ಏಷ್ಯಾ ಕಪ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಎರಡನೇ ದಿನವೂ ಮುಂದುವರೆದಿದೆ. ಭಾರತದ ತಾರಾ ಸೈಕ್ಲಿಸ್ಟ್ ರೋನಾಲ್ಡೋ ಲೈಟೊನ್ಜಾಮ್ ಏಷ್ಯಾ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ
ನವದೆಹಲಿ[ಸೆ.11]: ಭಾರತದ ತಾರಾ ಸೈಕ್ಲಿಸ್ಟ್ ರೋನಾಲ್ಡೋ ಲೈಟೊನ್ಜಾಮ್, ಇಲ್ಲಿ ನಡೆಯುತ್ತಿರುವ ಟ್ರ್ಯಾಕ್ ಏಷ್ಯಾ ಕಪ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನ ಕಿರಿಯ ಪುರುಷರ 200 ಮೀ. ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ನೂತನ ಏಷ್ಯನ್ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.
ಮೊದಲ ದಿನದ ಸ್ಪರ್ಧೆಯಲ್ಲಿ 2 ಚಿನ್ನ ಗೆದ್ದಿದ್ದ ರೋನಾಲ್ಡೋ, 10.065 ಸೆ.ಗಳಲ್ಲಿ ಗುರಿ ಮುಟ್ಟಿದರು. ಚೀನಾದ ಸೈಕ್ಲಿಸ್ಟ್ ಲಿಯು ಕಿ, 2018ರಲ್ಲಿ 10.149 ಸೆ.ಗಳಲ್ಲಿ ಗುರಿ ತಲುಪಿ ನಿರ್ಮಿಸಿದ್ದ ದಾಖಲೆಯನ್ನು ರೋನಾಲ್ಡೋ ಮುರಿದರು.
ಏಷ್ಯಾ ಕಪ್ ಸೈಕ್ಲಿಂಗ್ ಚಾಂಪಿಯನ್‌ಶಿಪ್: ರಾಜ್ಯದ ವೆಂಕಪ್ಪಗೆ ಬೆಳ್ಳಿ
ರಾಜ್ಯದ ವೆಂಕಪ್ಪಗೆ ಚಿನ್ನ: ಮೊದಲ ದಿನ ಬೆಳ್ಳಿ ಜಯಿಸಿದ್ದ ಕರ್ನಾಟಕದ ವೆಂಕಪ್ಪ ಕೆಂಗಲಗುತ್ತಿ, 2ನೇ ದಿನ ಕಿರಿಯ ಪುರುಷರ 3 ಕಿ.ಮೀ. ವೈಯಕ್ತಿಕ ಪಸ್ರ್ಯೂಟ್ ಸ್ಪರ್ಧೆಯಲ್ಲಿ (3:30. 106 ಸೆ.ಗಳಲ್ಲಿ) ಚಿನ್ನ ಜಯಿಸಿದರು. ಸಾಯ್‌ನ ಮೂಲ ರಾಮ್ ಬೆಳ್ಳಿ ಗೆದ್ದರು. ಪುರುಷರ 4 ಕಿ.ಮೀ ಎಲೈಟ್ ವೈಯಕ್ತಿಕ ಪಸ್ರ್ಯೂಟ್ ಸ್ಪರ್ಧೆಯಲ್ಲಿ ಪೂನಮ್ ಬೆಳ್ಳಿ ಗೆದ್ದರು. ಎಲೈಟ್ ಮಹಿಳೆಯರ 3 ಕಿ.ಮೀ. ವೈಯಕ್ತಿಕ ಪಸ್ರ್ಯೂಟ್ ಸ್ಪರ್ಧೆಯಲ್ಲಿ ಎಲಂಗ್ಬಮ್ ಮತ್ತು ಇರುಂಗ್ಬಮ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು.
ಕಿರಿಯ ಮಹಿಳೆಯರ 2 ಕಿ.ಮೀ. ವೈಯಕ್ತಿಕ ಪಸ್ರ್ಯೂಟ್ ಸ್ಪರ್ಧೆಯಲ್ಲಿ ಸಾಯ್‌ನ ಸ್ವಸ್ಥಿ ಸಿಂಗ್ ಕಂಚು ಜಯಿಸಿದರು. ಭಾರತ, 2ನೇ ದಿನ 2 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನೊಂದಿಗೆ 7 ಪದಕ ಜಯಿಸಿತು. ಒಟ್ಟಾರೆ ಭಾರತ 19 ಪದಕ ಗೆದ್ದಿದೆ.