ಪ್ಯಾನ್ ಪೆಸಿಫಿಕ್ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾನಿಯಾ-ಸ್ಟ್ರಿಕೋವಾ ಜೋಡಿ

By Internet DeskFirst Published Sep 24, 2016, 2:29 PM IST
Highlights

ಟೋಕಿಯೊ(ಸೆ.24): ಪ್ರಚಂಡ ಪ್ರದರ್ಶನ ನೀಡಿದ ಭಾರತದ ನಂ.1 ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಆಕೆಯ ಜೆಕ್ ಗಣರಾಜ್ಯದ ಜತೆಯಾಟಗಾರ್ತಿ ಬಾರ್ಬೊರಾ ಸ್ಟ್ರಿಕೋವಾ ಜೋಡಿ ಪ್ಯಾನ್ ಪೆಸಿಫಿಕ್ ಓಪನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿದೆ.

ಇಂದು ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಚೀನಾದ ಚೆನ್ ಲಿಯಾಂಗ್ ಮತ್ತು ಝಾವೊಕ್ಸುವಾನ್ ಯಾಂಗ್ ಜೋಡಿಯನ್ನು 6-1, 6-1 ಸೆಟ್‌ಗಳಿಂದ ಮಣಿಸಿದ ಸಾನಿಯಾ-ಸ್ಟ್ರಿಕೋವಾ ಪ್ರಶಸ್ತಿಗೆ ಮುತ್ತಿಕ್ಕಿದರು.

Latest Videos

ಈ ಋತುವಿನ ಕೊನೆಯ ಗ್ರಾಂಡ್‌ಸ್ಲಾಮ್ ಟೆನಿಸ್ ಟೂರ್ನಿಯಾದ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಸಾನಿಯಾ-ಸ್ಟ್ರಿಕೋವಾ ಜೋಡಿ ಎಂಟರ ಹಂತದಲ್ಲಿ ಮುಗ್ಗರಿಸಿತ್ತು.

ಅಂದಹಾಗೆ ಮಾರ್ಟಿನಾ ಹಿಂಗಿಸ್ ಜತೆಗಿನ ಸಖ್ಯವನ್ನು ಕಡಿದುಕೊಂಡ ಬಳಿಕ ಮೂರನೇ ಟೂರ್ನಿಯಲ್ಲಿ ಆಡುತ್ತಿರುವ ಈ ಇಂಡೋ-ಜೆಕ್ ಜೋಡಿ ಆಡಿದ ಮೂರರಲ್ಲಿ ಗೆದ್ದ ಎರಡನೇ ಟೂರ್ನಿ ಇದು. ಕಳೆದ ತಿಂಗಳು ಸಿನ್ಸಿನಾಟಿ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಮಾರ್ಟಿನಾ ಹಿಂಗಿಸ್ ಮತ್ತು ಕೊಕೊ ವಾಂಡೆವೆಘೆ ವಿರುದ್ಧ 7-5, 6-4 ಸೆಟ್‌ಗಳ ಪ್ರಯಾಸದ ಗೆಲುವಿನೊಂದಿಗೆ ಸಾನಿಯಾ ಜೋಡಿ ಚಾಂಪಿಯನ್ ಎನಿಸಿತ್ತು.

ಇನ್ನು ಟೋಕಿಯೊದಲ್ಲಿನ ಈ ವಿಜಯೋತ್ಸವದಿಂದಾಗಿ ಸಾನಿಯಾ ವೃತ್ತಿಬದುಕಿನಲ್ಲಿ 40ನೇ ಪ್ರಶಸ್ತಿ ಗೆಲುವು ಸಾಧಿಸಿದಂತಾಗಿದೆ. ಅಂತೆಯೇ ಟೋಕಿಯೊದಲ್ಲಿ ಇದು ಆಕೆಗೆ ಮೂರನೇ ಪ್ರಶಸ್ತಿ. ಈ ಹಿಂದೆ ಎರಡು ಬಾರಿ ಜಿಂಬಾಬ್ವೆಯ ಕಾರಾ ಬ್ಲಾಕ್ ಜತೆಗೂಡಿ ಸಾನಿಯಾ ಪ್ರಶಸ್ತಿ ಗೆದ್ದಿದ್ದರು.

click me!