ಬೆಂಗ್ಳೂರಲ್ಲಿ RCB Vs KXIP ಹೋರಾಟ- ಕೊಹ್ಲಿ ಸೈನ್ಯಕ್ಕೆ ಹ್ಯಾಟ್ರಿಕ್ ಗೆಲುವಿನ ಗುರಿ!

By Web DeskFirst Published Apr 24, 2019, 2:40 PM IST
Highlights

ಆರ್‌ಸಿಬಿಗೆ ಹ್ಯಾಟ್ರಿಕ್‌ ಗೆಲುವಿನ ಗುರಿ, ಅತ್ತ ಬೆಂಗಳೂರು ವಿರುದ್ದ ಅಬ್ಬರಿಸಲು ಕನ್ನಡಿಗರು ರೆಡಿ. ಇದು ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಲೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ಹೈಲೈಟ್ಸ್. ಇಂದಿನ ಪಂದ್ಯದಲ್ಲಿ ಗೆಲುವಿನ ಫೇವರಿಟ್ ಯಾರು? ಇಲ್ಲಿದೆ ವಿವರ.
 

ಬೆಂಗಳೂರು(ಏ.24):12ನೇ ಆವೃತ್ತಿಯ ಐಪಿಎಲ್‌ನಲ್ಲಿ ನಿಧಾನವಾಗಿ ಲಯ ಕಂಡುಕೊಂಡಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ಕೊನೆ ಅವಕಾಶದ ವರೆಗೂ ಪ್ಲೇ-ಆಫ್‌ಗೇರಲು ಪ್ರಯತ್ನ ನಡೆಸಲು ನಿರ್ಧರಿಸಿದೆ. ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಸೆಣಸಲಿರುವ ಆರ್‌ಸಿಬಿ, ಹ್ಯಾಟ್ರಿಕ್‌ ಗೆಲುವಿನ ಮೇಲೆ ಕಣ್ಣಿಟ್ಟಿದೆ.

ಇದನ್ನೂ ಓದಿ: SRH ವಿರುದ್ದ 6 ವಿಕೆಟ್ ಗೆಲುವು- ಪ್ಲೇ ಆಫ್ ಸ್ಥಾನ ಖಚಿತ ಪಡಿಸಿದ CSK

ಮೊಹಾಲಿಯಲ್ಲಿ ಪಂಜಾಬ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ಖಾತೆ ತೆರೆದಿದ್ದ ವಿರಾಟ್‌ ಕೊಹ್ಲಿ ಪಡೆ, ತವರು ಮೈದಾನದಲ್ಲೂ ಗೆಲುವಿನ ಕೇಕೆ ಹಾಕಲು ಕಾಯುತ್ತಿದೆ. ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋಲಿನ ದವಡೆಯಿಂದ ಪಾರಾದ ಆರ್‌ಸಿಬಿ, ಅದೃಷ್ಟಬೆನ್ನಿಗೆ ಕಟ್ಟಿಕೊಂಡು ಓಡುತ್ತಿದೆ.

"

ಸಿಎಸ್‌ಕೆ ವಿರುದ್ಧ ವಿರಾಟ್‌ ಹಾಗೂ ಎಬಿ ಡಿವಿಲಿಯ​ರ್ಸ್ ಬ್ಯಾಟಿಂಗ್‌ ವೈಫಲ್ಯ ಕಂಡರೂ, ಪಾರ್ಥೀವ್‌ ಪಟೇಲ್‌ ಬಾರಿಸಿದ ಆಕರ್ಷಕ ಅರ್ಧಶತಕ ತಂಡ ಸ್ಪರ್ಧಾತ್ಮ ಮೊತ್ತ ಕಲೆಹಾಕಲು ನೆರವಾಗಿತ್ತು. ಪಂದ್ಯದಿಂದ ಪಂದ್ಯಕ್ಕೆ ಗುಜರಾತ್‌ ವಿಕೆಟ್‌ ಕೀಪರ್‌ ಮೇಲೆ ತಂಡಕ್ಕೆ ನಂಬಿಕೆ ಹೆಚ್ಚಾಗುತ್ತಿದ್ದು, ಅವರ ಪ್ರದರ್ಶನ ಗುಣಮುಟ್ಟವೂ ಏರಿಕೆಯಾಗುತ್ತಿದೆ.

ಇದನ್ನೂ ಓದಿ: ಕೊಹ್ಲಿ - ಡೇಲ್ ಸ್ಟೇನ್ ಅಪ್ಪುಗೆ- ಟ್ವಿಟರ್‌ನಲ್ಲಿ ಮೆಚ್ಚುಗೆ!

ಮೋಯಿನ್‌ ಅಲಿ ಆಲ್ರೌಂಡ್‌ ಆಟ ತಂಡದ ಇತ್ತೀಚಿನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ದಕ್ಷಿಣ ಆಫ್ರಿಕಾ ವೇಗಿ ಡೇಲ್‌ ಸ್ಟೇನ್‌ ಆಗಮನ ತಂಡದ ಬೌಲಿಂಗ್‌ ಬಲವನ್ನು ಹೆಚ್ಚಿಸಿದೆಯಾದರೂ, 3ನೇ ವೇಗಿಯ ಸಮಸ್ಯೆ ತಂಡವನ್ನು ಇನ್ನೂ ಕಾಡುತ್ತಲೇ ಇದೆ.

2ನೇ ಆಲ್ರೌಂಡರ್‌ ಸ್ಥಾನದಲ್ಲಿ ಆಡುತ್ತಿರುವ ಪವನ್‌ ನೇಗಿಯಿಂದ ತಂಡಕ್ಕೆ ಯಾವುದೇ ಸಹಾಯ ಆಗುತ್ತಿಲ್ಲ. ತಜ್ಞ ಬ್ಯಾಟ್ಸ್‌ಮನ್‌ ಸ್ಥಾನದಲ್ಲಿ ಆಡುತ್ತಿರುವ ಅಕ್ಷದೀಪ್‌ ನಾಥ್‌ರಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಹೀಗೆ ಕೆಲ ಸಮಸ್ಯೆಗಳು ಹಾಗೇ ಉಳಿದಿದ್ದರೂ ಆರ್‌ಸಿಬಿ ಜಯದ ವಿಶ್ವಾಸವನ್ನು ಕೈಬಿಟ್ಟಿಲ್ಲ.

ಇದನ್ನೂ ಓದಿ: IPL 2019: ಒಂದೂ ರನ್ ಸಿಡಿಸಿದೆ ದಾಖಲೆ ಬರೆದ ಟರ್ನರ್!

ಕಿಂಗ್ಸ್‌ ಇಲೆವೆನ್‌ನಲ್ಲಿ ಕ್ರಿಸ್‌ ಗೇಲ್‌ ಇರುವ ಕಾರಣ, ಸಹಜವಾಗಿಯೇ ಆರ್‌ಸಿಬಿ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಿರಲಿದೆ. ಹಲವು ವರ್ಷಗಳ ಕಾಲ ಆರ್‌ಸಿಬಿ ತಂಡದಲ್ಲಿದ್ದ ಗೇಲ್‌ಗೆ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬಗ್ಗೆ ಸಂಪೂರ್ಣ ಅರಿವಿದೆ. ಕೆರಿಬಿಯನ್‌ ದೊರೆಯನ್ನು ಕಟ್ಟಿಹಾಕಬೇಕಿದ್ದರೆ, ಡೇಲ್‌ ಸ್ಟೇನ್‌ ಮಿಂಚಲೇಬೇಕು. ಇಲ್ಲವೇ ಯಜುವೇಂದ್ರ ಚಹಲ್‌ ಸ್ಪಿನ್‌ ಜಾದೂ ಪ್ರದರ್ಶಿಸಬೇಕು.

ಬೆಂಗಳೂರು ಹುಡುಗರಾದ ಕೆ.ಎಲ್‌.ರಾಹುಲ್‌ ಹಾಗೂ ಮಯಾಂಕ್‌ ಅಗರ್‌ವಾಲ್‌ ಸಹ ಪಂಜಾಬ್‌ನ ಬ್ಯಾಟಿಂಗ್‌ ಆಧಾರಸ್ತಂಭಗಳಾಗಿದ್ದು, ತವರು ಮೈದಾನದಲ್ಲಿ ಮಿಂಚಲು ಕಾತರಿಸುತ್ತಿದ್ದಾರೆ. ಕೊಹ್ಲಿ, ಎಬಿಡಿ, ಗೇಲ್‌, ರಾಹುಲ್‌ ಎಲ್ಲರೂ ಆರ್‌ಸಿಬಿಯಲ್ಲಿ ಒಟ್ಟಿಗೆ ಆಡಿದವರು. ಈಗ ಕೊಹ್ಲಿ-ಎಬಿಡಿ ವರ್ಸಸ್‌ ಗೇಲ್‌-ರಾಹುಲ್‌ ನಡುವಿನ ಪೈಪೋಟಿ ಬೆಂಗಳೂರು ಅಭಿಮಾನಿಗಳ ಕುತೂಹಲ ಕೆರಳಿಸಿದೆ.

ಒಟ್ಟು ಮುಖಾಮುಖಿ: 23
ಆರ್‌ಸಿಬಿ: 11
ಪಂಜಾಬ್‌: 12

RCB ಪ್ರಾಬಲ್ಯ
ಉತ್ತಮ ಲಯದಲ್ಲಿ ಪಾರ್ಥೀವ್‌
ಮೋಯಿನ್‌ ಅಲಿ ಆಲ್ರೌಂಡ್‌ ಆಟ
ತಂಡಕ್ಕೆ ಸ್ಟೇನ್‌, ಕೊಹ್ಲಿ, ಎಬಿಡಿ ಬಲ

KXIP ಪ್ರಾಬಲ್ಯ
ಉತ್ತಮ ಲಯದಲ್ಲಿ ಕ್ರಿಸ್‌ ಗೇಲ್‌
ರಾಹುಲ್‌, ಮಿಲ್ಲರ್‌ ಬ್ಯಾಟಿಂಗ್‌ ಬಲ
ವಿಲಿಯೊನ್‌, ಶಮಿ ಬೌಲಿಂಗ್‌ ಲಯ

RCN ದೌರ್ಬಲ್ಯ
ಬಗೆಹರಿಯದ 3ನೇ ವೇಗಿ ಸಮಸ್ಯೆ
ನಿರೀಕ್ಷೆ ಉಳಿಸಿಕೊಳ್ಳದ ನೇಗಿ, ನಾಥ್‌
ಬೌಲರ್‌ಗಳ ಅಸ್ಥಿರ ಪ್ರದರ್ಶನ

KXIPದೌರ್ಬಲ್ಯ
ದಿಢೀರ್‌ ಕುಸಿಯುವ ಮಧ್ಯಮ ಕ್ರಮಾಂಕ
ಲಯ ಕಳೆದುಕೊಂಡಿರುವ ಕರ್ರನ್‌
2ನೇ ಸ್ಪಿನ್ನರ್‌ ಆಯ್ಕೆಯಲ್ಲಿ ಗೊಂದಲ

ಪಿಚ್‌ ರಿಪೋರ್ಟ್‌
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಸಾಮಾನ್ಯವಾಗಿ ಬ್ಯಾಟಿಂಗ್‌ ಸ್ನೇಹಿಯಾಗಿರಲಿದೆ. ಆದರೆ ಕಳೆದ ಪಂದ್ಯದಲ್ಲಿ ರನ್‌ ಗಳಿಸಲು ಎರಡೂ ತಂಡದ ಬ್ಯಾಟ್ಸ್‌ಮನ್‌ಗಳು ಕಷ್ಟಪಟ್ಟಿದ್ದರು. ವೇಗದ ಬೌಲಿಂಗ್‌ಗೆ ಹೆಚ್ಚಿನ ನೆರವು ಸಿಗುವ ನಿರೀಕ್ಷೆ ಇದೆ. ಕಳೆದ ಪಂದ್ಯದಲ್ಲಿ ಇಬ್ಬನಿ ಬೀಳುವ ಸುಳಿವು ಸಹ ಸಿಕ್ಕಿತ್ತು. ಹೀಗಾಗಿ ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

click me!