ಟೀಂ ಇಂದಿಗೆ 12 ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್ 24, 2007ರಲ್ಲಿ ಟಿ20 ವಿಶ್ವಕಪ್ ಜಯಿಸಿ ಮೆರೆದಾಡಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡವನ್ನು ರೋಚಕವಾಗಿ ಮಣಿಸಿದ್ದ ಟೀಂ ಇಂಡಿಯಾ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ವಿಶ್ವಕಪ್ ಗೆಲುವಿನ ಹಿಂದಿರುವ 5 ಆಟಗಾರರನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
ಬೆಂಗಳೂರು[ಸೆ.24]: ಇಂದಿಗೆ ಬರೋಬ್ಬರಿ 12 ವರ್ಷಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದು ಮೆರೆದಾಡಿತ್ತು. ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಭಾರತ ಚುಟುಕು ಕ್ರಿಕೆಟ್ ಸಾಮ್ರಾಟನಾಗಿ ಹೊರಹೊಮ್ಮಿತ್ತು.
ಚೊಚ್ಚಲ ಟಿ20 ವಿಶ್ವಕಪ್ ಗೆದ್ದು 12 ವರ್ಷ, ಚಿಯರ್ಸ್ ಟೀಂ ಇಂಡಿಯಾ..!
undefined
ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹಲವು ಹೆಜ್ಜೆಗುರುತುಗಳನ್ನು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಲ್ ಔಟ್ ಮೂಲಕ ಗೆಲುವಿನ ಖಾತೆ ತೆರೆದರೆ. ಇಂಗ್ಲೆಂಡ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಟೂರ್ನಿಯಲ್ಲಿ ಗೌತಮ್ ಗಂಭೀರ್ ಕೆಚ್ಚೆದೆಯ ಹೋರಾಟ, ಆರ್.ಪಿ ಸಿಂಗ್ ಮಾರಕ ದಾಳಿ ಸೇರಿದಂತೆ ಟೀಂ ಇಂಡಿಯಾ ಸಂಘಟಿತ ಪ್ರದರ್ಶನಕ್ಕೆ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತು. ಸೆಹ್ವಾಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ರೋಹಿತ್ ಶರ್ಮಾ ಪ್ರದರ್ಶನವನ್ನು ಮರೆಯುವಂತಿಲ್ಲ. ಬ್ಯಾಟಿಂಗ್’ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ ಟೆನ್ ಪಟ್ಟಿಯಲ್ಲಿ ಗೌತಮ್ ಗಂಭೀರ್ ಒಬ್ಬರೆ ಸ್ಥಾನಪಡೆದರೆ, ಬೌಲಿಂಗ್’ನಲ್ಲಿ ಆರ್.ಪಿ. ಸಿಂಗ್ ಹಾಗೂ ಇರ್ಫಾನ್ ಪಠಾಣ್ ಮಾತ್ರ ಸ್ಥಾನ ಪಡೆದರೂ ಚಾಂಪಿಯನ್ ಪಟ್ಟ ತಪ್ಪಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.
ಟಿ20 ಪಂದ್ಯದ ಸೋಲಿನ ಬೆನ್ನಲ್ಲೇ ಕೊಹ್ಲಿಗೆ ಮತ್ತೊಂದು ಶಾಕ್!
ಮಹೇಂದ್ರ ಸಿಂಗ್ ಧೋನಿ:
ನಾಯಕನಾದ ಮೊದಲ ಪರೀಕ್ಷೆಯಲ್ಲೇ ಧೋನಿ ಟೀಂ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಅನನುಭವಿ ತಂಡವನ್ನು ಕಟ್ಟಿಕೊಂಡು, ವಿಕೆಟ್ ಕೀಪಿಂಗ್ ಮಾತ್ರವಲ್ಲದೇ ಬ್ಯಾಟಿಂಗ್’ನಲ್ಲೂ ತಂಡಕ್ಕೆ ನೆರವಾಗಿದ್ದರು. ಟೂರ್ನಿಯಲ್ಲಿ 154 ರನ್ ಸಿಡಿಸುವ ಮೂಲಕ ಭಾರತ ಪರ ಗರಿಷ್ಠ ರನ್ ಬಾರಿಸಿದ ಎರಡನೇ ಬ್ಯಾಟ್ಸ್’ಮನ್ ಎನ್ನುವ ದಾಖಲೆ ಧೋನಿ ಹೆಸರಿನಲ್ಲಿದೆ. ಎಂತಹ ಕಠಿಣ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದ ಧೋನಿ, ವಿಶ್ವಕಪ್ ಫೈನಲ್ ಪಂದ್ಯದ ಕೊನೆಯ ಓವರ್’ನಲ್ಲಿ ಅನನುಭವಿ ವೇಗಿ ಜೋಗಿಂದರ್ ಶರ್ಮಾ ಕೈಗೆ ಚಂಡನ್ನಿತ್ತು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಈ ಮೂಲಕ ತಾವೊಬ್ಬ ಕೂಲ್ ಹಾಗೂ ಚಾಣಾಕ್ಷ ನಾಯಕ ಎನ್ನುವುದನ್ನು ಮೊದಲ ಪರೀಕ್ಷೆಯಲ್ಲೇ ಸಾಬೀತು ಮಾಡಿದ್ದರು.
ಗೌತಮ್ ಗಂಭೀರ್:
ಟೀಂ ಇಂಡಿಯಾದ ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಟೂರ್ನಿಯುದ್ಧಕ್ಕೂ ಅಭೂತಪೂರ್ವ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಕರ್ಷಕ 75 ರನ್ ಬಾರಿಸುವ ತಂಡಕ್ಕೆ ಆಸರೆಯಾಗಿದ್ದರು. ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧವೂ ಗಂಭೀರ್ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು.
ಯುವರಾಜ್ ಸಿಂಗ್:
ವಿಶ್ವಕಪ್ ಟೂರ್ನಿಗೂ ಮುನ್ನ ಎಕೈಕ ಟಿ20 ಪಂದ್ಯವನ್ನಾಡಿದ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದ ಯುವಿ ಮೊದಲೆರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ್ದರು. ಸ್ಟುವರ್ಟ್ ಬ್ರಾಡ್ ಬೌಲಿಂಗ್ ನಲ್ಲಿ 6 ಎಸೆತದಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದರು. ಜತೆಗೆ ಅತಿವೇಗದ ಅರ್ಧಶತಕವನ್ನೂ ಪೂರೈಸಿದ್ದರು. ಇನ್ನು ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್’ನಲ್ಲೂ 70 ರನ್ ಚಚ್ಚುವುದರೊಂದಿಗೆ ತಂಡ ಫೈನಲ್ ಪ್ರವೇಶಿಸಲು ಮಹತ್ವದ ಪಾತ್ರ ವಹಿಸಿದ್ದರು.
RP ಸಿಂಗ್:
ಟೀಂ ಇಂಡಿಯಾ ಎಡಗೈ ವೇಗಿ ರುದ್ರ ಪ್ರತಾಪ್ ಸಿಂಗ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಆಗಿ ಹೊರಹೊಮ್ಮಿದ್ದರು. ಟೀಂ ಇಂಡಿಯಾ ಪರ ಗರಿಷ್ಠ[12] ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದ RP ಸಿಂಗ್, ಪಾಕಿಸ್ತಾನ ವಿರುದ್ಧ ಫೈನಲ್’ನಲ್ಲಿ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಪಾಕ್ ಬ್ಯಾಟ್ಸ್’ಮನ್’ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.
ಇರ್ಫಾನ್ ಪಠಾಣ್
ಟೀಂ ಇಂಡಿಯಾದ ಮತ್ತೋರ್ವ ಎಡಗೈ ಮಧ್ಯಮ ವೇಗಿ ಇರ್ಫಾನ್ ಪಠಾಣ್ ಕೂಡಾ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನ ಹೀರೋಗಳಲ್ಲಿ ಒಬ್ಬರು. ಪಾಕಿಸ್ತಾನ ವಿರುದ್ಧದ ಎರಡೂ ಪಂದ್ಯಗಳಲ್ಲೂ ಪಠಾಣ್ ಮಿಂಚಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಕೇವಲ 16 ರನ್ ನೀಡಿ ಮೂರು ವಿಕೆಟ್ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು.
ಟೆಸ್ಟ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಮತ್ತೊಂದು ಹೊಡೆತ!
ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲುವಿನಲ್ಲಿ ಈ ಐವರು ಮಾತ್ರ ಗೆಲುವಿನ ರೂವಾರಿಗಳಲ್ಲ. ಪ್ರತಿಯೊಬ್ಬ ಆಟಗಾರನೂ ತಂಡದ ಗೆಲುವಿಗೆ ಶಕ್ತಿಮೀರಿ ಪ್ರದರ್ಶನ ನೀಡಿದ್ದಾರೆ. ಕನ್ನಡಿಗ ರಾಬಿನ್ ಉತ್ತಪ್ಪ ವಿಶ್ವಕಪ್ ಫೈನಲ್’ನಲ್ಲಿ ಉತ್ತಮವಾಗಿ ಆಡುತ್ತಿದ್ದ ಇಮ್ರಾನ್ ನಜೀರ್ ರನೌಟ್ ಮಾಡಿದ್ದೂ ಪಂದ್ಯದ ದಿಕ್ಕನ್ನೇ ಬದಲಿಸಿತ್ತು. ಒಟ್ಟಾರೆ ಧೋನಿ ನಾಯಕತ್ವ, ಸಾಂಘಿಕ ಪ್ರದರ್ಶನ ಟೀಂ ಇಂಡಿಯಾವನ್ನು ವಿಶ್ವ ಸಾಮ್ರಾಟನನ್ನಾಗಿ ಮೆರೆದಾಡುವಂತೆ ಮಾಡಿತ್ತು. ಟೀಂ ಇಂಡಿಯಾ ಈ ಗೆಲುವು ಐಪಿಎಲ್ ಎನ್ನವ ಮಿಲಿಯನ್ ಡಾಲರ್ ಟೂರ್ನಿ ಉಗಮಕ್ಕೆ ನಾಂದಿ ಹಾಡಿತು.