ಸಾಗರದ ಪುಟ್ಟ ಹಳ್ಳಿಯ ವಿಶೇಷಚೇತನ ಮಕ್ಕಳ ದೊಡ್ಡ ಸಾಧನೆ; ಡೆಲ್ಲಿಯಲ್ಲಿ ಮೊಳಗಿದ ಕನ್ನಡ ಕಹಳೆ!

Published : Oct 01, 2025, 04:20 PM IST
Sagara Students

ಸಾರಾಂಶ

ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪೆಷಲ್ ಒಲಿಂಪಿಕ್‌ ಭಾರತ್ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ ವಿಶೇಷ ಚೇತನ ಮಕ್ಕಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ರಾಜ್ಯವನ್ನು ಪ್ರತಿನಿಧಿಸಿದ್ದ 8 ಕ್ರೀಡಾಪಟುಗಳು 2 ಚಿನ್ನ, 3 ಬೆಳ್ಳಿ ಹಾಗೂ 1 ಕಂಚು ಸೇರಿದಂತೆ ಒಟ್ಟು 6 ಪದಕ ಗೆದ್ದು ಬೀಗಿದ್ದಾರೆ.

  • ನವೀನ್ ಕೊಡಸೆ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು: ಬೌದ್ಧಿಕ ನ್ಯೂನ್ಯತೆಯಿರುವ ಮಕ್ಕಳಿಗಾಗಿಯೇ ಆಯೋಜಿಸುವ ರಾಷ್ಟ್ರಮಟ್ಟದ ಸ್ಪೆಷಲ್ ಒಲಿಂಪಿಕ್‌ ಭಾರತ್ ಸ್ಪರ್ಧೆಯಲ್ಲಿ ಕರ್ನಾಟಕದ ಕ್ರೀಡಾಪಟುಗಳು ಇಡೀ ರಾಜ್ಯವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ. ಇದೇ ಸೆಪ್ಟೆಂಬರ್ 23ರಿಂದ 27ರವರೆಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ವಿಶೇಷ ಒಲಿಂಪಿಕ್ ಭಾರತ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ 8 ವಿಶೇಷ ಚೇತನ ಮಕ್ಕಳು 02 ಚಿನ್ನ, 03 ಬೆಳ್ಳಿ ಹಾಗೂ 01 ಕಂಚು ಸಹಿತ ಆರು ಪದಕ ಜಯಿಸಿದ್ದಾರೆ.

ನವದೆಹಲಿಯ ಮೈತ್ರಿ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಡೆದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನ ಏರ್‌ಫೋರ್ಸ್ ಆಶಾಕಿರಣ ಶಾಲೆಯ ವಿದ್ಯಾರ್ಥಿ ಬಾಲಕರ ವಿಭಾಗದಲ್ಲಿ ಮಿಥುನ್ 14 ವರ್ಷದವರ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಇನ್ನು ಬಾಲಕಿಯರ ವಿಭಾಗ ಜೂನಿಯರ್ ಕೆಟೆಗೆರೆಯಲ್ಲಿ 15 ವರ್ಷದ ಗಾಯತ್ರಿ ಪಾಟೀಲ್ ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇನ್ನು ಹೊಸಪೇಟೆಯ ಸಾಧ್ಯ ಶಾಲೆಯ ತರುಣ್ ಸೀನಿಯರ್ ಕೆಟಗೆರೆಯಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಿದ ಮಲೆನಾಡಿನ ಪ್ರತಿಭೆಗಳು

ಈ ಪೈಕಿ ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆ ಸಾಗರದ ವಿದ್ಯಾರ್ಥಿಗಳಾದ ಶರತ್‌ ಶೆಟ್ಟಿ ಆರ್. ಹುಲಿದೇವರಬನ ಜೂನಿಯರ್ ಕೆಟೆಗೆರೆ(14ರಿಂದ 17 ವರ್ಷ ವಿಭಾಗ), ಅನುಷಾ ಕೆ. ಸಾಗರ, ಸೀನಿಯರ್ ಕೆಟಗೆರೆ(18ರಿಂದ 21 ವರ್ಷ), ಲೀಲಾವತಿ ಬಿ, ಕೊರ್ಲಿಕೊಪ್ಪ ಆನಂದಪುರ ಸೀನಿಯರ್ ಕೆಟಗೆರೆ(21 ವರ್ಷ ಮೇಲ್ಪಟ್ಟವರ ವಿಭಾಗ)ದಲ್ಲಿ ಸ್ಪರ್ಧಿಸಿದ್ದರು. ಪವರ್‌ ಲಿಫ್ಟಿಂಗ್‌ ನ್ಯಾಷನಲ್‌ ಚಾಂಪಿಯನ್‌ಶಿಪ್‌ನಲ್ಲಿ ಶರತ್ ಶೆಟ್ಟಿ ಹಾಗೂ ಅನುಷಾ ಬೆಳ್ಳಿ ಪದಕ ಜಯಿಸಿದರೆ, ಲೀಲಾವತಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇನ್ನು ಮೆಘಾ ಪೆಟ್ಟರೋ ಹಾಗೂ ಗೌರವ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಪವರ್ ಲಿಫ್ಟಿಂಗ್ ಮುಖ್ಯ ತರಬೇತುದಾರರಾದ ಉಮೇಶ್ ಭೀಮನಕೋಣೆ, ಏರ್‌ಫೋರ್ಸ್‌ ಆಶಾಕಿರಣ ಶಾಲೆಯ ಪ್ರವೀಣ್ ಅವರ ಜತೆಗೆ, ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆಯ ಸಹಾಯಕ ಕೋಚ್‌ಗಳಾದ ಗೀತಾ ಎನ್. ಆದರ್ಶ ಸಿ. ಮಾರ್ಗದರ್ಶನದಲ್ಲಿ ಈ ವಿಶೇಷಚೇತನ ಮಕ್ಕಳು ಸಾಧನೆ ಮಾಡಿದ್ದಾರೆ. ಈ ನಾಲ್ವರು ದೆಹಲಿಯಲ್ಲಿ ತರಬೇತುದಾರರಾಗಿ ಕರ್ನಾಟವನ್ನು ಪ್ರತಿನಿಧಿಸಿದ್ದರು. ಈ ವಿಶೇಷಚೇತನ ಮಕ್ಕಳು ಸಾಧನೆಯು ಇಡೀ ಮಲೆನಾಡಿನ ಜನರು, ಪೋಷಕರು ಹಾಗೂ ಶಾಲಾ ಸಂಸ್ಥೆಯು ಹೆಮ್ಮೆಪಡುವಂತ ಸಾಧನೆ ಮಾಡಿದ್ದಾರೆ.

ಈ ಕ್ರೀಡಾಕೂಟದ ಬಗ್ಗೆ:

ವಿಶೇಷ ಚೇತನ ಮಕ್ಕಳಿಗಾಗಿಯೇ ವರ್ಷದಲ್ಲಿ ಮೂರು ಬಾರಿ ರಾಷ್ಟ್ರಮಟ್ಟದಲ್ಲಿ ಸ್ಪೆಷಲ್ ಒಲಿಂಪಿಕ್‌ ಭಾರತ್ ಸ್ಪರ್ಧೆ ಆಯೋಜಿಸಲಾಗುತ್ತದೆ. ಇದಾದ ಬಳಿಕ ನಾಲ್ಕನೇ ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ನಡೆಯುತ್ತೆದೆ. ಈ ಬಾರಿಯ ಕ್ರೀಡಾಕೂಟದಲ್ಲಿ ದೇಶದ 26 ರಾಜ್ಯಗಳ 170ಕ್ಕೂ ಹೆಚ್ಚು ವಿಕಲಚೇತನ ಪವರ್‌ಲಿಫ್ಟರ್‌ಗಳು ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಕರ್ನಾಟಕದ ಆರು ಮಂದಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಈ ರೀತಿಯ ವಿಶೇಷ ಚೇತನ ಮಕ್ಕಳಿಗೆ ತರಬೇತಿ ನೀಡುವುದು ಒಂದು ರೀತಿ ಚಾಲೆಂಜಿಂಗ್ ಆಗಿರುತ್ತದೆ. ನಾವು ಮಕ್ಕಳಿಗೆ ಹೀಗೆ ಮಾಡಿ ಎಂದು ಹೇಳಿದಾಗ ತಕ್ಷಣಕ್ಕೆ ಅರ್ಥವಾಗಲ್ಲ. ಇವರಿಗೆ ತರಬೇತಿ ನೀಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಗ್ರಾಮೀಣ ಮೂಲದ ಮಕ್ಕಳು ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದಿರುವುದು ಸಣ್ಣ ಸಾಧನೆಯೇನಲ್ಲ. ನನ್ನ ಜತೆ ಮತ್ತೋರ್ವ ಮುಖ್ಯ ತರಬೇತುದಾರರಾದ ಪ್ರವೀಣ್, ಸಹಾಯಕ ಕೋಚ್‌ಗಳಾದ ಗೀತಾ ಮೇಡಂ ಹಾಗೂ ಆದರ್ಶ್ ಅವರ ಸಹಕಾರ ತುಂಬಾ ಅನುಕೂಲವಾಯಿತು - ಉಮೇಶ್ ಭೀಮನಕೋಣೆ, ಮುಖ್ಯಕೋಚ್ ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆ ಸಾಗರ.

ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆಯ ಬಗ್ಗೆ:

2013ರಲ್ಲಿ ಮೂರು ವಿಶೇಷಚೇತನ ಮಕ್ಕಳಿಗಾಗಿ ಆರಂಭವಾದದ್ದು ಈ ಚೈತನ್ಯ ವಿಶೇಷ ಶಿಕ್ಷಣ ಶಾಲೆ. ಮೊದಲು ಮನೆಗಳಿಗೆ ಹೋಗಿ ಸ್ವಯಂ ಸೇವಕಿಯಾಗಿ ಬೇಸಿಕ್ ಸ್ಕಿಲ್ ಹೇಳಿಕೊಡುತ್ತಿದ್ದೆ. ಈಗ ನಮ್ಮ ಸಾಗರ ಸಮೀಪದ ಭೀಮನಕೋಣೆಯ ಈ ಸಂಸ್ಥೆಯಲ್ಲಿ 62 ವಿಶೇಷಚೇತನ ಮಕ್ಕಳಿದ್ದು, 15 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾವು ಈ ಮಕ್ಕಳಿಗೆ ಜೀವನ ಕೌಶಲಗಳ ಬಗ್ಗೆ, ಅವರ ಐಕ್ಯೂ ಹಾಗೂ ವಯಸ್ಸು ಗಮನದಲ್ಲಿಟ್ಟುಕೊಂಡು ದೈನಂದಿನ ಕೆಲಸ ಮಾಡುವ ಕೌಶಲಗಳನ್ನು ಹೇಳಿಕೊಡುತ್ತಿದ್ದೇವೆ.

18 ವರ್ಷದ ಮೇಲ್ಪಟ್ಟ ವಿಶೇಷ ಚೇತನರು ಚಾಕ್‌ಪೀಸ್, ಬಟ್ಟೆ ಹೊಲಿಗೆ, ಪೇಪರ್ ಕ್ರಾಪ್ಟ್ ಹೀಗೆ ವಿವಿಧ ಸ್ಕಿಲ್ ಕಲಿಸಿದ್ದೇವೆ. ಸ್ಪೀಚ್ ಥೆರಫಿ, ಫಿಸಿಯೋ ಥೆರಫಿ, ಮ್ಯೂಸಿಕ್ ಥೆರಫಿ, ಆಕ್ಯೂಪೇಷನಲ್ ಥೆರಫಿ ವ್ಯವಸ್ಥೆ ಇದೆ. ನಮ್ಮ ಶಾಲೆಯ ಮಕ್ಕಳು ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಮ್ಮ ಶಾಲೆಯ ಮಕ್ಕಳು 100ಕ್ಕೂ ಅಧಿಕ ಮೆಡಲ್ ಗೆದ್ದಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಇಂತದ್ದೊಂದು ವ್ಯವಸ್ಥೆಯಿರಲಿಲ್ಲ. ಆದರೆ ಸಿಕ್ಕ ಸೌಲಭ್ಯಗಳನ್ನು ಬಳಸಿಕೊಂಡು ಈ ಮಕ್ಕಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮದೇ ಹೆಜ್ಜೆಗುರುತನ್ನು ದಾಖಲಿಸುತ್ತಿರುವುದನ್ನು ನೋಡಿದರೆ ಹೆಮ್ಮೆ ಹಾಗೂ ತೃಪ್ತಿ ಎನಿಸುತ್ತದೆ. ಇದಕ್ಕೆ ರಾಘವೇಂದ್ರ ಬಿ ಎಚ್ ಸೇರಿದಂತೆ ಸಾಕಷ್ಟು ಮಂದಿ ಕೈಜೋಡಿಸಿದ್ದಾರೆ ಎಂದು ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆಯ ಸಂಸ್ಥಾಪಕಿ ಶಾಂತಲಾ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!
ಮೆಸ್ಸಿ ಜತೆ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡ ಅಮೃತಾ ಫಡ್ನವೀಸ್! ಮಹಾರಾಷ್ಟ್ರ ಸಿಎಂ ಪತ್ನಿ ಫುಲ್ ಟ್ರೋಲ್