IPL 2018: ಆರ್’ಸಿಬಿಗಿಂದು ಲಾಸ್ಟ್ ಚಾನ್ಸ್..!

First Published May 7, 2018, 1:28 PM IST
Highlights

ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಸೋತು 3ರಲ್ಲಿ ಗೆದ್ದಿರುವ ಆರ್‌’ಸಿಬಿ ಖಾತೆಯಲ್ಲಿ 6 ಅಂಕಗಳಿದ್ದು, ಮುಂದಿನ ಹಂತದ ಆಸೆ ಜೀವಂತವಾಗಿರಿಸಿ ಕೊಳ್ಳಬೇಕಾಗಿದ್ದರೆ ಇನ್ನುಳಿದ ಐದೂ ಪಂದ್ಯಗಳಲ್ಲಿ ಭಾರೀ ಅಂತರದ ಗೆಲುವು ಸಾಧಿಸಬೇಕಾಗಿದೆ.

ಹೈದರಾಬಾದ್[ಮೇ.07]: ಕಪ್ ನಮ್ದೆ... ಕಪ್ ನಮ್ದೆ... ಎನ್ನುತ್ತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವೀರರು ಇಂದು ಸನ್’ರೈಸರ್ಸ್‌ ಹೈದರಾಬಾದ್ ವಿರುದ್ಧ ಸೆಣಸಾಡಲಿದ್ದು, ಪ್ಲೇ-ಆಫ್ ರೇಸಲ್ಲಿ ಉಳಿಯಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ.
ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಸೋತು 3ರಲ್ಲಿ ಗೆದ್ದಿರುವ ಆರ್‌’ಸಿಬಿ ಖಾತೆಯಲ್ಲಿ 6 ಅಂಕಗಳಿದ್ದು, ಮುಂದಿನ ಹಂತದ ಆಸೆ ಜೀವಂತವಾಗಿರಿಸಿ ಕೊಳ್ಳಬೇಕಾಗಿದ್ದರೆ ಇನ್ನುಳಿದ ಐದೂ ಪಂದ್ಯಗಳಲ್ಲಿ ಭಾರೀ ಅಂತರದ ಗೆಲುವು ಸಾಧಿಸಬೇಕಾಗಿದೆ. ಒಂದೊಮ್ಮೆ ಒಂದೇ ಒಂದು ಪಂದ್ಯ ಸೋತರೂ ಆರ್‌’ಸಿಬಿ ಈ ಆವೃತ್ತಿಯ ಐಪಿಎಲ್‌’ನ ಪ್ರಶಸ್ತಿ ರೇಸ್‌’ನಿಂದ ಹೊರಬೀಳುವುದು ಬಹುತೇಕ ಖಚಿತ. ಮತ್ತೊಂದೆಡೆ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಸನ್‌ರೈಸರ್ಸ್‌, ತನ್ನ ಗೆಲುವಿನ ಓಟ ಮುಂದುವರಿಸಿ ಪ್ಲೇ-ಆಫ್ ಸ್ಥಾನ ಖಚಿತ ಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಆರ್‌ಸಿಬಿಗೆ ಕಾದಿದೆ ಕಠಿಣ ಸವಾಲು: ಬೌಲಿಂಗ್‌’ಗಿಂತ ಬ್ಯಾಟಿಂಗ್ ಅನ್ನೇ ನೆಚ್ಚಿಕೊಂಡಿರುವ ಆರ್‌’ಸಿಬಿಗೆ ಹಿಂದೆಂದಿಗಿಂತ ಇಂದಿನ ಪಂದ್ಯ ಕಠಿಣ ಸವಾಲಾಗಲಿದೆ. ಏಕೆಂದರೆ ಈ ಆವೃತ್ತಿಯಲ್ಲಿ ಅತ್ಯಲ್ಪ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ರೈಸರ್ಸ್‌ ಬೌಲರ್’ಗಳು ತಮ್ಮ ಸಾಮರ್ಥ್ಯವೇನು ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ರಶೀದ್ ಖಾನ್, ಶಕೀಬ್ ಅಲ್ ಹಸನ್, ಸಂದೀಪ್ ಶರ್ಮಾ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದು, ಯಾವುದೇ ಕ್ಷಣದಲ್ಲಿ ಪಂದ್ಯ ಗೆಲ್ಲಿಸುವ ತಾಕತ್ತು ಹೊಂದಿದ್ದಾರೆ.
ಇತ್ತ ಶನಿವಾರ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪಾರ್ಥೀವ್ ಪಟೇಲ್ ಹೊರತು ಪಡಿಸಿ ಬೆಂಗಳೂರಿನ ಉಳಿದೆಲ್ಲಾ ಬ್ಯಾಟ್ಸ್‌’ಮನ್‌’ಗಳು ಎರಡಂಕಿ ಮೊತ್ತ ದಾಟಲು ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌, ಮೆಕ್ಕಲಂ ಮಿಂಚಲೇಬೇಕಿದೆ. ಇವರಿಗೆ ಮನ್‌’ದೀಪ್ ಸಿಂಗ್, ಗ್ರಾಂಡ್ ಹೋಮ್ ಉತ್ತಮ ಸಾಥ್ ನೀಡಬೇಕಿದೆ.
ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡ: ಹೇಲ್ಸ್, ಧವನ್, ವಿಲಿಯಮ್ಸನ್, ಮನೀಶ್ ಪಾಂಡೆ, ಯೂಸುಫ್ ಪಠಾಣ್ ರಂತಹ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಹೈದರಾಬಾದ್ ತಂಡವನ್ನು ಕಟ್ಟಿಹಾಕಬೇಕಿದ್ದರೆ, ಆರ್‌’ಸಿಬಿ ಬೌಲರ್‌ಗಳು ಹೆಚ್ಚುವರಿ ಪರಿಶ್ರಮ ವಹಿಸಬೇಕಿದೆ. ಟಿಮ್ ಸೌಥಿ ಉತ್ತಮ ಲಯದಲ್ಲಿದ್ದು, ಅವರಿಗೆ ಸಿರಾಜ್, ಉಮೇಶ್ ಯಾದವ್ ಹಾಗೂ ಚಹಲ್‌’ರಿಂದ ಬೆಂಬಲ ದೊರೆಯಬೇಕಿದೆ. ಅದರಲ್ಲೂ ಡೆತ್ ಓವರ್‌’ಗಳಲ್ಲಿ ಆರ್’ಸಿಬಿ ಬೌಲರ್‌’ಗಳು ತಮ್ಮ ದಾಳಿಯನ್ನು ಮತ್ತಷ್ಟು ಮೊನಚುಗೊಳಿಸಿಕೊಳ್ಳಬೇಕಿದೆ.
ರೈಸರ್ಸ್‌’ಗೆ ಬ್ಯಾಟಿಂಗ್ ಚಿಂತೆ: ಉತ್ತಮ ಬೌಲಿಂಗ್ ಪಡೆಯನ್ನು ಹೊಂದಿದ್ದರೂ ಸನ್‌’ರೈಸರ್ಸ್‌’ಗೆ ಬ್ಯಾಟಿಂಗ್’ನದ್ದೇ ದೊಡ್ಡ ತಲೆನೋವಾಗಿದೆ. ಅದರಲ್ಲೂ ಬ್ಯಾಟ್ಸ್‌’ಮನ್’ಗಳ ಅಸ್ಥಿರ ಪ್ರದರ್ಶನ ನಾಯಕ ವಿಲಿಯಮ್ಸನ್‌’ರ ನಿದ್ದೆ ಗೆಡಿಸಿದೆ. ಹೇಲ್ಸ್, ಧವನ್, ಪಾಂಡೆ, ಯೂಸುಫ್ ಪಠಾಣ್ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ, ಶನಿವಾರ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ರೈಸರ್ಸ್‌ ಬ್ಯಾಟ್ಸ್‌’ಮನ್‌’ಗಳು ಉತ್ತಮ ಪ್ರದರ್ಶನ ತೋರಿದ್ದು, ಪಂದ್ಯ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸನ್‌’ರೈಸರ್ಸ್‌ ಬ್ಯಾಟ್ಸ್‌’ಮನ್ ಅಸ್ಥಿರ ಪ್ರದರ್ಶನದ ಲಾಭವನ್ನು ಆರ್‌’ಸಿಬಿ ಬೌಲರ್‌ಗಳು ಬಳಸಿಕೊಳ್ಳಬೇಕಿದೆ. ಆರ್‌’ಸಿಬಿ ಬ್ಯಾಟ್ಸ್‌’ಮನ್‌’ಗಳು ರೈಸರ್ಸ್‌’ನ ಬಲಿಷ್ಠ ಬೌಲಿಂಗ್ ಪಡೆಯನ್ನು ಮೆಟ್ಟಿನಿಂತರೆ, ಗೆಲುವು ನಿಶ್ಚಿತ. 

click me!