ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ರೆಡಿಯಾಗುವುದರ ಜತೆ ಜತೆಗೆ ಮುಂಬರುವ ಎರಡೆರಡು ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಸೆ.14]: ಬಹು ನಿರೀಕ್ಷಿತ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಇನ್ನೊಂದೇ ದಿನ ಬಾಕಿ ಇದೆ. 3 ಪಂದ್ಯಗಳ ಸರಣಿ ಭಾನುವಾರ ಆರಂಭಗೊಳ್ಳಲಿದ್ದು, ಎರಡೆರೆಡು ವಿಶ್ವಕಪ್ನ ಸಿದ್ಧತೆಗೂ ಚಾಲನೆ ಸಿಗಲಿದೆ. 2020, 2021ರಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಲಿದ್ದು, ಉದ್ಘಾಟನಾ ಆವೃತ್ತಿಯ ಚಾಂಪಿಯನ್ ತಂಡ ಮತ್ತೊಮ್ಮೆ ಪ್ರಶಸ್ತಿ ಎತ್ತಿಹಿಡಿಯುವ ಗುರಿ ಹೊಂದಿದೆ.
ಟಿ20 ಮಾದರಿಗೆ ಬಲಿಷ್ಠ ತಂಡ ಕಟ್ಟುವುದು ಕಷ್ಟದ ಕೆಲಸ. ಈ ಮಾದರಿಯಲ್ಲಿ ಆಟಗಾರರಿಗೆ ಲಯದ ಸಮಸ್ಯೆ ಎದುರಾದರೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಸಮಯ ಸಿಗುವುದಿಲ್ಲ. ವಿರಾಟ್ ಕೊಹ್ಲಿ ಪಡೆಗೆ ಇರುವ ಮತ್ತೊಂದು ಸವಾಲು, ಎರಡು ವಿಭಿನ್ನ ವಾತಾವರಣಕ್ಕೆ ಸರಿಹೊಂದುವ ತಂಡವನ್ನು ಸಿದ್ಧಪಡಿಸುವುದು. 2020ರ ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ಆಸ್ಪ್ರೇಲಿಯಾದಲ್ಲಿ ನಡೆದರೆ, 2021ರ ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ಭಾರತದಲ್ಲಿ ನಿಗದಿಯಾಗಿದೆ. ಎರಡೂ ದೇಶಗಳಲ್ಲಿನ ಪಿಚ್, ಸ್ಥಳೀಯ ವಾತಾವರಣದಲ್ಲಿ ಸಂಪೂರ್ಣ ವ್ಯತ್ಯಾಸವಿರಲಿದ್ದು, ಮೀಸಲು ಪಡೆಯೂ ಬಲಿಷ್ಠವಾಗಿರಬೇಕಿದೆ.
undefined
ಭಾರತ-ಸೌತ್ ಆಫ್ರಿಕಾ ಸರಣಿ; ಯಾರು ಮರೆತಿಲ್ಲ 4 ಅತಿ ದೊಡ್ಡ ವಿವಾದ!
ಕಠಿಣ ಅಭ್ಯಾಸ: ತಂಡದ ನಿಯಂತ್ರಣದಲ್ಲಿರುವುದು ಅಭ್ಯಾಸ ಮಾತ್ರ. ಈ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಪಡೆ ಕಠಿಣ ಪರಿಶ್ರಮ ವಹಿಸುತ್ತಿದೆ. ಮುಂದಿನ ವರ್ಷ ಐಪಿಎಲ್ಗೂ ಮುನ್ನ ಭಾರತ ತಂಡ 17 ಟಿ20 ಪಂದ್ಯಗಳನ್ನು ಆಡಲಿದೆ. 2019ರಲ್ಲೇ 9 ಪಂದ್ಯಗಳು ಇವೆ. ಇತ್ತೀಚೆಗೆ ವೆಸ್ಟ್‌ಇಂಡೀಸ್ ವಿರುದ್ಧ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿ, ಭರ್ಜರಿ ಆರಂಭ ಪಡೆದಿರುವ ಭಾರತ, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡದ ಸವಾಲು ಸ್ವೀಕರಿಸಲು ಸಜ್ಜಾಗಿದೆ.
ಹೊಸ ಹೊಸ ಪ್ರಯೋಗ!: ವಿಶ್ವಕಪ್ಗೆ ಯುವ ಆಟಗಾರರನ್ನು ಬೆಳೆಸುವುದು ನಮ್ಮ ತಕ್ಷಣದ ಯೋಜನೆ ಎಂದು ಪ್ರಧಾನ ಕೋಚ್ ರವಿಶಾಸ್ತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಭಾರತ ತಂಡದಲ್ಲಿ ಈಗಾಗಲೇ ಹಲವು ಪ್ರಯೋಗಗಳು ಶುರುವಾಗಿದೆ. ಬ್ಯಾಟಿಂಗ್‌ಗಿಂತಲೂ ಬೌಲಿಂಗ್ ವಿಭಾಗದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತಿದೆ. ಸತತ 2ನೇ ಸರಣಿಗೆ ಮುಂಚೂಣಿ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಇದರಿಂದ ಹೊಸಬರಿಗೆ ಮತ್ತೊಂದು ಅವಕಾಶ ಸಿಗಲಿದೆ. ಬುಮ್ರಾ ಯಾವತ್ತು ಬೇಕಿದ್ದರೂ ತಂಡ ಕೂಡಿಕೊಂಡ ಪರಿಣಾಮಕಾರಿ ಪ್ರದರ್ಶನ ತೋರಬಲ್ಲ ಆಟಗಾರ.
ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಭುವನೇಶ್ವರ್ ಕುಮಾರ್ ಸಹ ಇಲ್ಲ. ಇದರರ್ಥ ನವ್‌ದೀಪ್ ಸೈನಿ, ದೀಪಕ್ ಚಾಹರ್ ಹಾಗೂ ಖಲೀಲ್ ಅಹ್ಮದ್‌ಗೆ ಹೆಚ್ಚಿನ ಅವಕಾಶಗಳು ಸಿಗಲಿವೆ. ವಿಂಡೀಸ್ ಪ್ರವಾಸದಲ್ಲಿ ಈ ಮೂವರು ಗಮನಾರ್ಹ ಪ್ರದರ್ಶನ ನೀಡಿದ್ದರು.
ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!
ಸ್ಪಿನ್ ವಿಭಾಗದಲ್ಲೂ ಹೊಸತನ ಕಾಣುತ್ತಿದೆ. ಯಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್‌ರನ್ನು ಸರದಿ ಮೇಲೆ ಆಡಿಸಲಾಗುತ್ತಿದೆ. ಹೀಗಾಗಿ ರಾಹುಲ್ ಚಹಾರ್ ಹಾಗೂ ವಾಷಿಂಗ್ಟನ್ ಸುಂದರ್ ಜತೆ ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ಕೃನಾಲ್ ಪಾಂಡ್ಯ ಸಹ ಅವಕಾಶಗಳನ್ನು ಪಡೆಯುತ್ತಿದ್ದಾರೆ. ರಾಹುಲ್ ಚಹಾರ್ ಐಪಿಎಲ್ನಲ್ಲಿ ಅತ್ಯಾಕರ್ಷಕ ಪ್ರದರ್ಶನ ತೋರಿದ ಬಳಿಕ, ವಿಂಡೀಸ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ತಮ್ಮ ಮೇಲೆ ತಂಡಕ್ಕೆ ವಿಶ್ವಾಸ ಹೆಚ್ಚುವಂತೆ ಮಾಡಲು ರಾಹುಲ್ ಎದುರು ನೋಡುತ್ತಿದ್ದಾರೆ. ಶ್ರೇಯಸ್ ಗೋಪಾಲ್, ಮಯಾಂಕ್ ಮಾರ್ಕಂಡೆ ಸಹ ಪೈಪೋಟಿಯಲ್ಲಿದ್ದು, ಟೀಂ ಇಂಡಿಯಾದಲ್ಲಿ ಸ್ಪಿನ್ನರ್‌ಗಳ ಸ್ಥಾನಕ್ಕೆ ಭಾರೀ ಪೈಪೋಟಿ ಇದೆ.
ಬ್ಯಾಟಿಂಗ್ ಸಮಸ್ಯೆಗೆ ಪರಿಹಾರವೇನು?: ಬ್ಯಾಟಿಂಗ್ ವಿಭಾಗ ತಂಡದ ಆಡಳಿತದ ತಲೆನೋವಿಗೆ ಕಾರಣವಾಗಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಸಮತೋಲನವಿಲ್ಲ. ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಹಾಗೂ ಶಿಖರ್ ಧವನ್ ಆರಂಭಿಕರ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದು, ಯಾವ ಸಂಯೋಜನೆಯೊಂದಿಗೆ ಕಣಕ್ಕಿಳಿಯಬೇಕು ಎನ್ನುವ ಗೊಂದಲ ತಂಡಕ್ಕಿದೆ. ಮೂರೂ ಆಟಗಾರರು ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿರುವ ಕಾರಣ, ತಂಡದ ಮೇಲೆ ಒತ್ತಡ ಹೆಚ್ಚುತ್ತಿದೆ.
ಮಧ್ಯಮ ಕ್ರಮಾಂಕದ ಸಮಸ್ಯೆಯೂ ಬಹುವಾಗಿ ಕಾಡುತ್ತಿದೆ. ರಿಷಭ್ ಪಂತ್ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಹಾರ್ದಿಕ್ ಪಾಂಡ್ಯ ಮೇಲೆ ಜವಾಬ್ದಾರಿ ಹೆಚ್ಚುತ್ತಿದ್ದು, ಪ್ರತಿ ಪಂದ್ಯದಲ್ಲೂ ಸ್ಫೋಟಕ ಇನ್ನಿಂಗ್ಸ್ ಆಡುವ ಅನಿವಾರ್ಯತೆಗೆ ಸಿಲುಕುತ್ತಿದ್ದಾರೆ. 5ನೇ ಕ್ರಮಾಂಕಕ್ಕೆ ಮನೀಶ್ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ ಹೆಚ್ಚುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗದಿದ್ದರೂ, ತಂಡದ ಸಿದ್ಧತೆ ಬಗ್ಗೆ ಸುಳಿವು ಸಿಗಲಿದೆ.
ಧೋನಿ 2021ರ ವರೆಗೂ ಆಡ್ತಾರಾ?
ಎಂ.ಎಸ್.ಧೋನಿ ನಿವೃತ್ತಿ ವದಂತಿ ಇದೆಯಾದರೂ, ಕೆಲ ಮೂಲಗಳ ಪ್ರಕಾರ ಅವರು 2020ರ ಟಿ20 ವಿಶ್ವಕಪ್ ವರೆಗೂ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಆದರೆ ಧೋನಿ ವಿಶ್ವಕಪ್ ಆಡಲು ಇಚ್ಛಿಸಿದರೆ 2020ರ ವಿಶ್ವಕಪ್ ಮಾತ್ರವಲ್ಲ, 2021ರ ವಿಶ್ವಕಪ್ ವರೆಗೂ ತಂಡದಲ್ಲಿರಬೇಕಿದೆ. 2020 ಹಾಗೂ 2021ರ ವಿಶ್ವಕಪ್ ನಡುವೆ ಕೇವಲ 11 ತಿಂಗಳು ಮಾತ್ರ ಅಂತರವಿರಲಿದೆ. 2021ರಲ್ಲಿ ನಡೆಯಬೇಕಿದ್ದ ಚಾಂಪಿಯನ್ಸ್ ಟ್ರೋಫಿ ಕಿತ್ತು ಹಾಕಿ ಆ ಜಾಗದಲ್ಲಿ ಟಿ20 ವಿಶ್ವಕಪ್ ನಡೆಸಲಾಗುತ್ತಿದೆ. ಅಲ್ಲದೇ 2023ರಲ್ಲಿ ವಿಶ್ವಕಪ್ ಭಾರತದಲ್ಲೇ ನಡೆಯಲಿರುವ ಕಾರಣ, ಧೋನಿ ಅಷ್ಟು ಸುಲಭವಾಗಿ ತಂಡ ಬಿಡಲು ಸಾಧ್ಯವಾಗುವುದಿಲ್ಲ.