
ಭಾರತ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ನಿರೀಕ್ಷೆಯಂತೆ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಅನಿಲ್ ಕುಂಬ್ಳೆ ಕೋಚ್ ಸ್ಥಾನದಿಂದ ಕೆಳಗಿಳಿದ ಬಳಿಕ ಮತ್ತಷ್ಟುಮಂದಿಗೆ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಬಿಸಿಸಿಐ ಅವಕಾಶ ನೀಡಿದ್ದು, ಜುಲೈ 9ರ ವರೆಗೂ ಕಾಲಾವಕಾಶ ನೀಡಿದೆ.
‘ಹೌದು, ರವಿಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಹುದ್ದೆಗೇರಲು ಅವರು ಬಹಳ ಉತ್ಸುಕರಾಗಿದ್ದಾರೆ' ಎಂದು ಶಾಸ್ತ್ರಿಯವರ ಆಪ್ತ ಮೂಲವೊಂದು ತಿಳಿಸಿದೆ.
ಈ ಮೊದಲು ಕೋಚ್ ಸ್ಥಾನ ನೀಡುವುದಾದರೆ ಮಾತ್ರ ತಾನು ಅರ್ಜಿ ಸಲ್ಲಿಸುವುದಾಗಿ ಶಾಸ್ತ್ರಿ ಹೇಳಿದ್ದರು ಎಂದು ವರದಿಯಾಗಿತ್ತು. ಆದರೆ ಈ ವರದಿಗಳನ್ನು ಶಾಸ್ತ್ರಿ ತಳ್ಳಿಹಾಕಿದ್ದು, ತಾವು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ಹೊಸದಾಗಿ ನೇಮಕಗೊಳ್ಳುವ ಕೋಚ್ 2019ರ ಏಕದಿನ ವಿಶ್ವಕಪ್ ವರೆಗೂ ಮುಂದುವರಿಯಲಿದ್ದಾರೆ ಎಂದು ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿದ್ದು, ಶಾಸ್ತ್ರಿ ತಮ್ಮ ನೇಮಕದ ಜೊತೆಗೆ ಬೌಲಿಂಗ್ ಕೋಚ್ ಭರತ್ ಅರುಣ್ ಅವರನ್ನೂ ಪುನರ್ ನೇಮಿಸಬೇಕು ಎಂದು ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗಿದೆ. ಶಾಸ್ತ್ರಿ ಭಾರತ ತಂಡದೊಂದಿಗಿದ್ದಾಗ ಜೊತೆಗಿದ್ದ ಭರತ್ ಅರುಣ್, ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
2014ರ ಆಗಸ್ಟ್‌ನಿಂದ ಜೂನ್ 2016ರ ವರೆಗೂ ಭಾರತ ತಂಡದ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಅವರ ಸ್ಥಾನವನ್ನು 2016ರಲ್ಲಿ ಅನಿಲ್ ಕುಂಬ್ಳೆ ತುಂಬಿದ್ದರು. ಸದ್ಯ ಕುಂಬ್ಳೆ ರಾಜೀನಾಮೆಯಿಂದಾಗಿ ತೆರವುಗೊಂಡಿರುವ ಕೋಚ್ ಸ್ಥಾನವನ್ನು ಶಾಸ್ತ್ರಿ ತುಂಬುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಶಾಸ್ತ್ರಿ ನಿರ್ದೇಶಕರಾಗಿದ್ದ ಅವಧಿಯಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿ ಗೆದ್ದಿತ್ತು. ಅಲ್ಲದೇ 2015ರ ಏಕದಿನ ವಿಶ್ವಕಪ್ ಹಾಗೂ 2016ರ ಟಿ20 ವಿಶ್ವಕಪ್‌ಗಳಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ, ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಹಾಗೂ ಆಸ್ಪ್ರೇಲಿಯಾದಲ್ಲಿ ಟಿ20 ಸರಣಿಯನ್ನು ವಶಪಡಿಸಿಕೊಂಡಿತ್ತು.
ಅರ್ಜಿ ಸಲ್ಲಿಸಲು ಕೊಹ್ಲಿ ಮನವಿ?
ಎಲ್ಲಾ ಮೂರೂ ಮಾದರಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿರುವ ವಿರಾಟ್ ಕೊಹ್ಲಿ, ರವಿಶಾಸ್ತ್ರಿಯೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ. ಕಳೆದ ವರ್ಷ ಶಾಸ್ತ್ರಿಯವರೇ ಪ್ರಧಾನ ಕೋಚ್ ಆದರೆ ಒಳ್ಳೇದು ಎಂದು ಕೊಹ್ಲಿ ಬಿಸಿಸಿಐಗೆ ತಿಳಿಸಿದ್ದರು ಎಂದು ಹೇಳಲಾಗಿತ್ತು. ಇದೀಗ, ಕೋಚ್ ಆಯ್ಕೆಯಲ್ಲಿ ಕೊಹ್ಲಿಗೆ ಯಾವುದೇ ಅಧಿಕಾರವಿಲ್ಲ ಎಂದು ಬಿಸಿಸಿಐ ಹೇಳಿದ್ದರೂ, ಕೆಲ ಮೂಲಗಳ ಪ್ರಕಾರ ಭಾರತೀಯ ನಾಯಕನಿಗೆ ಹೊಂದಿಕೊಳ್ಳುವ ಕೋಚ್‌ನ ಹುಡುಕಾಟದಲ್ಲಿ ಬಿಸಿಸಿಐ ತೊಡಗಿದೆ ಎನ್ನಲಾಗಿದೆ. ಹೀಗಾಗಿ, ಇಷ್ಟುದಿನ ಸುಮ್ಮನಿದ್ದ ಶಾಸ್ತ್ರಿ ಇದೀಗ ದಿಢೀರನೆ ಅರ್ಜಿ ಸಲ್ಲಿಸಲು ಆಸಕ್ತಿ ತೋರಿರುವುದು ಕೆಲ ಪ್ರಶ್ನೆಗಳು ಉದ್ಭವವಾಗಲು ಕಾರಣವಾಗಿದ್ದು, ಕೊಹ್ಲಿ ಮನವಿ ಮೇರೆಗೆ ಶಾಸ್ತ್ರಿ ಅರ್ಜಿ ಸಲ್ಲಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಶಾಸ್ತ್ರಿ ಕೋಚ್ ಆಗಲು ಒಪ್ಪುತ್ತಾರಾ ಗಂಗೂಲಿ?
ಕೊಹ್ಲಿಯ ನೆಚ್ಚಿನ ಅಭ್ಯರ್ಥಿಯಾಗಿದ್ದರೂ ಸಲಹಾ ಸಮಿತಿ ಸದಸ್ಯರಾಗಿರುವ ಗಂಗೂಲಿ ಜತೆ ರವಿಶಾಸ್ತ್ರಿ ಉತ್ತಮ ಸಂಬಂಧ ಹೊಂದಿಲ್ಲ. ಕಳೆದ ವರ್ಷ ತಮಗೆ ಕೋಚ್ ಸ್ಥಾನ ಕೈತಪ್ಪಲು ಗಂಗೂಲಿಯೇ ಕಾರಣ, ತಾವು ಸಂದರ್ಶನ ನೀಡುವ ವೇಳೆ ಅವರಿರಲಿಲ್ಲ ಎಂದು ಶಾಸ್ತ್ರಿ ಆರೋಪಿಸಿದ್ದರು. ಅದಕ್ಕುತ್ತರಿಸಿದ್ದ ಗಂಗೂಲಿ, ಕೋಚ್ ಹುದ್ದೆ ಅತ್ಯಂತ ಗೌರವದ ಹುದ್ದೆ. ಇದಕ್ಕೆ ಖುದ್ದಾಗಿ ಹಾಜರಾಗಿ ಸಂದರ್ಶನ ನೀಡಬೇಕೇ ಹೊರತು, ಎಲ್ಲೋ ಪ್ರವಾಸಕ್ಕೆ ತೆರಳಿ ಅಲ್ಲಿಂದಲೇ ಮಾತ ನಾಡುವುದಲ್ಲ ಎಂದಿದ್ದರು. ಇದೀಗ ಕುಂಬ್ಳೆ-ಕೊಹ್ಲಿ ವಿವಾದವನ್ನು ಇನ್ನಷ್ಟುಪರಿಪಕ್ವತೆಯೊಂದಿಗೆ ನಿಭಾಯಿಸಬೇಕಿತ್ತು ಎಂದಿರುವ ಗಂಗೂಲಿ, ಶಾಸ್ತ್ರಿ ಅರ್ಜಿ ಸಲ್ಲಿಸಿರುವುದರಲ್ಲಿ ತಪ್ಪೇನಿಲ್ಲ. ಯಾರು ಬೇಕಿದ್ದರೂ ಕೋಚ್ ಆಗಬಹುದು ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.