
ಬೆಂಗಳೂರು: 2026ರಲ್ಲಿ ಭರ್ಜರಿ ಮನರಂಜನೆಯ ನಿರೀಕ್ಷೆಯಲ್ಲಿರುವ ಕ್ರೀಡಾಭಿಮಾನಿಗಳು, ವಿಶ್ವ ಚಾಂಪಿಯನ್‌ಶಿಪ್ ಉಳಿಸಿಕೊಳ್ಳುವ ಆಟಗಾರರು ಅಥವಾ ತಂಡಗಳು ಯಾವುವು ಎನ್ನುವ ಕುತೂಹಲದಲ್ಲೂ ಇದ್ದಾರೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಜನಪ್ರಿಯ ತಂಡ ಅಥವಾ ಕ್ರೀಡಾಪಟು ಎನಿಸಿರುವವರಿಗೆ ಈ ವರ್ಷ ವಿಶ್ವ ಕಿರೀಟ ಉಳಿಸಿಕೊಳ್ಳುವ ಅವಕಾಶವಿದೆ. ಅದರ ವಿವರ ಇಲ್ಲಿದೆ.
ಕಳೆದ 3 ಐಸಿಸಿ ಟೂರ್ನಿಗಳಲ್ಲಿ ಭಾರತ, ತನ್ನೆಲ್ಲಾ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾಗಿ ಆಡಿದೆ. ತಂಡದಿಂದ ಸ್ಥಿರ ಪ್ರದರ್ಶನ ಮೂಡಿಬಂದಿದೆ ಎನ್ನುವುದಕ್ಕೆ ಈ ಮೂರರಲ್ಲಿ ಭಾರತ 2ರಲ್ಲಿ ಚಾಂಪಿಯನ್ ಆಗಿದೆ, ಒಂದರಲ್ಲಿ ರನ್ನರ್-ಅಪ್ ಆಗಿದ್ದೇ ಉದಾಹರಣೆ. ಇನ್ನೊಂದು ತಿಂಗಳ ಸಮಯದಲ್ಲಿ ಭಾರತ ತಂಡ ಮತ್ತೊಂದು ವಿಶ್ವಕಪ್‌ನಲ್ಲಿ ಆಡಲಿದೆ. ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿರುವ ತಂಡಕ್ಕೆ ಟ್ರೋಫಿ ಉಳಿಸಿಕೊಳ್ಳುವ ಅವಕಾಶವಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲೇ ಯಾವ ತಂಡಕ್ಕೂ ಸತತ 2 ಬಾರಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಯಾವ ತಂಡವೂ ತನ್ನ ತವರಿನಲ್ಲಿ ವಿಶ್ವಕಪ್ ಜಯಿಸಿಲ್ಲ. ಈ ಎರಡೂ ದಾಖಲೆ ಬರೆಯಲು ಟೀಂ ಇಂಡಿಯಾಗೆ ಅವಕಾಶವಿದೆ. ಜೊತೆಗೆ ಕಳೆದ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಅನುಭವದ ಅಭಯ ತಂಡಕ್ಕಿತ್ತು. ಈ ಬಾರಿ ಅವರಿಬ್ಬರ ಅನುಪಸ್ಥಿತಿ ತಂಡ ಟ್ರೋಫಿ ಉಳಿಸಿಕೊಳ್ಳಲು ಹೋರಾಡಬೇಕಿದೆ.
ಫುಟ್ಬಾಲ್ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಈ ವರ್ಷ ಜೂನ್, ಜುಲೈನಲ್ಲಿ ನಡೆಯಲಿದ್ದು, ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ ಹಾಲಿ ವಿಶ್ವ ಚಾಂಪಿಯನ್ ಆಗಿ ಟೂರ್ನಿಯಲ್ಲಿ ಆಡಲಿದೆ. 2022ರಲ್ಲಿ ಅರ್ಜೆಂಟೀನಾ ಟ್ರೋಫಿ ಗೆದ್ದಾಗಲೇ ಅದು ಮೆಸ್ಸಿಯ ಕೊನೆಯ ವಿಶ್ವಕಪ್ ಆಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಮೆಸ್ಸಿ ತಮ್ಮ ಅತ್ಯುತ್ತಮ ಫಿಟ್ನೆಸ್ ಹಾಗೂ ಲಯದೊಂದಿಗೆ ಮತ್ತೊಂದು ವಿಶ್ವಕಪ್‌ಗೆ ಸಜ್ಜಾಗಿದ್ದಾರೆ. ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಅರ್ಜೆಂಟೀನಾ 18 ಪಂದ್ಯಗಳಲ್ಲಿ 12ರಲ್ಲಿ ಗೆದ್ದಿದೆ. ಜೊತೆಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಉಳಿಸಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಅರ್ಜೆಂಟೀನಾಗೆ ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ಚುಗಲ್ ಎದುರಾಗಬಹುದು. ನಿವೃತ್ತಿಗೂ ಮುನ್ನ ಒಂದು ವಿಶ್ವಕಪ್ ಗೆಲ್ಲಲೇಬೇಕು ಎನ್ನುವ ಮಹದಾಸೆಯೊಂದಿಗೆ ತಮ್ಮ 40ನೇ ವಯಸ್ಸಲ್ಲೂ ಕ್ರೀಡೆಯಲ್ಲಿ ಸಕ್ರಿಯರಾಗಿರುವ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ 38ರ ಮೆಸ್ಸಿ ಮುಖಾಮುಖಿಯಾಗಬಹುದು. ಹಾಗೇನಾದರೂ ಆದರೆ, ಫುಟ್ಬಾಲ್ ಪ್ರೇಮಿಗಳಿಗೆ ಅದಕ್ಕಿಂತ ದೊಡ್ಡ ಸಂಭ್ರಮ ಮತ್ತೊಂದಿರುವುದಿಲ್ಲ.
ಕಳೆದ ಒಂದು ವರ್ಷದಿಂದ 19 ವರ್ಷದ ಡಿ.ಗುಕೇಶ್ ಚೆಸ್ ವಿಶ್ವ ಚಾಂಪಿಯನ್‌ಶಿಪ್ ಸಿಂಹಾಸನದ ಮೇಲೆ ವಿರಾಜಮಾನರಾಗಿದ್ದಾರೆ. 2024ರಲ್ಲಿ ಅವರು ಚೀನಾದ ಡಿಂಗ್ ಲಿರೆನ್‌ರನ್ನು ಸೋಲಿಸಿ ಚೊಚ್ಚಲ ವಿಶ್ವ ಕಿರೀಟಕ್ಕೆ ಮುತ್ತಿಟ್ಟಿದ್ದರು. 2026ರಲ್ಲಿ ಗುಕೇಶ್ ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಹೋರಾಡಲಿದ್ದಾರೆ. ಬಹುತೇಕ ನವೆಂಬರ್-ಡಿಸೆಂಬರ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ನಡೆಯಲಿದೆ. ಅದಕ್ಕೂ ಮುನ್ನ ಗುಕೇಶ್‌ಗೆ ಎದುರಾಳಿ ಯಾರು ಎನ್ನುವುದನ್ನು ನಿರ್ಧರಿಸಲು ಮಾ.28ರಿಂದ ಏ.16ರ ವರೆಗೂ ಕ್ಯಾಂಡಿಡೇಟ್ಸ್ ಟೂರ್ನಿ ನಡೆಯಲಿದೆ.
ಈ ವರ್ಷ ಗುಕೇಶ್ ಮಿಶ್ರ ಫಲ ಅನುಭವಿಸಿದ್ದರೂ, ಸಾಂಪ್ರದಾಯಿಕ ಮಾದರಿ ಚೆಸ್‌ನಲ್ಲಿ ಅತ್ಯಂತ ಕಠಿಣ ಸ್ಪರ್ಧಿ ಎನಿಸಿರುವ ಗುಕೇಶ್‌ರನ್ನು 14 ಸುತ್ತುಗಳ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೋಲಿಸುವುದು ಅಷ್ಟೊಂದು ಸುಲಭವೇನೂ ಆಗಿರಲ್ಲ.
ಸ್ವೀಡನ್‌ನ ಮೊಂಡೊ ಡುಪ್ಲಾಂಟಿಸ್ ಫೆ.8, 2020ರಿಂದ ಸೆ.15, 2025ರ ನಡುವೆ ಪೋಲ್ ವಾಲ್ಟ್‌ನಲ್ಲಿ 14 ಬಾರಿ ವಿಶ್ವ ದಾಖಲೆ ಬರೆದಿದ್ದಾರೆ. 6.17 ಮೀ.ನಿಂದ ಶುರುವಾದ ದಾಖಲೆಯನ್ನು ನಿರಂತರವಾಗಿ ಉತ್ತಮ ಪಡಿಸಿಕೊಂಡು ಸಾಗಿರುವ ಡುಪ್ಲಾಂಟಿಸ್ ಈಗ 6.30 ಮೀ. ತಲುಪಿದ್ದಾರೆ. ಸೆ.13ರಿಂದ 25ರ ವರೆಗೂ ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಡುಪ್ಲಾಂಟಿಸ್ ತಮ್ಮ ವಿಶ್ವ ದಾಖಲೆ, ವಿಶ್ವ ಚಾಂಪಿಯನ್‌ಪಟ್ಟ ಎರಡೂ ಉಳಿಸಿಕೊಳ್ಳಲು ಹಾರಲಿದ್ದಾರೆ.
25ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಾಗಿ ನೋವಾಕ್ ಜೋಕೋವಿಚ್ 2026ರಲ್ಲೂ ಹುಡುಕಾಟ ಮುಂದುವರಿಸಲಿದ್ದಾರೆ. 38 ವರ್ಷದ ಜೋಕೋ ಈ ವರ್ಷ ಗೆಲ್ಲದಿದ್ದರೆ, ಬಹುಶಃ ಅವರ ಕನಸು ಕನಸಾಗಿಯೇ ಉಳಿಯಬಹುದು. ದಾಖಲೆಯ 25ನೇ ಪ್ರಶಸ್ತಿಗೆ ಜೋಕೋ, ಆಲ್ಕರಜ್-ಸಿನ್ನರ್‌ರ ಚಕ್ರವ್ಯೂಹವನ್ನು ಭೇದಿಸಬೇಕಿದೆ. ಕಳೆದ ವರ್ಷ ಒಂದೂ ಗ್ರ್ಯಾನ್‌ಸ್ಲಾಂ ಗೆಲ್ಲದ ಜೋಕೋವಿಚ್ ಈ ವರ್ಷ 4ರಲ್ಲಿ ಒಂದಾದರೂ ಗೆಲ್ಲಲಿ ಎನ್ನುವುದು ಅಭಿಮಾನಿಗಳ ಒತ್ತಾಸೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.