ಶೇಷ ಭಾರತ ತಂಡವನ್ನು ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್, ವೇಗಿ ರೋನಿತ್ ಮೋರೆ ಹಾಗೂ ಆಲ್ರೌಂಡರ್ ಕೆ.ಗೌತಮ್‌ಗೆ ಸ್ಥಾನ ನೀಡಲಾಗಿದೆ.
ನಾಗ್ಪುರ[ಫೆ.12]: ಸತತ 2ನೇ ಬಾರಿಗೆ ರಣಜಿ ಟ್ರೋಫಿ ಗೆದ್ದ ವಿದರ್ಭ, ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ವಿರುದ್ಧ ಇಲ್ಲಿ ಆರಂಭಗೊಂಡ ಇರಾನಿ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಟಾಸ್ ಗೆದ್ದ ಶೇಷ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಕಳೆದ ವರ್ಷ ರಣಜಿ ಟ್ರೋಫಿ ಗೆಲುವಿನ ಬಳಿಕ ಇರಾನಿ ಟ್ರೋಫಿಯನ್ನೂ ಗೆದ್ದಿದ್ದ ವಿದರ್ಭ, ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಸೌರಾಷ್ಟ್ರ ಮಣಿಸಿ ರಣಜಿ ಟ್ರೋಫಿ ಗೆದ್ದ ವಿದರ್ಭ!
ಶೇಷ ಭಾರತ ತಂಡವನ್ನು ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್ ಹಾಗೂ ಆಲ್ರೌಂಡರ್ ಕೆ.ಗೌತಮ್‌ಗೆ ಸ್ಥಾನ ನೀಡಲಾಗಿದೆ. ಉಳಿದಂತೆ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ, ಮುಂಬೈ ಆಟಗಾರ ಶ್ರೇಯಸ್ ಅಯ್ಯರ್, ಜಾರ್ಖಂಡ್ ವಿಕೆಟ್ ಕೀಪರ್ ಇಶಾನ್ ಕಿಶನ್ ಶೇಷ ಭಾರತದ ಬ್ಯಾಟಿಂಗ್ ಬಲ ಎನಿಸಿದ್ದಾರೆ. ಬ್ಯಾಟಿಂಗ್‌ಗೆ ಹೋಲಿಸಿದರೆ ಬೌಲಿಂಗ್ ವಿಭಾಗ ದುರ್ಬಲವಾಗಿದೆ. ಉತ್ತರ ಪ್ರದೇಶದ ಅಂಕಿತ್ ರಜಪೂತ್, ರಾಜಸ್ಥಾನದ ತನ್ವೀರ್ ಉಲ್ ಹಕ್, ಕೇರಳದ ಸಂದೀಪ್ ವಾರಿಯರ್, ಕರ್ನಾಟಕದ ರೋನಿತ್ ಮೋರೆ ತಂಡದಲ್ಲಿರುವ ವೇಗಿಗಳು. ಈ ನಾಲ್ವರಲ್ಲಿ ಮೂವರಿಗೆ ಸ್ಥಾನ ಸಿಗಲಿದೆ. ಗೌತಮ್ ಜತೆ ಸೌರಾಷ್ಟ್ರದ ಧರ್ಮೇಂದ್ರ ಜಡೇಜಾ ಸ್ಪಿನ್ನರ್‌ಗಳಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಮತ್ತೊಂದೆಡೆ ವಿದರ್ಭ ತನ್ನ ನಾಯಕ ಫೈಯಜ್ ಫಜಲ್, ರನ್ ಮಷಿನ್ ವಾಸೀಂ ಜಾಫರ್, ಗಣೇಶ್ ಸತೀಶ್, ಸಂಜಯ್ ರಾಮಸ್ವಾಮಿ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ. ಮುಂಚೂಣಿ ವೇಗಿ ಉಮೇಶ್ ಯಾದವ್ ಸಣ್ಣ ಪ್ರಮಾಣದ ಗಾಯದಿಂದ ಬಳಲುತ್ತಿದ್ದು ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ರಜ್ನೀಶ್ ಗುರ್ಬಾನಿ ಬೌಲಿಂಗ್ ಪಡೆಯನ್ನು ಮುನ್ನಡೆಲಿದ್ದಾರೆ. ರಣಜಿ ಫೈನಲ್‌ನಲ್ಲಿ ಒಟ್ಟು 11 ವಿಕೆಟ್ ಕಿತ್ತ ಎಡಗೈ ಸ್ಪಿನ್ನರ್ ಆದಿತ್ಯ ಸರ್ವಾಟೆ ಮೇಲೆ ಎಲ್ಲರ ಕಣ್ಣಿದೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್