ದೇಸಿ ಲೀಗ್ ಟೂರ್ನಿಗಳ ಪೈಕಿ ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿ ಅತೀ ಹೆಚ್ಚು ವೀಕ್ಷಕರು ಹಾಗೂ ಅದ್ಧೂರಿ ಹೊಂದಿದೆ. ಇತ್ತೀಚಷ್ಟೆ ತಮಿಳುನಾಡು ಟಿ20 ಲೀಗ್ ಮುಕ್ತಾಯಗೊಂಡಿತ್ತು. ಆದರೆ ಈ ಟೂರ್ನಿಯಲ್ಲಿ ಮ್ಯಾಚ್ ನಡಿದಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಇದೀಗ ಬಿಸಿಸಿಐ ತನಿಖೆ ಆರಂಭಿಸಿದೆ.
ನವದೆಹಲಿ/ಚೆನ್ನೈ(ಸೆ.17): ಅನಧಿಕೃತ ಲೀಗ್‌ಗಳಲ್ಲಿ ಫಿಕ್ಸಿಂಗ್ ನಡೆಸುತ್ತಿದ್ದ ಗುಜರಾತ್, ಕೋಲ್ಕತಾ ಮೂಲದ ಕ್ರಿಕೆಟ್ ಬುಕ್ಕಿಗಳು ಈಗ ಬಿಸಿಸಿಐನಿಂದ ಮಾನ್ಯತೆ ಪಡೆದ ಟಿ20 ಲೀಗ್‌ಗಳಿಗೂ ಕಾಲಿಟ್ಟಿದ್ದಾರೆ ಎನ್ನುವ ಆತಂಕಕ್ಕಾಗಿ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಮುಕ್ತಾಯಗೊಂಡಿದ್ದ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್ಪಿಎಲ್) ಟಿ20 ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಅನುಮಾನ ಶುರುವಾಗಿದ್ದು, ಬಿಸಿಸಿಐ ತನಿಖೆ ಆರಂಭಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಬೆಟ್ಟಿಂಗ್ ಪ್ರಕರಣದ ಬಳಿಕ ತಮಿಳುನಾಡು ಕ್ರಿಕೆಟ್‌ಗೆ ಮತ್ತೊಂದು ಕಳಂಕ ಎದುರಾಗಿದೆ.
ಇದನ್ನೂ ಓದಿ: ಫಿಕ್ಸಿಂಗ್: ಪಾಕ್ ಮೂಲದ 3 ಅಂತಾರಾಷ್ಟ್ರೀಯ ಕ್ರಿಕೆಟಿಗರು ಬ್ಯಾನ್!
undefined
ಐಪಿಎಲ್ ಕ್ರಿಕೆಟಿಗ ಸೇರಿದಂತೆ ಕೆಲ ಪ್ರಥಮ ದರ್ಜೆ ಕ್ರಿಕೆಟಿಗರು, ಇಬ್ಬರು ಕೋಚ್‌ಗಳು ಫಿಕ್ಸಿಂಗ್‌ನಲ್ಲಿ ತೊಡಗಿದ್ದಾರೆ ಎನ್ನುವ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಈ ಸಂಬಂಧ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಅಜಿತ್ ಸಿಂಗ್ ಪ್ರತಿಕ್ರಿಯಿಸಿದ್ದು, ‘ಕೆಲ ಆಟಗಾರರು ತಮಗೆ ವಾಟ್ಸ್‌ಆ್ಯಪ್ ಮೂಲಕ ಕೆಲ ಅಪರಿಚಿತ ವ್ಯಕ್ತಿಗಳು ಸಂದೇಶ ಕಳುಹಿಸುತ್ತಿದ್ದಾರೆ ಎಂದು ನಮಗೆ ತಿಳಿಸಿದ್ದಾರೆ. ಯಾರು ಆ ವ್ಯಕ್ತಿಗಳು ಎಂದು ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿದ್ದೇವೆ. ಈ ಪ್ರಕರಣದಲ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟಿಗರಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಮತ್ತೆ ಭುಗಿಲೆದ್ದ ಫಿಕ್ಸಿಂಗ್ - ಮಂಡಳಿ ಅಧ್ಯಕ್ಷನಿಗೆ 10 ವರ್ಷ ನಿಷೇಧ ಶಿಕ್ಷೆ!
ಬಿಸಿಸಿಐ ಅಧಿಕಾರಿಯೊಬ್ಬರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡಿದ್ದು, ‘ಕಳೆದ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಕೊನೆ 3 ಸ್ಥಾನಗಳಲ್ಲಿದ್ದ ತಂಡಗಳ ಪೈಕಿ ಒಂದು ತಂಡದ ಮೇಲೆ ಅನುಮಾನವಿದೆ. ಆ ತಂಡದ ಮಾಲೀಕತ್ವ, ಆಟಗಾರರು ಹಾಗೂ ಕೋಚ್‌ಗಳ ಆಯ್ಕೆ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ’ ಎಂದಿದ್ದಾರೆಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಬುಕ್ಕಿಗಳಿಗೆ ತಂಡ ಬಿಟ್ಟುಕೊಟ್ಟಮಾಲೀಕ!
ಚೆನ್ನೈ, ಆಗ್ರಾ ಹಾಗೂ ಜೈಪುರದಲ್ಲಿ ಸರಣಿ ಸಭೆಗಳ ಬಳಿಕ ತಂಡವೊಂದರ ಮಾಲೀಕ 4 ಕೋಟಿ ಪಡೆದು ತಂಡದ ಸಂಪೂರ್ಣ ನಿರ್ವಹಣೆಯನ್ನು ಬುಕ್ಕಿಗಳಿಗೆ ಬಿಟ್ಟುಕೊಟ್ಟಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಬುಕ್ಕಿಗಳು ತಂಡದ ಕೋಚ್ ಜತೆ ಒಪ್ಪಂದ ಮಾಡಿಕೊಂಡು, ಆತನಿಗೆ ವಜ್ರದ ಸೆಟ್, 25 ಲಕ್ಷ ಹಣ ನೀಡಿ ತಮಗೆ ಬೇಕಾದಂತೆ ತಂಡದ ನಿರ್ವಹಣೆ ನಡೆಸುತ್ತಿದ್ದರು ಎನ್ನಲಾಗಿದೆ. ಕೋಚ್ ಒಂದು ಎಸ್‌ಯುವಿ ಕಾರ್ ಸಹ ಕೇಳಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಫಿಕ್ಸಿಂಗ್ ನಡೆಸಿದ ಶ್ರೀಲಂಕಾದ ಕ್ರಿಕೆಟಿಗ ಸಸ್ಫೆಂಡ್..!
ಆಟಗಾರರ ಜತೆ ಸಂವಹನ ನಡೆಸುವ ವೇಳೆ ಕೋಚ್, ಪಂದ್ಯದಲ್ಲಿ ಇಷ್ಟೇ ರನ್ ಗಳಿಸಬೇಕು. ಯಾವ ಓವರಲ್ಲಿ ಎಷ್ಟುರನ್ ದಾಖಲಿಸಬೇಕು ಎನ್ನುವ ಸೂಚನೆ ನೀಡುತ್ತಿದ್ದರು. ಜತೆಗೆ ಆಟಗಾರರಿಗೆ ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದೆ. ಕೋಚ್ ಜತೆ ಒಬ್ಬ ಪ್ರಥಮ ದರ್ಜೆ ಕ್ರಿಕೆಟಿಗ ಸಹ ಭಾಗಿಯಾಗಿದ್ದಾಗಿ ತಿಳಿದುಬಂದಿದೆ.
‘ಕಳಂಕಿತ ಐಪಿಎಲ್ ತಂಡದೊಂದಿಗಿದ್ದ ಕೋಚ್ ಒಬ್ಬರ ಮೇಲೆ ಬಲವಾದ ಅನುಮಾನವಿದೆ. ಆತ ರಣಜಿ ತಂಡವೊಂದಕ್ಕೂ ಕೋಚ್ ಆಗಿದ್ದ. ಟಿಎನ್‌ಪಿಎಲ್‌ನಲ್ಲಿ ಫಿಕ್ಸಿಂಗ್ ಶಂಕೆಗೆ ಗುರಿಯಾಗಿರುವ ತಂಡದ ಕೋಚ್ ಆಗಿಯೂ ಒಂದು ವರ್ಷ ಕಾರ್ಯನಿರ್ವಹಿಸಿದ್ದ’ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಐಪಿಎಲ್ ಆಟಗಾರನ ಮೇಲೂ ಶಂಕೆ!
ಭ್ರಷ್ಟಾಚಾರ ನಿಗ್ರಹ ಘಟಕ ಕಣ್ಣಿಟ್ಟಿರುವ ಆಟಗಾರನೊಬ್ಬ ಐಪಿಎಲ್ನಲ್ಲಿ ಆಡಿದ ಅನುಭವ ಹೊಂದಿದ್ದು, ತಮಿಳುನಾಡಿನ ಹೆಸರಾಂತ ರಣಜಿ ಕ್ರಿಕೆಟಿಗ ಸಹ ಆಗಿದ್ದಾನೆ ಎನ್ನಲಾಗಿದೆ. ಬುಕ್ಕಿಗಳ ಜತೆ ಕೋಲ್ಕತಾದಲ್ಲಿ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಈ ಆಟಗಾರ, 2019ರ ಆವೃತ್ತಿಗೂ ಮೊದಲೇ ಇತರ ಆಟಗಾರರನ್ನು ಫಿಕ್ಸಿಂಗ್‌ನತ್ತ ಸೆಳೆಯುವ ಯತ್ನ ನಡೆಸಿದ್ದ ಎಂದು ವರದಿಯಲ್ಲಿ ಹೇಳಲಾಗಿದೆ. ಮೂಲಗಳ ಪ್ರಕಾರ, ಬುಕ್ಕಿಗಳು ಹಾಗೂ ಫಿಕ್ಸರ್‌ಗಳೇ ತಂಡದಲ್ಲಿ ಯಾವ ಆಟಗಾರರು ಇರಬೇಕು ಎನ್ನುವುದನ್ನು ನಿರ್ಧರಿಸಿ ಹರಾಜಿನಲ್ಲಿ ಬಿಡ್ ಮಾಡಿದ್ದರು ಎನ್ನಲಾಗಿದೆ.