
ಕೊಚ್ಚಿ(ಆ.21): 2013ರ ಐಪಿಎಲ್ ಪಂದ್ಯದ ವೇಳೆ ಟವಲ್ ಇಟ್ಟುಕೊಂಡಿದ್ದೇಕೆ ಎನ್ನುವುದರ ಬಗ್ಗೆ ಶ್ರೀಶಾಂತ್ 4 ವರ್ಷಗಳ ಬಳಿಕ ಕೊನೆಗೂ ವಿವರಣೆ ನೀಡಿದ್ದಾರೆ. ‘ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಆಲನ್ ಡೊನಾಲ್ಡ್ ಎಂದರೆ ನನಗೆ ಬಹಳ ಇಷ್ಟ. ಅವರೇ ನನಗೆ ಸ್ಫೂರ್ತಿ. ಅವರಂತೆಯೇ ಬೌಲಿಂಗ್ ಮಾಡಬೇಕು, ಅವರಂತೆಯೇ ಕಾಣಬೇಕೆಂಬ ಆಸೆಯಿಂದ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಟವೆಲ್ ಇರಿಸಿಕೊಂಡಿದ್ದೆ. ಇದರಲ್ಲಿ ಯಾವುದೇ ದುರುದ್ದೇಶವಿರಲಿಲ್ಲ’ ಎಂದು ಶ್ರೀಶಾಂತ್ ಹೇಳಿದ್ದಾರೆ.
‘ಈ ಮೊದಲು ನಾನು ಸಹ ಟವಲ್ ಸಿಕ್ಕಿಸಿಕೊಂಡು ಬೌಲ್ ಮಾಡುತ್ತಿದ್ದೆ. ಅಷ್ಟೇ ಅಲ್ಲ, ಡೊನಾಲ್ಡ್'ರಂತೆ ಮುಖಕ್ಕೆ ಕ್ರೀಮ್ ಸಹ ಹಚ್ಚಿಕೊಳ್ಳುತ್ತಿದ್ದೆ. ಹಾಗೆಂದ ಮಾತ್ರಕ್ಕೆ ಇದನ್ನು ಮ್ಯಾಚ್ ಫಿಕ್ಸಿಂಗ್ ಎನ್ನುವಿರಾ? ಇದು ನಿಷೇಧಗೊಳಿಸುವಷ್ಟು ದೊಡ್ಡ ತಪ್ಪೇ’ ಎಂದು ಶ್ರೀಶಾಂತ್ ಪ್ರಶ್ನಿಸಿದ್ದಾರೆ.
‘ಡೊನಾಲ್ಡ್ ಅನುಸರಿಸುವುದರಿಂದ ನನಗೆ ಉತ್ತೇಜನ ಸಿಗುತಿತ್ತು. ನನ್ನ ಪ್ರದರ್ಶನ ಸುಧಾರಣೆಗೆ ಕಾರಣವಾಗುತಿತ್ತು. ಮೊದಲನೇ ಓವರ್ ಬೌಲಿಂಗ್ ಮಾಡುವ ಸಂದರ್ಭದಲ್ಲೇ ಟವಲ್ ಇಟ್ಟುಕೊಳ್ಳಬಹುದೆ ಎಂದು ಅಂಪೈರ್ ಕುಮಾರ್ ಧರ್ಮಸೇನಾ ಅವರನ್ನು ಕೇಳಿದ್ದೆ. ಇದು ಸ್ಟಂಪ್ ಮೈಕ್'ನಲ್ಲಿ ದಾಖಲಾಗಿರುತ್ತದೆ. ಬೇಕಿದ್ದರೆ ಪರಿಶೀಲಿಸಬಹುದು’ ಎಂದು ಶ್ರೀಶಾಂತ್ ಸ್ಪಷ್ಟನೆ ನೀಡಿದ್ದಾರೆ.
ಬುಕ್ಕಿಗಳಿಗೆ ಸುಳಿವು ನೀಡುವ ಸಲುವಾಗಿ ಶ್ರೀಶಾಂತ್ ಟವಲ್ ಇರಿಸಿಕೊಂಡಿದ್ದರು ಎಂದು ದೆಹಲಿ ಪೊಲೀಸರು ಸ್ಪಾಟ್ ಫಿಕ್ಸಿಂಗ್ ಬಗ್ಗೆ ವಿವರಣೆ ನೀಡುವ ಸಂದರ್ಭದಲ್ಲಿ ತಿಳಿಸಿದ್ದರು. ಫಿಕ್ಸಿಂಗ್ ಆರೋಪದಿಂದಾಗಿ ಬಿಸಿಸಿಐ ಶ್ರೀಶಾಂತ್ ಅವರ ಮೇಲೆ ಆಜೀವ ನಿಷೇಧ ಹೇರಿತ್ತು. ಆದರೆ ಕಳೆದ ವಾರವಷ್ಟೇ ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲಿನ ನಿಷೇಧವನ್ನು ತೆರವುಗೊಳಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.