ್ನು ಇದೆಲ್ಲ ವಿವಾದದ ಹೊರತಾಗಿಯೂ ಆಂಡ್ರ್ಯೂ ಸೈಮಂಡ್ಸ್‌ ಹಾಗೂ ಹರ್ಭಜನ್ ಸಿಂಗ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಒಟ್ಟಾಗಿ ಕಣಕ್ಕಿಳಿದು ಗಮನ ಸೆಳೆದಿದ್ದರು.
 

click me!