ಶರ್ಮಾ ಭರ್ಜರಿ ಶತಕ; ಆಸೀಸ್'ಗೆ ಹೀನಾಯ ಸೋಲುಣಿಸಿದ ಭಾರತಕ್ಕೆ 4-1 ಸರಣಿ ಗೆಲುವು

By Suvarna Web DeskFirst Published Oct 1, 2017, 5:50 PM IST
Highlights

ಭಾರತ ತಂಡವು ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್'ನಲ್ಲಿ ಮತ್ತೊಮ್ಮೆ ವಿಶ್ವದ ನಂ. 1 ಪಟ್ಟ ಅಲಂಕರಿಸಿಕೊಂಡಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಕ್ಟೋಬರ್ 7ರಿಂದ ಮೂರು ಟಿ20 ಪಂದ್ಯಗಳು ನಡೆಯಲಿವೆ. ರಾಂಚಿ, ಗುವಾಹಟಿ ಹಾಗೂ ಹೈದರಾಬಾದ್'ನಲ್ಲಿ ಈ ಪಂದ್ಯಗಳು ನಡೆಯಲಿವೆ.​

ನಾಗಪುರ್(ಅ. 01): ರೋಹಿತ್ ಶರ್ಮಾ ಅವರ ಭರ್ಜರಿ ಶತಕದ ನೆರವಿನಿಂದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ 5ನೇ ಪಂದ್ಯವನ್ನು ನಿರೀಕ್ಷೆಮೀರಿ ಸುಲಭ ಗೆಲುವು ಸಾಧಿಸಿದೆ. ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತವು 7 ವಿಕೆಟ್'ಗಳಿಂದ ಜಯಭೇರಿ ಭಾರಿಸಿದೆ. ಗೆಲ್ಲಲು 243 ರನ್'ಗಳ ಸಾಧಾರಣ ಗುರಿಯನ್ನು ಇನ್ನೂ 43 ಎಸೆತ ಬಾಕಿ ಇರುವಂತೆಯೇ ಯಶಸ್ವಿಯಾಗಿ ಬೆನ್ನಟ್ಟಿ ದಿಗ್ವಿಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು 4-1ರಿಂದ ವಶಪಡಿಸಿಕೊಂಡಿದೆ.

ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್'ಗೆ 124 ರನ್ ಜೊತೆಯಾಟ ನೀಡಿದಾಗಲೇ ಭಾರತದ ಗೆಲುವು ಬಹುತೇಕ ಖಚಿತವಾಗಿತ್ತು. ಇವರಿಬ್ಬರು ಸತತ ಮೂರು ಪಂದ್ಯಗಳಲ್ಲಿ ಶತಕದ ಜೊತೆಯಾಟ ನೀಡಿರುವುದು ವಿಶೇಷ. ರಹಾನೆ 74 ಬಾಲ್'ನಲ್ಲಿ 61 ರನ್ ಭಾರಿಸಿದರು. ರೋಹಿತ್ ಶರ್ಮಾ 109 ಎಸೆತದಲ್ಲಿ 125 ರನ್ ಚಚ್ಚಿದರು. ಶರ್ಮಾ ಈ ಪಂದ್ಯದಲ್ಲಿ 14ನೇ ಶತಕ ಹಾಗೂ 6 ಸಾವಿರ ರನ್'ಗಳ ಮೈಲಿಗಲ್ಲು ಮುಟ್ಟಿದ್ದು ಗಮನಾರ್ಹ.

ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡದ ರನ್ ಬೇಟೆಗೆ ಭಾರತೀಯ ಬೌಲರ್'ಗಳು ಕಡಿವಾಣ ಹಾಕಿ ತಂಡದ ಗೆಲುವಿಗೆ ಮುನ್ನುಡಿ ಬರೆದಿದ್ದರು. ಪಂದ್ಯದ ಆರಂಭದಲ್ಲಿ ಬೃಹತ್ ಮೊತ್ತ ಪೇರಿಸುವ ಕುರುಹು ತೋರಿದ್ದ ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್ 242 ರನ್'ಗೆ ಸೀಮಿತಗೊಂಡಿತು. ಆಸ್ಟ್ರೇಲಿಯಾದ ಇನ್ನಿಂಗ್ಸ್'ನಲ್ಲಿ ಡೇವಿಡ್ ವಾರ್ನರ್ ಮಾತ್ರ ಅರ್ಧಶತಕ ಭಾರಿಸಿದ್ದು. ವಾರ್ನರ್ ಬಿಟ್ಟರೆ ಟ್ರಾವಿಸ್ ಹೆಡ್, ಮಾರ್ಕಸ್ ಸ್ಟಾಯಿನಿಸ್ ಮತ್ತು ಆರೋನ್ ಫಿಂಚ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಡೇವಿಡ್ ವಾರ್ನರ್ ಕ್ರೀಸ್'ನಲ್ಲಿರುವವರೆಗೂ ಆಸ್ಟ್ರೇಲಿಯಾ ಸುಲಭವಾಗಿ 300 ರನ್ ಗಡಿ ದಾಟುವ ನಿರೀಕ್ಷೆ ಇತ್ತು. ಆದರೆ, ಅಕ್ಷರ್ ಪಟೇಲ್ ಬೌಲಿಂಗ್'ನಲ್ಲಿ ವಾರ್ನರ್ ಔಟಾಗುವುದರೊಂದಿಗೆ ಕಾಂಗರೂಗಳ ಅಬ್ಬರ ಕಡಿಮೆಯಾಯಿತು. ರನ್ ಗತಿ ನಿಧಾನಗೊಂಡಿತು. ಪಕ್ಕಾ ಬ್ಯಾಟಿಂಗ್ ಟ್ರ್ಯಾಕ್'ನಲ್ಲಿ 250 ರನ್ ಗಡಿ ಕೂಡ ದಾಟಲು ಸಾಧ್ಯವಾಗಲಿಲ್ಲ.

ಅಕ್ಷರ್ ಪಟೇಲ್ ಭಾರತದ ಪಾಲಿಗೆ ಟ್ವಿಸ್ಟರ್ ಆದರು. 10 ಓವರ್ ಬೌಲ್ ಮಾಡಿ ಕೇವಲ 38 ರನ್ನಿತ್ತು 3 ವಿಕೆಟ್ ಕಬಳಿಸಿದರು. ಭಾರತದ ಎಲ್ಲಾ ಬೌಲರ್'ಗಳೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಆಸ್ಟ್ರೇಲಿಯಾದ ಇನ್ನಿಂಗ್ಸ್'ಗೆ ಕಡಿವಾಣ ಹಾಕಿದರು.

ಮುಂದಿದೆ ಟಿ20 ಸರಣಿ:
ಭಾರತ ತಂಡವು ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್'ನಲ್ಲಿ ಮತ್ತೊಮ್ಮೆ ವಿಶ್ವದ ನಂ. 1 ಪಟ್ಟ ಅಲಂಕರಿಸಿಕೊಂಡಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಕ್ಟೋಬರ್ 7ರಿಂದ ಮೂರು ಟಿ20 ಪಂದ್ಯಗಳು ನಡೆಯಲಿವೆ. ರಾಂಚಿ, ಗುವಾಹಟಿ ಹಾಗೂ ಹೈದರಾಬಾದ್'ನಲ್ಲಿ ಈ ಪಂದ್ಯಗಳು ನಡೆಯಲಿವೆ.

ಸ್ಕೋರು ವಿವರ:
ಆಸ್ಟ್ರೇಲಿಯಾ 50 ಓವರ್ 242/9
(ಡೇವಿಡ್ ವಾರ್ನರ್ 53, ಟ್ರಾವಿಸ್ ಹೆಡ್ 42, ಮಾರ್ಕಸ್ ಸ್ಟಾಯಿನಿಸ್ 46, ಆರೋನ್ ಫಿಂಚ್ 32, ಮ್ಯಾಥ್ಯೂ ವೇಡ್ 20 ರನ್ - ಅಕ್ಷರ್ ಪಟೇಲ್ 38/3, ಜಸ್'ಪ್ರೀತ್ ಬುಮ್ರಾ 51/2)

ಭಾರತ 42.5 ಓವರ್ 243/3
(ರೋಹಿತ್ ಶರ್ಮಾ 125, ಅಜಿಂಕ್ಯ ರಹಾನೆ 61, ವಿರಾಟ್ ಕೊಹ್ಲಿ 39 ರನ್ - ಆ್ಯಡಂ ಝಂಪಾ 59/2)

click me!