
ನಾಗಪುರ್(ಅ. 01): ಅದ್ಭುತ ಫಾರ್ಮ್'ನಲ್ಲಿರುವ ರೋಹಿತ್ ಶರ್ಮಾ ಇಂದು ಕೆಲವಾರು ಮಹತ್ವದ ದಾಖಲೆಗಳು ಹಾಗೂ ಮೈಲಿಗಲ್ಲುಗಳನ್ನು ಮುಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 5ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕೊಹ್ಲಿ ಮತ್ತು ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ. ತವರಿನಲ್ಲಿ ಏಕದಿನ ಕ್ರಿಕೆಟ್'ನಲ್ಲಿ ಅತೀ ವೇಗವಾಗಿ 2 ಸಾವಿರ ರನ್ ಗಳಿಸಿದ ದಾಖಲೆ ಈಗ ರೋಹಿತ್ ಶರ್ಮಾ ಪಾಲಾಗಿದೆ. ರೋಹಿತ್ 42 ಇನ್ನಿಂಗ್ಸಲ್ಲಿ ಈ ಮೈಲಿಗಲ್ಲು ಮುಟ್ಟಿದ್ದಾರೆ. ಗಂಗೂಲಿ ಮತ್ತು ಕೊಹ್ಲಿ ಈ ಮೈಲಿಗಲ್ಲು ತಲುಪಲು 45 ಹಾಗೂ 46 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಆಸ್ಟ್ರೇಲಿಯಾ ತಂಡದ ವಿರುದ್ಧ ರನ್'ಗಳ ಸುಗ್ಗಿ ಕಾಣುವ ರೋಹಿತ್ ಶರ್ಮಾ ಸಿಕ್ಸರ್'ಗಳ ದಾಖಲೆಯನ್ನೂ ಸ್ಥಾಪಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್'ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ರೋಹಿತ್ ಮೊದಲ ಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್'ನ ಬ್ರೆಂಡಾನ್ ಮೆಕಲಮ್ ಅವರ ದಾಖಲೆಯನ್ನು ಅವರು ಕೆಳಗೆ ನೂಕಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ರೋಹಿತ್ 144 ಸಿಕ್ಸರ್ ಸಿಡಿಸಿದ್ದಾರೆ.
ಇದೇ ವೇಳೆ, ರೋಹಿತ್ ಶರ್ಮಾ ಏಕದಿನ ಕ್ರಿಕೆಟ್'ನಲ್ಲಿ 6 ಸಾವಿರ ರನ್ ಪೂರೈಸಿದ ಗೌರವಕ್ಕೆ ಪಾತ್ರರಾಗಿದ್ದಾರೆ. 168ನೇ ಪಂದ್ಯ ಹಾಗೂ 162ನೇ ಇನ್ನಿಂಗ್ಸಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಅತೀ ವೇಗವಾಗಿ 6 ಸಾವಿರ ರನ್ ಪೂರೈಸಿದವರ ಪಟ್ಟಿಯಲ್ಲಿ ರೋಹಿತ್ 13ನೇ ಸ್ಥಾನದಲ್ಲಿದ್ದಾರೆ.
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ 14ನೇ ಶತಕವನ್ನೂ ಭಾರಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 26ನೇ ಬ್ಯಾಟ್ಸ್'ಮ್ಯಾನ್, ಹಾಗೂ ಭಾರತದ 6ನೇ ಬ್ಯಾಟ್ಸ್'ಮ್ಯಾನ್ ಅವರಾಗಿದ್ದಾರೆ.
ಹ್ಯಾಟ್ರಿಕ್ ಶತಕದ ಜೊತೆಯಾಟ:
ಆಸ್ಟ್ರೇಲಿಯಾ ವಿರುದ್ಧದ ಪ್ರಸಕ್ತ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಇನ್ನೊಂದು ಗೌರವಕ್ಕೂ ಪಾತ್ರರಾಗಿದ್ದಾರೆ. ಅಜಿಂಕ್ಯ ರಹಾನೆ ಜೊತೆ ರೋಹಿತ್ ಶರ್ಮಾ ಸತತ ಮೂರು ಪಂದ್ಯಗಳಲ್ಲಿ ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಶತಕದ ಜೊತೆಯಾಟದಲ್ಲಿ ಅವರ ಹೆಸರು ಮೂಡಿಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.