
"
ಬೆಂಗಳೂರು[ಸೆ.11]: ಟೀಂ ಇಂಡಿಯಾ ಸೀಮಿತ ಓವರ್ ತಂಡದ ಉಪನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಭಡ್ತಿ ಪಡೆಯುವುದು ಬಹುತೇಕ ಪಕ್ಕಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಕೆ.ಎಲ್ ರಾಹುಲ್ ಅವರನ್ನು ಕೈಬಿಟ್ಟು, ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯವಿರಬಹುದು, ಆದ್ರೆ...?
ರೋಹಿತ್ ಶರ್ಮಾ ಆರಂಭಿಕನನ್ನಾಗಿ ಪರಿಗಣಿಸಲು ಕಾರಣವೇನಿರಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಏಕದಿನ ಹಾಗೂ ಟಿ20 ಮಾದರಿಯಲ್ಲಿ ಅದ್ಭುತ ಲಯದಲ್ಲಿರುವ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ರೋಹಿತ್ ಈ ವರೆಗೂ 27 ಟೆಸ್ಟ್‌ಗಳನ್ನು ಆಡಿದ್ದು ಒಮ್ಮೆಯೂ ಆರಂಭಿಕನಾಗಿ ಕಣಕ್ಕಿಳಿದಿಲ್ಲ. ಆದರೆ ಪ್ರಥಮ ದರ್ಜೆ ಪಂದ್ಯಗಳಲ್ಲಿ ಮುಂಬೈ ಪರ ಆರಂಭಿಕನಾಗಿ ಆಡಿದ ಅನುಭವ ಹೊಂದಿದ್ದಾರೆ.
ರಾಹುಲ್ ಬದಲು ರೋಹಿತ್ ಟೆಸ್ಟ್ ಓಪನರ್?
2007ರಲ್ಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರೂ, ರೋಹಿತ್ ಶರ್ಮಾ ಯಶಸ್ಸು ಕಂಡಿದ್ದು 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆರಂಭಿಕನಾಗಿ ಆಡಿದ ಬಳಿಕ. ವೀರೇಂದ್ರ ಸೆಹ್ವಾಗ್ ನಿವೃತ್ತಿ ಬಳಿಕ ಟೆಸ್ಟ್‌ನಲ್ಲಿ ಭಾರತಕ್ಕೆ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಸಿಕ್ಕಿಲ್ಲ. ರೋಹಿತ್, ಏಕದಿನ ಹಾಗೂ ಟಿ20ಯಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಟೆಸ್ಟ್‌ನಲ್ಲೂ ಅವರನ್ನು ಆರಂಭಿಕನನ್ನಾಗಿ ಆಡಿಸುವ ಪ್ರಯೋಗ ಕೈಹಿಡಿಯಬಹುದು ಎನ್ನುವುದು ಬಿಸಿಸಿಐ ಲೆಕ್ಕಾಚಾರ.
ಬಿಸಿಸಿಐ ಮುಂದಿರುವ ಆಯ್ಕೆಗಳು?
ಮುರಳಿ ವಿಜಯ್, ಶಿಖರ್ ಧವನ್‌ರನ್ನು ಟೆಸ್ಟ್ ತಂಡದಿಂದ ಹೊರಗಿಟ್ಟಿರುವ ಬಿಸಿಸಿಐ, ವಿವಿಧ ಆಯ್ಕೆಗಳನ್ನು ಪ್ರಯತ್ನಿಸುತ್ತಿದೆ. ಕರ್ನಾಟಕದ ಮಯಾಂಕ್ ಅಗರ್‌ವಾಲ್ ಸದ್ಯ ತಂಡದ ಆರಂಭಿಕನಾಗಿದ್ದಾರೆ. ಅ.2ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಯಾಂಕ್ ಜತೆ ರೋಹಿತ್ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಇದಲ್ಲದೆ ಬಿಸಿಸಿಐ ಮುಂದೆ ಮತ್ತೆ ಕೆಲ ಆಯ್ಕೆಗಳಿವೆ.
ಇತ್ತೀಚಿನ ದುಲೀಪ್ ಟ್ರೋಫಿ ಸೇರಿದಂತೆ ದೇಸಿ ಕ್ರಿಕೆಟ್‌ನಲ್ಲಿ ಕಳೆದ ಕೆಲ ವರ್ಷಗಳಿಂದ ಗುಜರಾತ್ನ ಪ್ರಿಯಾಂಕ್ ಪಾಂಚಾಲ್, ಬಂಗಾಳದ ಅಭಿಮನ್ಯು ಈಶ್ವರನ್, ಪಂಜಾಬ್‌ನ ಶುಭ್‌ಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈನ ಪೃಥ್ವಿ ಶಾ ನಿಷೇಧ ಎದುರಿಸುತ್ತಿದ್ದು, ನ.15ರ ಬಳಿಕ ಆಯ್ಕೆಗೆ ಲಭ್ಯರಾಗಲಿದ್ದಾರೆ.
‘ರಾಹುಲ್ ಪ್ರತಿಭಾನ್ವಿತ ಆಟಗಾರ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅವರ ಸದ್ಯದ ಬ್ಯಾಟಿಂಗ್ ಲಯದ ಬಗ್ಗೆ ಕಳವಳ ಶುರುವಾಗಿದೆ. ಹೀಗಾಗಿ ರೋಹಿತ್ ಶರ್ಮಾರನ್ನು ಆರಂಭಿಕನನ್ನಾಗಿ ಪರಿಗಣಿಸಲು ಚಿಂತಿಸಿದ್ದೇವೆ‘
- ಎಂ.ಎಸ್.ಕೆ.ಪ್ರಸಾದ್, ಪ್ರಧಾನ ಆಯ್ಕೆಗಾರ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.