ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ
ಮುಂದಿನ ನಡೆ ನಿರ್ಧರಿಸಲು ಸಮಿತಿ ರಚನೆ
ಮೊದಲ ಸಮಿತಿಯಲ್ಲಿ 31, 2ನೇ ಸಮಿತಿಯಲ್ಲಿ 9 ಮಂದಿ
ನವದೆಹಲಿ(ಮೇ.07): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ಭೂಷಣ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ತಮ್ಮ ಮುಂದಿನ ನಡೆ ಬಗ್ಗೆ ನಿರ್ಧರಿಸಲು ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕುಸ್ತಿಪಟು ಭಜರಂಗ್ ಪೂನಿಯಾ, ‘ಪ್ರತಿಭಟನೆ ಕೇವಲ ಮೂವರು ಕುಸ್ತಿಪಟುಗಳಿಗೆ ಸೀಮಿತವಾಗಿಲ್ಲ. ನಮ್ಮ ಮುಂದಿನ ನಡೆಯನ್ನು ತೀರ್ಮಾನಿಸಲು 2 ಸಮಿತಿ ರಚಿಸಿದ್ದೇವೆ’ ಎಂದಿದ್ದಾರೆ.
ಮೊದಲ ಸಮಿತಿಯಲ್ಲಿ 31 ಸದಸ್ಯರಿದ್ದು, ಪ್ರತಿಭಟನೆಗೆ ಬೆಂಬಲ ನೀಡಿರುವ ಎಲ್ಲಾ ಸಂಘಟನೆಗಳ ಪ್ರತಿನಿಧಿಗಳಿಗೆ ಸ್ಥಾನ ನೀಡಲಾಗಿದೆ. ಖಾಪ್ ಪಂಚಾಯತ್, ರೈತರು, ಮಹಿಳಾ ಸದಸ್ಯೆಯರು ಸಮಿತಿಯಲ್ಲಿರಲಿದ್ದಾರೆ. ಈ ಸಮಿತಿ ಪ್ರತಿಭಟನೆಗೆ ಸಂಬಂಧಿಸಿದ ವಿಚಾರಗಳ ತೀರ್ಮಾನ ಕೈಗೊಳ್ಳಲಿದೆ. ಇನ್ನು 2ನೇ ಸಮಿತಿಯಲ್ಲಿ 9 ಸದಸ್ಯರಿದ್ದು, ಕುಸ್ತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಈ ಸಮಿತಿ ಮಾಡಲಿದೆ ಎಂದು ಭಜರಂಗ್ ತಿಳಿಸಿದ್ದಾರೆ.
ಮ್ಯಾಜಿಸ್ಪ್ರೇಟ್ ಮುಂದೆ ಹೇಳಿಕೆ ದಾಖಲಿಸಿಲ್ಲ: ಸಾಕ್ಷಿ
ಬ್ರಿಜ್ಭೂಷಣ್ ವಿರುದ್ಧ ದೂರು ನೀಡಿದ ಬಾಲಕಿಯರ ಹೇಳಿಕೆಯನ್ನೂ ಇನ್ನೂ ದಾಖಲಿಸಿಲ್ಲ. ಮ್ಯಾಜಿಸ್ಪ್ರೇಟ್ ಮುಂದೆ ಅವರು ಹೇಳಿಕೆ ದಾಖಲಿಸಬೇಕು. ಅದಕ್ಕಾಗಿಯೇ ನಾವು ಕಾಯುತ್ತಿದ್ದೇವೆ. ಹೇಳಿಕೆ ದಾಖಲಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ. ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲಲ್ಲ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಒತ್ತಾಯಿಸಿದ್ದಾರೆ.
ಏಷ್ಯನ್ ವೇಟ್‌ಲಿಫ್ಟಿಂಗ್: ಬೆಳ್ಳಿ ಗೆದ್ದ ಬಿಂದ್ಯಾರಾಣಿ
ಜಿಂಜು(ಕೊರಿಯಾ): ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ವೇಟ್‌ಲಿಫ್ಟರ್ ಬಿಂದ್ಯಾರಾಣಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ವಿಜೇತ ಬಿಂದ್ಯಾ, ಶನಿವಾರ ಮಹಿಳೆಯರ 55 ಕೆ.ಜಿ. ವಿಭಾಗದಲ್ಲಿ ಒಟ್ಟು 194 ಕೆ.ಜಿ.(ಸ್ನ್ಯಾಚ್‌ನಲ್ಲಿ 83 ಕೆ.ಜಿ.+ ಕ್ಲೀನ್ ಅಂಡ್ ಜರ್ಕ್ನಲ್ಲಿ 111 ಕೆ.ಜಿ.) ಭಾರ ಎತ್ತಿ ದ್ವಿತೀಯ ಸ್ಥಾನಿಯಾದರು. ರಾಣಿ ಸ್ನ್ಯಾಚ್‌ನಲ್ಲಿ 86 ಕೆ.ಜಿ., ಕ್ಲೀನ್ ಆಂಡ್ ಜರ್ಕ್ನಲ್ಲಿ 116 ಕೆ.ಜಿ ಭಾರ ಎತ್ತಿದ್ದು ಶ್ರೇಷ್ಠ ಪ್ರದರ್ಶನವಾಗಿತ್ತು. ಆದರೆ ಈ ಬಾರಿ ತಮ್ಮ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. ಚೈನೀಸ್ ತೈಪೆಯ ಚೆನ್ ಗ್ವಾನ್ ಲಿಂಗ್ 204 ಕೆ.ಜಿ. ಭಾರ (90 ಕೆ.ಜಿ. ಮತ್ತು 114 ಕೆ.ಜಿ.) ಎತ್ತಿ ಚಿನ್ನ ಗೆದ್ದರೆ, ವಿಯೆಟ್ನಾಂನ ವೊಥಿ ನ್ಯು 192 ಕೆ.ಜಿ. ಭಾರ (88 ಕೆ.ಜಿ. ಮತ್ತು 104 ಕೆ.ಜಿ.)ಎತ್ತಿ ಕಂಚು ಪಡೆದರು.
'ವರ್ಷದ ಮೊದಲ ಸ್ಪರ್ಧೆ, ಮೊದಲ ಸ್ಥಾನ': ಚಿನ್ನ ಗೆದ್ದ ನೀರಜ್ ಚೋಪ್ರಾ ಅಭಿನಂದಿಸಿದ ಪ್ರಧಾನಿ ಮೋದಿ
ವಿಶ್ವ ಬಾಕ್ಸಿಂಗ್: ಆಕಾಶ್, ನಿಶಾಂತ್ ಪ್ರಿ ಕ್ವಾರ್ಟರ್ಗೆ
ತಾಷ್ಕೆಂಟ್: ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಬಾಕ್ಸರ್ಗಳಾದ ಆಕಾಶ್ ಹಾಗೂ ನಿಶಾಂತ್ ದೇವ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ 67 ಕೆ.ಜಿ. ವಿಭಾಗದ 2ನೇ ಸುತ್ತಿನಲ್ಲಿ ಆಕಾಶ್ ಚೀನಾದ ಫು ಮಿಂಗ್‌ಕೆ ವಿರುದ್ಧ 5-0 ಅಂತರದಲ್ಲಿ ಜಯಭೇರಿ ಬಾರಿಸಿದರೆ, 71 ಕೆ.ಜಿ. ವಿಭಾಗದಲ್ಲಿ ನಿಶಾಂತ್ ಚೈನೀಸ್ ತೈಪೆಯ ಲೀ ಸಾಂಗ್ಮಿನ್‌ರನ್ನು 5-0 ಅಂತರದಲ್ಲಿ ಮಣಿಸಿ ಅಂತಿಮ 16ರ ಸುತ್ತಿಗೆ ಲಗ್ಗೆ ಇಟ್ಟರು. ಭಾನುವಾರ 57 ಕೆ.ಜಿ. ವಿಭಾಗದ ಪ್ರಿ ಕ್ವಾರ್ಟರ್ನಲ್ಲಿ ಕಳೆದ ಬಾರಿಯ ಕಂಚಿನ ಪದಕ ವಿಜೇತ ಹುಸ್ಮುದ್ದೀನ್, 92+ ಕೆ.ಜಿ. ವಿಭಾಗದಲ್ಲಿ ನರೇಂದರ್, 51 ಕೆ.ಜಿ. ವಿಭಾಗದಲ್ಲಿ ದೀಪಕ್ ಕುಮಾರ್ ಕಣಕ್ಕಿಳಿಯಲಿದ್ದಾರೆ.