
ಬೆಳಗಾವಿ: 2018-19ರ ರಣಜಿ ಋತುವಿನಲ್ಲಿ ಮೊದಲ ಗೆಲುವು ಸಾಧಿಸುವ ಕರ್ನಾಟಕ ಹಾಗೂ ಮುಂಬೈ ತಂಡಗಳ ಕನಸು ಈಡೇರಲಿಲ್ಲ. ಉಭಯ ತಂಡಗಳ ನಡುವೆ ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.
ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ರಾಜ್ಯ ತಂಡ 3 ಅಂಕ ಪಡೆದರೆ, ಮುಂಬೈಗೆ 1 ಅಂಕ ದೊರೆತಿದೆ. 2 ಪಂದ್ಯಗಳಿಂದ 6 ಅಂಕ ಹೊಂದಿರುವ ಕರ್ನಾಟಕ 3ನೇ ಸ್ಥಾನ ಪಡೆದಿದ್ದು, ತಂಡಕ್ಕೆ ಗುಂಪು ಹಂತದಲ್ಲಿ ಇನ್ನು 6 ಪಂದ್ಯಗಳು ಬಾಕಿ ಉಳಿದಿವೆ. 4ನೇ ಹಾಗೂ ಅಂತಿಮ ದಿನವಾದ ಶುಕ್ರವಾರ, 3 ವಿಕೆಟ್‌ಗೆ 81 ರನ್‌ಗಳಿಂದ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ, 5 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಕೆ.ವಿ.ಸಿದ್ಧಾರ್ಥ್, ಅಜೇಯ 71 ರನ್ ಗಳಿಸಿದರು. ಸ್ಟುವರ್ಟ್ ಬಿನ್ನಿ 30 ರನ್ ಕಲೆಹಾಕಿದರು.
ಕರ್ನಾಟಕ ಒಟ್ಟಾರೆ 365 ರನ್‌ಗಳ ಮುನ್ನಡೆ ಪಡೆದು, ಮುಂಬೈಗೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಅವಕಾಶ ನೀಡಿತು. ಆರಂಭಿಕ ಜೇ ಬಿಸ್ತಾ (2) ವಿಕೆಟನ್ನು ಬೇಗನೆ ಕಳೆದುಕೊಂಡರೂ, ಅಖಿಲ್ ಹೆರ್ವಾಡ್ಕರ್ (53), ಸೂರ್ಯಕುಮಾರ್ ಯಾದವ್ (53) ಹಾಗೂ ಆದಿತ್ಯ ತಾರೆ (29) ಹೋರಾಟದಿಂದ ಮುಂಬೈ 4 ವಿಕೆಟ್‌ಗೆ 173 ರನ್ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ನ.28ರಿಂದ ಮಹಾರಾಷ್ಟ್ರ ವಿರುದ್ಧ ಮೈಸೂರಿನಲ್ಲಿ ಆಡಲಿದೆ.
ಸ್ಕೋರ್:
ಕರ್ನಾಟಕ: 400 ಹಾಗೂ 170/5 ಡಿಕ್ಲೇರ್
ಮುಂಬೈ: 205 ಹಾಗೂ 173/4
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.