ಸಿಂಗಾಪುರ ಓಪನ್‌: ಸೆಮಿಫೈನಲ್‌ಗೆ ಮುನ್ನಡೆದ ಸಿಂಧು

By Web Desk  |  First Published Apr 13, 2019, 11:36 AM IST

ಭಾರತದ ತಾರಾ ಬ್ಯಾಡ್ಮಿಂಟನ್ ಪಟುಗಳಾದ ಸೈನಾ-ಸಿಂಧು ನಡುವಿನ ಹೋರಾಟವನ್ನು ಜಪಾನಿನ ನಜೊಮಿ ಒಕುಹಾರ ತಪ್ಪಿಸಿದ್ದಾರೆ. ಸೈನಾ ಮಣಿಸಿದ ಒಕುಹಾರ ಇದೀಗ ಸಿಂಧು ಎದುರು ಸೆಮೀಸ್’ನಲ್ಲಿ ಕಾದಾಡಲಿದ್ದಾರೆ.


ಸಿಂಗಾಪುರ[ಏ.13]: ಸೋಲಿನ ದವಡೆಯಿಂದ ಪಾರಾಗಿ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದರೆ, ಸೈನಾ ನೆಹ್ವಾಲ್‌ ಹೀನಾಯ ಸೋಲು ಕಂಡು ಹೊರಬಿದ್ದಿದ್ದಾರೆ. ಕಿದಂಬಿ ಶ್ರೀಕಾಂತ್‌, ಸಮೀರ್‌ ವರ್ಮಾ, ಪ್ರಣವ್‌ ಚೋಪ್ರಾ-ಸಿಕ್ಕಿ ರೆಡ್ಡಿ ಸಹ ತಮ್ಮ ಅಭಿಯಾನ ಮುಕ್ತಾಯಗೊಳಿಸಿದ್ದಾರೆ.

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು, ವಿಶ್ವ ನಂ.18 ಹಾಗೂ 2017ರ ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನ ಕಂಚು ವಿಜೇತೆ ಚೀನಾದ ಕಾಯ್‌ ಯಾನ್‌ಯಾನ್‌ ವಿರುದ್ಧ 21-13, 17-21, 21-14 ಗೇಮ್‌ಗಳಲ್ಲಿ ಪ್ರಯಾಸದ ಗೆಲುವು ಸಾಧಿಸಿದರು. ಸೆಮೀಸ್‌ನಲ್ಲಿ ಸಿಂಧುಗೆ ಮಾಜಿ ವಿಶ್ವ ಚಾಂಪಿಯನ್‌ ಜಪಾನ್‌ನ ನಜೊಮಿ ಒಕುಹಾರ ಎದುರಾಗಲಿದ್ದಾರೆ. ಈ ಋುತುವಿನಲ್ಲಿ ಸಿಂಧುಗಿದು 2ನೇ ಸೆಮೀಸ್‌ ಆಗಿದೆ. ಕಳೆದ ತಿಂಗಳು ಇಂಡಿಯಾ ಓಪನ್‌ನಲ್ಲಿ ಅವರು ಅಂತಿಮ 4ರ ಹಂತಕ್ಕೇರಿದ್ದರು.

Latest Videos

undefined

2ನೇ ಶ್ರೇಯಾಂಕಿತೆ ಒಕುಹಾರ ತಮ್ಮ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ತಾರಾ ಶಟ್ಲರ್‌ ಸೈನಾ ನೆಹ್ವಾಲ್‌ ವಿರುದ್ಧ ನಿರಾಯಾಸವಾಗಿ ಗೆಲುವು ಸಾಧಿಸಿದರು. 21-8, 21-13 ಗೇಮ್‌ಗಳಲ್ಲಿ ಜಯಿಸಿ, ಸಿಂಧು-ಸೈನಾ ನಡುವೆ ಸೆಮೀಸ್‌ ಪೈಪೋಟಿ ಏರ್ಪಡುವುದನ್ನು ತಪ್ಪಿಸಿದರು. ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದ ಒಕುಹಾರ, ಸೈನಾಗೆ ಪುಟಿದೇಳಲು ಅವಕಾಶವನ್ನೇ ನೀಡಲಿಲ್ಲ.

ಕೆಂಟೊಗೆ ಶ್ರೀಕಾಂತ್‌ ಮತ್ತೆ ಶರಣು!: ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಭಾರತದ ಅಗ್ರ ಆಟಗಾರ ಕಿದಂಬಿ ಶ್ರೀಕಾಂತ್‌, ವಿಶ್ವ ನಂ.1 ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 18-21, 21-19, 9-21 ಗೇಮ್‌ಗಳಲ್ಲಿ ಸೋಲುಂಡರು. ಮೊಮೊಟಾ ವಿರುದ್ಧ ಶ್ರೀಕಾಂತ್‌ಗಿದು ಸತತ 9ನೇ ಸೋಲು. ವಿಶ್ವ ನಂ.16 ಸಮೀರ್‌ ವರ್ಮಾ, ಚೈನೀಸ್‌ ತೈಪೆಯ ಚೌ ಟಿಯಾನ್‌ ಚೆನ್‌ ವಿರುದ್ಧ 10-21, 21-15, 15-21 ಗೇಮ್‌ಗಳಲ್ಲಿ ಪರಾಭವಗೊಂಡು ಹೊರಬಿದ್ದರು.

ಮಿಶ್ರ ಡಬಲ್ಸ್‌ನ ಅಂತಿಮ 8ರ ಸುತ್ತಿನ ಪಂದ್ಯದಲ್ಲಿ ಪ್ರಣವ್‌ ಹಾಗೂ ಸಿಕ್ಕಿ, 3ನೇ ಶ್ರೇಯಾಂಕಿತ ಜೋಡಿಯಾದ ಥಾಯ್ಲೆಂಡ್‌ನ ಡೆಚಪೊಲ್‌ ಹಾಗೂ ಸಪ್ಸಿರೆ ವಿರುದ್ಧ 14-21, 16-21 ನೇರ ಗೇಮ್‌ಗಳಲ್ಲಿ ಸೋತು ನಿರಾಸೆ ಅನುಭವಿಸಿತು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...https://kannada.asianetnews.com/topic/loksabha-elections-2019

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!