
ನವದೆಹಲಿ(ಡಿ.03): ನ್ಯಾ. ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ವಿಷಯದಲ್ಲಿ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದ ದೇಶದ 26 ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪೈಕಿ ಒಂದಾಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕೂಡ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ನಡುಗಿಹೋಗಿದೆ.
ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಲೋಧಾ ಸಮಿತಿ ಶಿಫಾರಸು ಕುರಿತು ಬಿಸಿಸಿಐ ಯಾವ ನಡೆ ಅನುಸರಿಸುತ್ತದೋ ಅದೇ ಹಾದಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೂ ನಡೆಯಲಿದೆ ಎಂದು ಹೇಳಿರುವ ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹುದ್ದೆ ಕಳೆದುಕೊಳ್ಳುವುದು ಖಾತ್ರಿಯಾಗಲಿದೆ. ಜತೆಗೆ, ಲೋಧಾ ಸಮಿತಿ ಶಿಫಾರಸುಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಲೇಬೇಕಾದ ಅನಿವಾರ್ಯತೆಗೆ ಅದು ಒಳಗಾಗಿದೆ. ಇನ್ನು, ಅಧ್ಯಕ್ಷ ಅಶೋಕ್ ಆನಂದ್ ಕೂಡ ಕೆಎಸ್‌ಸಿಎಯಿಂದ ಹೊರನಡೆಯಬೇಕಾಗಿದೆ.
ಅಂದಹಾಗೆ ಇಲ್ಲೀವರೆಗೆ ವಿದರ್ಭ, ತ್ರಿಪುರಾ, ಹೈದರಾಬಾದ್ ಹಾಗೂ ರಾಜಸ್ಥಾನ ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಒಪ್ಪಿವೆ. ಈ ಮಧ್ಯೆ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯನ್ನು ಬಿಸಿಸಿಐ ಮಾನ್ಯ ಮಾಡಿಲ್ಲ. ಏಕೆಂದರೆ, ಐಪಿಎಲ್‌ನಲ್ಲಿ ನಡೆಸಿದ ಅವ್ಯವಹಾರದ ಹಿನ್ನೆಲೆಯಲ್ಲಿ ಬಿಸಿಸಿಐನಿಂದ ಆಜೀವ ನಿಷೇಧಕ್ಕೆ ಗುರಿಯಾಗಿ, ಸದ್ಯ ವಿದೇಶದಲ್ಲಿರುವ ಲಲಿತ್ ಮೋದಿ ಇದರ ಅಧ್ಯಕ್ಷರಾಗಿದ್ದಾರೆ.
ಇನ್ನುಳಿದಂತೆ ಕರ್ನಾಟಕ ಸೇರಿದಂತೆ ದೇಶದ 26 ರಾಜ್ಯ ಕ್ರಿಕೆಟ್ ಸಂಸ್ಥೆಗಳು ಶಿಫಾರಸು ವಿರುದ್ಧ ನಿಂತಿದ್ದವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.