Ranji Trophy: ಕರ್ನಾಟಕ ತಂಡಕ್ಕೆ ದೇವದತ್ ಪಡಿಕ್ಕಲ್ ಶತಕದ ಬಲ

By Kannadaprabha NewsFirst Published Feb 10, 2024, 11:07 AM IST
Highlights

ದಿನದ ಅಂತ್ಯಕ್ಕೆ ರಾಜ್ಯ ತಂಡ 5 ವಿಕೆಟ್‌ಗೆ 288 ರನ್ ಕಲೆ ಹಾಕಿದ್ದು, ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜ್ಯ ಸಾಧಾರಣ ಆರಂಭ ಪಡೆಯಿತು. ಕಳೆದ ಪಂದ್ಯಕ್ಕೆ ಅಲಭ್ಯರಾಗಿ ಈ ಪಂದ್ಯಕ್ಕೆ ವಾಪಸಾಗಿದ್ದ ನಾಯಕ ಮಯಾಂಕ್ ಅಗರ್‌ವಾಲ್ 20 ರನ್ ಗಳಿಸಿದ್ದಾಗ ಸಾಯಿ ಕಿಶೋರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಚೆನೈ(ಫೆ.10): ದೇಸಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ಮುಂದುವರಿಸಿರುವ ತಾರಾ ಬ್ಯಾಟರ್ ದೇವದತ್ ಪಡಿಕ್ಕಲ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಮ್ಮೆ ಕರ್ನಾಟಕಕ್ಕೆ ಆಪತ್ಬಾಂಧವರಾಗಿ ಮೂಡಿ ಬಂದಿದ್ದಾರೆ. ತಮಿಳುನಾಡು ವಿರುದ್ಧ ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಆರಂಭಗೊಂಡ ಪಂದ್ಯದಲ್ಲಿ ಪಡಿಕ್ಕಲ್‌ರ ಏಕಾಂಗಿ ಹೋರಾಟದಿಂದಾಗಿ ರಾಜ್ಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಗಳಿಸಿದೆ. 

ದಿನದ ಅಂತ್ಯಕ್ಕೆ ರಾಜ್ಯ ತಂಡ 5 ವಿಕೆಟ್‌ಗೆ 288 ರನ್ ಕಲೆ ಹಾಕಿದ್ದು, ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜ್ಯ ಸಾಧಾರಣ ಆರಂಭ ಪಡೆಯಿತು. ಕಳೆದ ಪಂದ್ಯಕ್ಕೆ ಅಲಭ್ಯರಾಗಿ ಈ ಪಂದ್ಯಕ್ಕೆ ವಾಪಸಾಗಿದ್ದ ನಾಯಕ ಮಯಾಂಕ್ ಅಗರ್‌ವಾಲ್ 20 ರನ್ ಗಳಿಸಿದ್ದಾಗ ಸಾಯಿ ಕಿಶೋರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಬಳಿಕ ಆರ್.ಸಮರ್ಥ್‌ಗೆ ಜೊತೆಯಾದ ದೇವದತ್ ಪಡಿಕ್ಕಲ್ ತಮಿಳುನಾಡು ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ 2ನೇ ವಿಕೆಟ್‌ಗೆ 246 ಎಸೆತಗಳಲ್ಲಿ 132 ರನ್ ಸೇರಿಸಿ ತಂಡಕ್ಕೆ ಆಸರೆಯಾಯಿತು.

ಟೀಂ ಇಂಡಿಯಾಗೆ ಶಾಕ್: ಇಂಗ್ಲೆಂಡ್ ಎದುರಿನ ಕೊನೆ 3 ಟೆಸ್ಟ್‌ಗಿಲ್ಲ ಶ್ರೇಯಸ್‌ ಅಯ್ಯರ್?

ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದ ಸಮರ್ಥ್‌ರ ಇನ್ನಿಂಗ್ಸ್ 57 ರನ್‌ಗೆ ಕೊನೆಗೊಂಡಿತು. ಇದಕ್ಕಾಗಿ ಅವರು 159 ಎಸೆತಗಳಲ್ಲಿ ಬಳಿಸಿಕೊಂಡರು. ಸಮರ್ಥ್ ನಿರ್ಗಮನದ ಬಳಿಕ ನಿಕಿನ್ ಜೋಸ್ ಜೊತೆ ಇನ್ನಿಂಗ್ಸ್ ಕಟ್ಟಿದ ಪಡಿಕ್ಕಲ್ ರಾಜ್ಯವನ್ನು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಆದರೆ ನಿಕಿನ್ ಕೇವಲ 13ಕ್ಕೆ ವಿಕೆಟ್ ಒಪ್ಪಿಸಿದರು. 226 ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ರಾಜ್ಯ ತಂಡ ಬಳಿಕ ಕೇವಲ 8 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದ ಹೀರೋ ಮನೀಶ್ ಪಾಂಡೆ ಕೇವಲ 1 ರನ್‌ಗೆ ಔಟಾದರೆ, ಕಿಶನ್ ಬೆದರೆ ಕೊಡುಗೆ 3 ರನ್.

ಏಕಾಂಗಿ ಅಬ್ಬರ: ಒಂದೆಡೆ ವಿಕೆಟ್ ಉರುಳುತ್ತಿದ್ದರೂ ರಾಜ್ಯ ತಂಡವನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿದ್ದು ಪಡಿಕ್ಕಲ್. ತಮಿಳುನಾಡು ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು 216 ಎಸೆತಗಳಲ್ಲಿ 151 ರನ್ ಸಿಡಿಸಿದ್ದು, 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅವರ 3ನೇ ಶತಕದ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ, 6 ಸಿಕ್ಸರ್‌ಗಳೂ ಒಳಗೊಂಡಿವೆ. ಹಾರ್ದಿಕ್ ರಾಜ್(ಔಟಾಗದೆ 35) ಕೂಡಾ ತಂಡಕ್ಕೆ ಆಸರೆಯಾಗಿದ್ದು, ಪಡಿಕ್ಕಲ್ ಜೊತೆಗೂಡಿ 2ನೇ ದಿನ ಕರ್ನಾಟಕವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಶ್ರೀಲಂಕಾ ಬ್ಯಾಟ್ಸ್‌ಮನ್‌ ಎನಿಸಿಕೊಂಡ ಪಥುಮ್‌ ನಿಸ್ಸಾಂಕ!

ಸ್ಕೋರ್:ಮೊದಲ ಇನ್ನಿಂಗ್ಸ್ ಕರ್ನಾಟಕ 288/5(ಮೊದಲದಿನದಂತ್ಯಕ್ಕೆ)
(ದೇವದತ್ 151*, ಸಮರ್ಥ್ 57, ಹಾರ್ದಿಕ್ ರಾಜ್ 35*, ಕಿಶೋರ್ 3-94)

ಪಡಿಕ್ಕಲ್  ನಾನ್‌ಸ್ಟಾಪ್‌

ಅವಕಾಶಕ್ಕಾಗಿ ಭಾರತ ತಂಡದ ಕದ ತಟ್ಟುತ್ತಿರುವ ಪಡಿಕ್ಕಲ್ ದೇಸಿ ಕ್ರಿಕೆಟ್ ನಲ್ಲಿ ಅಭೂತ ಪೂರ್ವ ಪ್ರದರ್ಶನ ನೀಡುತ್ತಿದ್ದಾರೆ. ಈ ಬಾರಿ ರಣಜಿಯಲ್ಲಿ 5 ಇನ್ನಿಂಗ್ಸ್ ಗಳಲ್ಲಿ 3 ಶತಕದೊಂದಿಗೆ 520 ರನ್ ಕಲೆಹಾಕಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲೂ ಅವರು 5 ಪಂದ್ಯಗಳಲ್ಲಿ 2 ಶತಕ, 3 ಅರ್ಧಶತಕ
ಸೇರಿದಂತೆ 465 ರನ್ ಸಿಡಿಸಿದ್ದರು.

click me!