
ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಉಸ್ಮಾನ್ ಖವಾಜ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಶಸ್ ಸರಣಿಯ ಕೊನೆಯಲ್ಲಿ ನಿವೃತ್ತಿಯಾಗುವುದಾಗಿ ಖವಾಜ ಹೇಳಿದ್ದಾರೆ. ಸಿಡ್ನಿಯ ಪತ್ರಿಕಾಗೋಷ್ಠಿಯಲ್ಲಿ ಈ ಭಾವನಾತ್ಮಕ ಘೋಷಣೆ ಮಾಡಿದರು. ಪಾಕಿಸ್ತಾನದಲ್ಲಿ ಜನಿಸಿದ ಖವಾಜ, ಆಸ್ಟ್ರೇಲಿಯಾ ತಂಡದಲ್ಲಿ ಆಡಿದ ಮೊದಲ ಮುಸ್ಲಿಂ ಆಟಗಾರ ಎನಿಸಿಕೊಂಡಿದ್ದಾರೆ. ವೃತ್ತಿಜೀವನದುದ್ದಕ್ಕೂ ತನ್ನನ್ನು ವಿಭಿನ್ನವಾಗಿ ಪರಿಗಣಿಸಿದ್ದು ಅಸಮಾಧಾನ ತಂದಿತ್ತು ಎಂದು ಖವಾಜ ಬಹಿರಂಗವಾಗಿ ಹೇಳಿದ್ದಾರೆ. ಗಾಯದ ಸಮಯದಲ್ಲಿ ತಾನು ಎದುರಿಸಿದ ಟೀಕೆಗಳು ಜನಾಂಗೀಯ ನಿಂದನೆಯ ಸ್ವರೂಪವನ್ನು ಹೊಂದಿದ್ದವು ಎಂದೂ ಅವರು ಹೇಳಿದ್ದಾರೆ.
39 ವರ್ಷದ ಖವಾಜ ಆಸ್ಟ್ರೇಲಿಯಾ ಪರ 87 ಟೆಸ್ಟ್‌ಗಳಲ್ಲಿ 16 ಶತಕ ಸೇರಿದಂತೆ 6,206 ರನ್ ಗಳಿಸಿದ್ದಾರೆ. 2011ರಲ್ಲಿ ಚೊಚ್ಚಲ ಟೆಸ್ಟ್ ಸಿಡ್ನಿಯಲ್ಲೇ ಆಡಿದ್ದ ಖವಾಜ ಅವರ ವಿದಾಯದ ಪಂದ್ಯವೂ ಇದೀಗ ಸಿಡ್ನಿಯಲ್ಲೇ ನಡೆಯುತ್ತಿರುವುದು ಒಂದು ರೀತಿಯ ಕಾಕತಾಳೀಯ ಎನಿಸಿಕೊಂಡಿದೆ. ಆಸ್ಟ್ರೇಲಿಯಾ ಪರ ಒಟ್ಟು 136 ಪಂದ್ಯಗಳಿಂದ 8,001 ರನ್ ಗಳಿಸಿದ್ದಾರೆ. ಒಟ್ಟಾರೆ ಖವಾಜ 18 ಶತಕ ಮತ್ತು 41 ಅರ್ಧಶತಕಗಳನ್ನು ಬಾರಿಸಿದ್ದಾರೆ. ಸಿಡ್ನಿ ಟೆಸ್ಟ್‌ಗೂ ಮುನ್ನ ಖವಾಜ ಮತ್ತೊಂದು ಸಾಧನೆಯ ಹೊಸ್ತಿಲಲ್ಲಿದ್ದಾರೆ. ಆಸ್ಟ್ರೇಲಿಯಾ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 14ನೇ ಸ್ಥಾನಕ್ಕೇರಬಹುದು. ಮೈಕ್ ಹಸ್ಸಿಯನ್ನು ಹಿಂದಿಕ್ಕಲು ಖವಾಜಗೆ ಕೇವಲ 30 ರನ್‌ಗಳು ಬೇಕು.
ಆಶಸ್‌ನ ಮೊದಲ ಪಂದ್ಯದ ಹಿಂದಿನ ದಿನ ಗಾಲ್ಫ್ ಆಡುವಾಗ ಬೆನ್ನಿಗೆ ಗಾಯ ಮಾಡಿಕೊಂಡ ಖವಾಜ ಬಗ್ಗೆ ಮಾಧ್ಯಮಗಳು ಮತ್ತು ಮಾಜಿ ಆಟಗಾರರು ತೋರಿದ ವರ್ತನೆ ಕ್ರೂರವಾಗಿತ್ತು. ತಂಡದ ಬಗ್ಗೆ ಬದ್ಧತೆ ಇಲ್ಲ, ಸ್ವಾರ್ಥಿ, ಸರಿಯಾಗಿ ತರಬೇತಿ ಪಡೆಯುವುದಿಲ್ಲ, ಸೋಮಾರಿ ಎಂಬಂತಹ ಟೀಕೆಗಳು ಖವಾಜ ಮೇಲೆ ಬಂದವು. ಇದರ ಬಗ್ಗೆ ತಮ್ಮ ವಿದಾಯದ ಘೋಷಣೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಪಂದ್ಯದ ಹಿಂದಿನ ದಿನ ಕುಡಿದು ಗಾಯ ಮಾಡಿಕೊಂಡವರಿಗೂ ಈ ಟೀಕೆಗಳು ಎದುರಾಗಿಲ್ಲ ಎಂದು ಖವಾಜ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಜೋಶ್ ಹೇಝಲ್‌ವುಡ್ ಮತ್ತು ನಾಥನ್ ಲಿಯಾನ್ ಗಾಯಗೊಂಡಾಗ ಸಹಾನುಭೂತಿ ತೋರಿದವರು, ತನಗೆ ಗಾಯವಾದಾಗ ವಿಷಯಗಳನ್ನು ವೈಯಕ್ತಿಕಗೊಳಿಸಿದರು ಎಂದು ಖವಾಜ ತಮ್ಮ ನಿವೃತ್ತಿ ಘೋಷಣೆಯಲ್ಲಿ ತಿಳಿಸಿದ್ದಾರೆ.
ಉಸ್ಮಾನ್ ಖವಾಜ ಆಸ್ಟ್ರೇಲಿಯಾ ಪರ ಕ್ರಮವಾಗಿ 87 ಟೆಸ್ಟ್, 40 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದು, 6202, 1554 ಹಾಗೂ 241 ರನ್ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 232 ರನ್ ಬಾರಿಸಿದ್ದು ಅವರ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.