
ಬೆಂಗಳೂರು (ಜ.2): ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಜೊತೆ ಪ್ರಾಯೋಜಕತ್ವದ ಒಪ್ಪಂದವನ್ನು ಅನ್ವೇಷಿಸುತ್ತಿದೆ. ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಅಮುಲ್ ಕಳೆದ ವರ್ಷ ಆರ್‌ಸಿಬಿಯ ಪ್ರಾಯೋಜಕರಾಗಿದ್ದರು. ಡೈರಿ ಉತ್ಪನ್ನಗಳ ವಿಭಾಗದ ಅಡಿಯಲ್ಲಿ ಅಧಿಕೃತ ಆರ್‌ಸಿಬಿ ಪಾಲುದಾರರಾಗಿ ಎಂಟ್ರಿ ಆಗಲು ಕೆಎಂಎಫ್ ಪ್ರಯತ್ನ ಮಾಡುತ್ತಿದೆ. ಇದರ ಹಕ್ಕುಗಳನ್ನು ಹೊಂದಿರುವ ಏಜೆನ್ಸಿಯನ್ನು ನೇಮಿಲು ಕೆಎಂಎಫ್ ಇತ್ತೀಚೆಗೆ ಟೆಂಡರ್ ಕೂಡ ಕರೆದಿದೆ ಎನ್ನಲಾಗಿದೆ.
"ಐಪಿಎಲ್ 2026 ಗಾಗಿ ನಾವು ಆರ್‌ಸಿಬಿ ಜೊತೆ ಅಧಿಕೃತ ಪಾಲುದಾರಿಕೆಯನ್ನು ನೋಡುತ್ತಿದ್ದೇವೆ. ಐಪಿಎಲ್, ಬಿಸಿಸಿಐ ಮತ್ತು ಫ್ರಾಂಚೈಸ್ ನಿಯಮಗಳಿಗೆ ಅನುಸಾರವಾಗಿ ಈ ಹಕ್ಕುಗಳನ್ನು ಪಡೆಯಲು ಮತ್ತು ಕಾರ್ಯಗತಗೊಳಿಸಲು ಏಜೆನ್ಸಿಗಳನ್ನು ತೊಡಗಿಸಿಕೊಳ್ಳಲು ಟೆಂಡರ್ ಕರೆಯಲಾಗಿದೆ" ಎಂದು ಕೆಎಂಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.
"ಐಪಿಎಲ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡವಾದ ಆರ್‌ಸಿಬಿ ಕೂಡ ಬಲವಾದ ಸೋಶಿಯಲ್ ಮೀಡಿಯಾ ಫಾಲೋವರ್ಸ್‌ಅನ್ನು ಹೊಂದಿದೆ ಮತ್ತು ವಿರಾಟ್ ಕೊಹ್ಲಿ ಜನಪ್ರಿಯ ಫೇಸ್. ನಾವು ಕೊಹ್ಲಿ ಮತ್ತು ಇತರ ಇಬ್ಬರು ಆಟಗಾರರನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲು ನೋಡುತ್ತಿದ್ದೇವೆ. ಇದು ದೆಹಲಿ, ಮುಂಬೈ ಮತ್ತು ಉತ್ತರ ಪ್ರದೇಶದಂತಹ ಮಾರುಕಟ್ಟೆಗಳಲ್ಲಿ ನಂದಿನಿಯ ವಿಸ್ತರಣೆಗೆ ಸಹಕಾರಿಯಾಗುತ್ತದೆ. ಹಾಲು ಹೆಚ್ಚು ಪೌಷ್ಟಿಕವಾಗಿದೆ ಮತ್ತು ನಂದಿನಿ ತನ್ನ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ" ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ತಿಳಿಸಿದ್ದಾರೆ.
"ಕಳೆದ ವರ್ಷ ನಾವು ಒಂಬತ್ತು ತಂಡಗಳನ್ನು ಪ್ರಾಯೋಜಿಸಿದ್ದೇವೆ. ಈ ಋತುವಿನ ತಂಡಗಳನ್ನು ಶೀಘ್ರದಲ್ಲೇ ಘೋಷಿಸುತ್ತೇವೆ" ಎಂದು ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್‌ಗೆ ಕಿಯೋಸ್ಕ್‌ಗಳಿಗೆ ಅನುಮತಿ ನೀಡಿದ ನಂತರ ಕರ್ನಾಟಕ ಸರ್ಕಾರವು ವಿರೋಧ ಪಕ್ಷದ ಟೀಕೆಗಳನ್ನು ಎದುರಿಸಿತು, ಬಿಜೆಪಿ ಮತ್ತು ಜೆಡಿಎಸ್, ಕಾಂಗ್ರೆಸ್ ನಂದಿನಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದವು. ನಂತರ ಸರ್ಕಾರ ಎಂಟು ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದೆ. 2023 ರ ವಿಧಾನಸಭಾ ಚುನಾವಣೆಗೆ ಮುನ್ನ ಬೆಂಗಳೂರು ಮಾರುಕಟ್ಟೆಗೆ ಅಮುಲ್ ತಾಜಾ ಡೈರಿ ಉತ್ಪನ್ನಗಳೊಂದಿಗೆ ಪ್ರವೇಶಿಸಿದ್ದು ರಾಜಕೀಯ ಜಗಳಕ್ಕೆ ನಾಂದಿ ಹಾಡಿತ್ತು, ಇದು ಕರ್ನಾಟಕದ ಡೈರಿ ಸಹಕಾರಿ ಸಂಸ್ಥೆ ಮತ್ತು ಸಾವಿರಾರು ಸ್ಥಳೀಯ ರೈತರಿಗೆ ಹಾನಿ ಮಾಡಬಹುದು ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.
ಟೆಂಡರ್ ದಾಖಲೆಗಳ ಪ್ರಕಾರ, ನಂದಿನಿ ಐಪಿಎಲ್ 2026 (ಸೀಸನ್ 19) ಗಾಗಿ ಆರ್‌ಸಿಬಿಯ 'ಅಧಿಕೃತ ಪಾಲುದಾರ'ರಾಗಿ ಬರಲು ಎದುರು ನೋಡುತ್ತಿದೆ, ಇದು ಒಪ್ಪಂದದ ನಿಯಮಗಳು ಮತ್ತು ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ. ಒಪ್ಪಂದದ ಭಾಗವಾಗಿ, ನಂದಿನಿ, ಮುದ್ರಣ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಮಾರ್ಕೆಟಿಂಗ್ ಮತ್ತು ಜಾಹೀರಾತು ಪ್ರಚಾರಕ್ಕಾಗಿ ಫ್ರಾಂಚೈಸಿಯಿಂದ ನಾಮನಿರ್ದೇಶನಗೊಂಡ ಯಾವುದೇ ಇಬ್ಬರು ಆರ್‌ಸಿಬಿ ಆಟಗಾರರೊಂದಿಗೆ ವಿರಾಟ್ ಕೊಹ್ಲಿಯ ಚಿತ್ರವನ್ನು ಬಳಸಲು ಯೋಜಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.