ವಿಂಡೀಸ್‌ಗೆ ಭಾರತ ತಂಡದ ಆಯ್ಕೆ ಮುಂದಕ್ಕೆ..!

By Web Desk  |  First Published Jul 19, 2019, 10:43 AM IST

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ನಡೆಯಬೇಕಿದ್ದ ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ಮುಂದೂಡಲ್ಪಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ನವದೆಹಲಿ[ಜು.19]: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ , ಏಕದಿನ ಮತ್ತು ಟಿ20 ಪಂದ್ಯ ಗಳ ಸರಣಿಗೆ ಶುಕ್ರವಾರ ನಡೆಯಬೇಕಿದ್ದ ಭಾರತ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ಮುಂದೂಡಲ್ಪಟ್ಟಿದೆ. ಶನಿವಾರ ಅಥವಾ ಭಾನುವಾರ ಆಯ್ಕೆ ಪ್ರಕ್ರಿಯೆ ಸಭೆ ನಡೆಯಬಹುದು ಎನ್ನಲಾಗಿದೆ. 

ವಿರಾಟ್ ಕೊಹ್ಲಿ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ಲಭ್ಯವಿರುವ ಸಾಧ್ಯತೆ ಹೆಚ್ಚಿರುವುದು ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ಮಾಡಲಾದ ಹೊಸ ನಿಯಮದ ಕಾರಣಕ್ಕಾಗಿ ಸಭೆಯನ್ನು ಮುಂದೂಡಲಾಗಿದೆ ಎಂದು ಬಿಸಿಸಿಐ ಮೂಲಗಳು ಹೇಳುತ್ತಿವೆ. ಲಭ್ಯ ಮಾಹಿತಿ ಪ್ರಕಾರ, ನಾಯಕ ಕೊಹ್ಲಿ ಅವರೂ ಸಭೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅಲ್ಲದೆ, ಲೋಧಾ ಸಮಿತಿ ನಿರ್ದೇಶನದಂತೆ ಈವರೆಗೆ ಆಯ್ಕೆ ಸಮಿತಿ ಸಭೆ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಅವರ ಉಪಸ್ಥಿತಿಯಲ್ಲಿ ನಡೆಯುತ್ತಿತ್ತು. ಈಗ ಆಯ್ಕೆ ಸಮಿತಿ ಮುಖ್ಯಸ್ಥರೇ ಆಯ್ಕೆ ಪ್ರಕ್ರಿಯೆ ನಡೆಸಿದರೆ ಸಾಕು ಎಂದು ಸುಪ್ರೀಂ ನೇಮಿತ ಆಡಳಿತ ಸಮಿತಿ (ಸಿಒಎ) ನಿರ್ದೇಶನ ನೀಡಿರುವುದು ಸಣ್ಣ ಗೊಂದಲಕ್ಕೆ ಕಾರಣವಾಗಿದೆ. ಈ ಕಾರಣಗಳಿಗಾಗಿ ಸಭೆಯನ್ನು ಮುಂದೂಡಲಾಯಿತು ಎಂದು ಹೇಳಲಾಗುತ್ತಿದೆ.

Latest Videos

ವಿಶ್ವಕಪ್ ಸೂಪರ್ ಓವರ್ ನೋಡಿ ಜೇಮ್ಸ್ ನೀಶಮ್ ಕೋಚ್ ಸಾವು..!

ಭಾರತ ತಂಡ ಆತಿಥೇಯ ವಿಂಡೀಸ್ ವಿರುದ್ಧ ಆ.3ರಿಂದ 6ರ ಅವಧಿಯಲ್ಲಿ ಮೂರು ಟಿ20, ಆ.8ರಿಂದ 14ರ ಅವಧಿಯಲ್ಲಿ 3 ಏಕದಿನ ಪಂದ್ಯಗಳನ್ನು ಆಡಲಿವೆ. ಆ.22ರಿಂದ ಸೆ.3ರ ಅವಧಿಯಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲಿವೆ. 

ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?: ವಿಂಡೀಸ್ ಪ್ರವಾಸಕ್ಕೆ ಯಾರೆಲ್ಲಾ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಕೊಹ್ಲಿ ಲಭ್ಯತೆ ಅನುಮಾನ ಎನ್ನಲಾಗಿತ್ತು. ಆದರೆ ಮೂಲಗಳ ಪ್ರಕಾರ ಕೊಹ್ಲಿ ಲಭ್ಯ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ವಿಶ್ರಾಂತಿ ಬಯಸಿದಲ್ಲಿ ರೋಹಿತ್ ತಂಡ ಮುನ್ನಡೆಸಲಿದ್ದಾರೆ. 

ಕಪಿಲ್‌ ನೇತೃತ್ವದಲ್ಲಿ ಟೀಂ ಇಂಡಿಯಾ ಕೋಚ್‌ ಆಯ್ಕೆ?

ವಿಶ್ವಕಪ್ ಸೋಲಿನಿಂದ ಕಂಗೆಟ್ಟ ತಂಡಕ್ಕೆ ಮರುಜೀವ ತುಂಬುವ ನಿಟ್ಟಿನಲ್ಲಿ ಕೊಹ್ಲಿ ಉಪಸ್ಥಿತಿ ಬಹಳ ಮುಖ್ಯವಾಗಿದ್ದು, ಆ ಕಾರಣಕ್ಕಾಗಿಯೇ ವಿಶ್ರಾಂತಿ ಪಡೆಯದಿರುವ ಸಾಧ್ಯತೆ ಹೆಚ್ಚಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಗಾಯಗೊಂಡಿದ್ದ ಧವನ್ ಫಿಟ್ ಆಗದೇ ಇದ್ದಲ್ಲಿ ರಿಷಬ್ ಪಂತ್ ಅವರನ್ನೇ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಭವಿಷ್ಯದ ವಿಕೆಟ್ ಕೀಪರ್ ಆಗಿಯೂ ಪಂತ್ ಆಯ್ಕೆ ಸೂಕ್ತ ಎಂಬ ನಿರ್ಧಾರ ತೆಗೆದುಕೊಳ್ಳಬಹುದು. ಧೋನಿ ಬದಲಾಗಿ ಪಂತ್‌ರನ್ನು ಮುನ್ನಲೆಗೆ ತರುವ ನಿಟ್ಟಿನಲ್ಲಿ ಯೋಚಿಸಿದರೂ ಅಚ್ಚರಿ ಇಲ್ಲ. ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದ ಕಳಪೆ ಪ್ರದರ್ಶನ ಗಮನದಲ್ಲಿರಿಸಿಕೊಂಡು ಇನ್ನಷ್ಟು ಬಲ ತುಂಬಲು ಚಿಂತಿಸಿದಲ್ಲಿ 

ಕರ್ನಾಟಕದ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಹಾಗೂ ಮುಂಬೈನ ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡುವ ಸಾಧ್ಯತೆಯಿದೆ. ಗಾಯಾಳು ಪೃಥ್ವಿ ಶಾ ಇನ್ನೂ ಚೇತರಿಸಿಕೊಂಡಿಲ್ಲ. ಕಳೆದ ವರ್ಷ ವಿಂಡೀಸ್ ಪ್ರವಾಸದ ವೇಳೆ ಭಾರತ ‘ಎ’ ಪರ ಉತ್ತಮ ಪ್ರದರ್ಶನ ತೋರಿದ್ದ ಶುಭ್‌ಮನ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ.

click me!