
ಹೈದರಾಬಾದ್(ಜ.01): ಚೆನ್ನೈ ಸ್ಮಾಶರ್ಸ್ ತಂಡದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಮೂರನೇ ಆವೃತ್ತಿಯ ಪ್ರಿಮೀಯರ್ ಬ್ಯಾಡ್ಮಿಂಟನ್ ಲೀಗ್'ನ ಮೊದಲ ಪಂದ್ಯದಲ್ಲಿ ಹೈದರಾಬಾದ್ ಹಂಟರ್ಸ್‌ನ ಕರೋಲಿನಾ ಮರಿನ್ ಎದುರು ಪರಾಭವ ಹೊಂದಿದ್ದಾರೆ. ಇದರೊಂದಿಗೆ ಹೈದರಾಬಾದ್ ಹಂಟರ್ಸ್ 1-0 ಮುನ್ನಡೆ ಸಾಧಿಸಿದೆ.
ಇಲ್ಲಿನ ಗಚ್ಚಿಬೌಳಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ದಿನದಾಟದ ಪಂದ್ಯದಲ್ಲಿ ಹೈದರಾಬಾದ್ ತಂಡದ ಕರೋಲಿನಾ ಮರಿನ್ 11-8, 12-14, 11-2 ಗೇಮ್'ಗಳಿಂದ ಚೆನ್ನೈ ತಂಡದ ಸಿಂಧು ಎದುರು ಗೆಲುವು ಸಾಧಿಸಿದರು.
ಪಂದ್ಯದ ಆರಂಭದಿಂದಲೂ ಪ್ರಭಾವಿ ಹೊಡೆತಗಳ ಮೂಲಕ ಗಮನಸೆಳೆದ ಮರಿನ್, ಸಿಂಧು ಅವರನ್ನು ಅಂಕಗಳಿಕೆಯಲ್ಲಿ ಹಿಂದಿಕ್ಕಿದರು. ಒಂದು ಹಂತದಲ್ಲಿ ಮರಿನ್ 2-4ರಿಂದ ಹಿಂದೆ ಬಿದ್ದಿದ್ದರು. ಆದರೆ ನಂತರದ ಆಟದಲ್ಲಿ ಎಚ್ಚೆತ್ತುಕೊಂಡ ಮರಿನ್ 6-4ರಿಂದ ಮುನ್ನಡೆದರು. ಮತ್ತಷ್ಟು ಪ್ರಭಾವಿ ಆಟಕ್ಕೆ ಮುಂದಾದ ಸಿಂಧು 6-6ರಿಂದ ಸಮಬಲ ಸಾಧಿಸಿದರು. ನಂತರ ಮರಿನ್ 8-6, 9-7 ಮತ್ತು 10-7ರ ಗೇಮ್'ಗಳಿಂದ ಮುನ್ನಡೆಯೊಂದಿಗೆ ಸೆಟ್ ಜಯಿಸಿದರು.
ಎರಡನೇ ಗೇಮ್'ನ ಆರಂಭದಲ್ಲಿ ಮರಿನ್ 3-0ಯ ಮುನ್ನಡೆ ಪಡೆದಿದ್ದರು. ನಂತರ ಪ್ರಭಾವಿ ಆಟಕ್ಕೆ ಮುಂದಾದ ಸಿಂಧು ನಿರಂತರವಾಗಿ ಅಂಕಗಳಿಸುತ್ತಾ ಸಾಗಿದರು. ಹಾಗೆ ಅಂತಿಮವಾಗಿ 2 ಪಾಯಿಂಟ್ಸ್‌ಗಳ ಅಂತರದಲ್ಲಿ ಮರಿನ್ ಅವರನ್ನು ಹಿಂದಿಕ್ಕುವ ಮೂಲಕ ತಿರುಗೇಟು ನೀಡಿದರು. ತಲಾ ಒಂದು ಗೇಮ್'ಗಳಲ್ಲಿ ಮುನ್ನಡೆ ಸಾಧಿಸಿದ ಆಟಗಾರ್ತಿಯರಿಗೆ ಮೂರನೇ ಸೆಟ್ ನಿರ್ಣಾಯಕ ಎನಿಸಿತ್ತು.
3ನೇ ಗೇಮ್'ನಲ್ಲಿ ಮರಿನ್ ಆರಂಭದಲ್ಲಿ 6-1ರಿಂದ ಮುನ್ನಡೆ ಕಾಯ್ದುಕೊಂಡರು. ಆನಂತರವೂ ಬಲಿಷ್ಟ ಹೊಡೆತಗಳ ಮೂಲಕ ಸಿಂಧುವನ್ನು ಕಂಗೆಡಿಸಿದ ರಿಯೊ ಒಲಿಂಪಿಕ್ಸ್ ಚಾಂಪಿಯನ್ ಅಂತಿಮವಾಗಿ ಗೆಲುವಿನ ನಗೆ ಬೀರಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.