ಇಂದಿನಿಂದ ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್'ಶಿಪ್ ಆರಂಭ

By Suvarna Web DeskFirst Published Aug 21, 2017, 8:49 AM IST
Highlights

2015ರ ವಿಶ್ವ ಚಾಂಪಿಯನ್‌'ನಲ್ಲಿ ಬೆಳ್ಳಿ ಗೆದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದ ಸೈನಾ ನೆಹ್ವಾಲ್ ಸಹ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಸೈನಾ ಹಾಗೂ ಸಿಂಧು ಇಬ್ಬರಿಗೂ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದೆ.

ಗ್ಲಾಸ್ಗೋ(ಆ.21): ಕಿದಾಂಬಿ ಶ್ರೀಕಾಂತ್ ಹಾಗೂ ಎರಡು ಬಾರಿ ಕಂಚು ಪದಕ ವಿಜೇತೆ ಪಿ.ವಿ.ಸಿಂಧು ಇಂದಿನಿಂದ ಆರಂಭಗೊಳ್ಳಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌'ನಲ್ಲಿ ದಾಖಲೆಯ 21 ಸದಸ್ಯರ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಇಂಡೋನೇಷ್ಯಾ ಹಾಗೂ ಆಸ್ಟ್ರೇಲಿಯಾ ಓಪನ್‌'ನಲ್ಲಿ ಪ್ರಶಸ್ತಿ ಗೆದ್ದಿದ್ದ ಶ್ರೀಕಾಂತ್, ವಿಶ್ವ ಚಾಂಪಿಯನ್‌'ಶಿಪ್‌'ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ. ಇದೇ ವೇಳೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಸಿಂಧು, 2016ರ ಚೀನಾ ಓಪನ್ ಹಾಗೂ 2017ರ ಇಂಡಿಯಾ ಓಪನ್ ಪ್ರಶಸ್ತಿಗಳನ್ನು ಗೆದ್ದು ಲಯ ಉಳಿಸಿಕೊಂಡಿದ್ದಾರೆ. 2013 ಹಾಗೂ 2014ರ ವಿಶ್ವ ಚಾಂಪಿಯನ್‌'ಶಿಪ್‌'ನಲ್ಲಿ ಕಂಚಿಗೆ ತೃಪ್ತಿಪಟ್ಟಿದ್ದ ಸಿಂಧು, ಈ ಬಾರಿ ತಮ್ಮ ಸಾಧನೆಯನ್ನು ಉತ್ತಮಗೊಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

2015ರ ವಿಶ್ವ ಚಾಂಪಿಯನ್‌'ನಲ್ಲಿ ಬೆಳ್ಳಿ ಗೆದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದ ಸೈನಾ ನೆಹ್ವಾಲ್ ಸಹ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಸೈನಾ ಹಾಗೂ ಸಿಂಧು ಇಬ್ಬರಿಗೂ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದೆ. ಸಿಂಧು 2ನೇ ಸುತ್ತಿನಲ್ಲಿ ಕೊರಿಯಾದ ಕಿಮ್ ಹ್ಯು ಅಥವಾ ಈಜಿಪ್ಟ್‌'ನ ಹಡಿಯಾ ಅವರ ವಿರುದ್ಧ ಆಡಲಿದ್ದು, ಕ್ವಾರ್ಟರ್ ಫೈನಲ್‌'ನಲ್ಲಿ ಚೀನಾದ ಸುನ್ ಯು ಅವರನ್ನು ಎದುರಿಸುವ ಸಾಧ್ಯತೆ ಇದೆ.

ಸೈನಾ ಪ್ರೀ ಕ್ವಾರ್ಟರ್'ಗೇರಲು ದ್ವಿತೀಯ ಶ್ರೇಯಾಂಕಿತೆ ಕೊರಿಯಾದ ಸುಂಗ್ ಜಿ ಸವಾಲನ್ನು ಎದುರಿಸುವ ಸಾಧ್ಯತೆ ಇದೆ. ಇದೇ ವೇಳೆ ಈ ಋತುವಿನಲ್ಲಿ 6 ಪ್ರಶಸ್ತಿ ಗೆದ್ದಿರುವ ಭಾರತದ ಪುರುಷ ಶಟ್ಲರ್‌'ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಸಾಯಿ ಪ್ರಣೀತ್, ಸಮೀರ್ ವರ್ಮಾ, ಅಜಯ್ ಜಯರಾಮ್ ಸಹ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಪಂದ್ಯಾವಳಿಯಲ್ಲಿ ಶ್ರೀಕಾಂತ್‌'ಗೆ ದಿಗ್ಗಜ ಆಟಗಾರರಾದ ಚೆನ್ ಲಾಂಗ್, ಲೀ ಚಾಂಜ್ ವೀ, ಲಿನ್ ಡಾನ್ ಸೇರಿದಂತೆ ವಿಕ್ಟರ್ ಅಕ್ಸೆಲ್ಸನ್, ಶಿ ಯುಕಿ ಸವಾಲು ಎದುರಾಗಲಿದೆ. ಪುರುಷ, ಮಹಿಳಾ ಹಾಗೂ ಮಿಶ್ರ ಡಬಲ್ಸ್‌'ನಲ್ಲೂ ಭಾರತ ಕಣಕ್ಕಿಳಿಯುತ್ತಿದೆ.

click me!