ಹೃದಯಾಘಾತದಿಂದ 24 ವರ್ಷದ ರಾಷ್ಟ್ರೀಯ ವಾಲಿಬಾಲ್‌ ಆಟಗಾರ್ತಿ ಸಾವು!

By Santosh Naik  |  First Published May 31, 2023, 12:52 PM IST

ಕೇವಲ ಒಂದು ವರ್ಷದ ಹಿಂದೆ ವಿವಾಹವಾಗಿದ್ದ 24 ವರ್ಷದ ರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಆಟಗಾರ್ತಿ, ಉಜಿರೆ ಎಸ್‌ಡಿಎಂ ಕಾಲೇಜಿನ ಮಾಜಿ ವಿದ್ಯಾರ್ಥಿ ಸಲೀಯತ್‌ ಹೃದಯಾಘಾತದಿಂದ ಸಾವು ಕಂಡಿದ್ದಾರೆ.
 


ಮಂಗಳೂರು (ಮೇ. 31): ರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಆಟಗಾರ್ತಿ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ಮಾಜಿ ವಿದ್ಯಾರ್ಥಿ ಸಲೀಯತ್‌ ಬುಧವಾರ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಅವರಿಗೆ 24 ವರ್ಷ ವಯಸ್ಸಾಗಿತ್ತು. ಪಡಂಗಡಿ ಪೊಯ್ಯೆಗುಡ್ಡೆಯ ನಿವಾಸಿಯಾಗಿದ್ದ ಸಲೀಯತ್‌ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದರು. ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರಿನಲ್ಲಿರುವ ಪತಿಯ ಮನೆಯಲ್ಲಿ ಅವರು ವಾಸವಾಗಿದ್ದರು. ಮಂಗಳವಾರ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಾವು ಕಂಡಿದ್ದಾರೆ. ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಕೂಡ ಹೃದಯಾಘಾತದಿಂದ ಸಲೀಯತ್‌ ಸಾವು ಕಂಡಿದ್ದಾರೆ ಎಂದು ತಿಳಿಸಿದ್ದಾರೆ. ಪಡಂಗಡಿ ಪ್ರಾಥಮಿಕ ಶಾಲೆಯಲ್ಲಿ 9ನೇ ತರಗತಿ ಹಾಗೂ ಮುಂಡಾಜೆ ಅನುದಾನಿತ ಪ್ರೌಢಶಾಲೆಯಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿದ ಸಲೀಯತ್‌, ಉಜಿರೆ ಎಸ್‌ಡಿಎಂನಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಪಡೆಯುವ ವೇಳೆ ತಮ್ಮ ಅಸಾಧಾರಣ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು. ಆಕೆಯ ಮೆಂಟರ್‌ ಆಗಿದ್ದ ಹೈದರ್‌ ಪಡಂಗಡಿ ಅವರ ಮಾರ್ಗದರ್ಶನದಲ್ಲಿ ವಾಲಿಬಾಲ್‌ ಕೌಶಲ್ಯವನ್ನು ಮೆರೆದಿದ್ದಲ್ಲದೆ, ಆಟದಲ್ಲೂ ಗಮನಸೆಳೆದರು.

ಮುಂಡಾಜೆ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣದ ಸಮಯದಲ್ಲಿ, ಸಲೀಯತ್‌ ಅವರು ದೈಹಿಕ ಶಿಕ್ಷಣಕ್ಕೆ ಮೀಸಲಾಗಿದ್ದ ಶಿಕ್ಷಕರಾದ ಗುಣಪಾಲ್ ಎಂ.ಎಸ್ ಅವರಿಂದ ಅಮೂಲ್ಯವಾದ ತರಬೇತಿಯನ್ನು ಪಡೆದರು. ವಾಲಿಬಾಲ್‌ನಲ್ಲಿ ಅಪಾರ ಪ್ರತಿಭೆಯನ್ನು ತೋರಿದ್ದ ಸಲೀಯತ್‌,  ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ಎರಡನೇ ಸ್ಥಾನ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಬಳಿಕ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದ ಸಲೀಯತ್‌, ಕರ್ನಾಟಕ ರಾಜ್ಯವನ್ನು ಈ ಸಮಯದಲ್ಲಿ ಪ್ರತಿನಿಧಿಸುವ ಮೂಲಕ ಅತ್ಯುತ್ತಮ ವಾಲಿಬಾಲ್‌ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಉಜಿರೆ ಎಸ್‌ಡಿಎಂನ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಅವರ ತರಬೇತುದಾರರ ಅವಿರತ ಬೆಂಬಲ ಮತ್ತು ಕಠಿಣ ಪರಿಶ್ರಮದಿಂದ ಈ ಗಮನಾರ್ಹ ಸಾಧನೆ ಮಾಡಿದ್ದರು.

ಹೊಟ್ಟೆಯ ಕ್ಯಾನ್ಸರ್‌ನಿಂದಾಗಿ 29ನೇ ವರ್ಷದಲ್ಲಿಯೇ ಸಾವು ಕಂಡ ಪ್ರಖ್ಯಾತ ವಾಲಿಬಾಲ್‌ ಪ್ಲೇಯರ್‌!

ಕ್ರೀಡೆಯಲ್ಲಿನ ಸಲೀಯತ್‌ ಅವರ ಅಸಾಮಾನ್ಯ ಸಾಧನೆಯಲ್ಲಿ ರಾಷ್ಟ್ರೀಯ ವಾಲಿಬಾಲ್‌ನಲ್ಲಿ ಬೆಳ್ಳಿ ಪದಕ, ಹಿರಿಯ ರಾಷ್ಟ್ರೀಯ ದಕ್ಷಿಣ ವಲಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಜೂನಿಯರ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಇವರು ಜಯಿಸಿದ್ದರು. ಈಕೆಯ ಅಪೂರ್ವ ಸಾಧನೆಗೆ ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Tap to resize

Latest Videos

'ಚೆನ್ನೈ ಗೆಲುವಿಗೆ ಸಹಾಯ ಮಾಡಿದ್ದು ಬಿಜೆಪಿ ಕಾರ್ಯಕರ್ತ' ಡಿಎಂಕೆಗೆ ತಿವಿದ ಅಣ್ಣಾಮಲೈ!

click me!