IPL 2023: ಆರ್‌ಸಿಬಿಗೆ ನೀರು ಕುಡಿಸಿದ ಸಾಲ್ಟ್‌, ಬೌಲರ್‌ಗಳದ್ದೇ ಫಾಲ್ಟ್‌!

Published : May 06, 2023, 11:05 PM ISTUpdated : May 06, 2023, 11:17 PM IST
IPL 2023: ಆರ್‌ಸಿಬಿಗೆ ನೀರು ಕುಡಿಸಿದ ಸಾಲ್ಟ್‌, ಬೌಲರ್‌ಗಳದ್ದೇ ಫಾಲ್ಟ್‌!

ಸಾರಾಂಶ

45 ಎಸೆತಗಳ ಮನಮೋಹಕ ಇನ್ನಿಂಗ್ಸ್‌. ಬರೋಬ್ಬರಿ 6 ಸಿಕ್ಸರ್‌ ಹಾಗೂ 8 ಬೌಂಡರಿಗಳ ಆಟಕ್ಕೆ ದಂಗಾದ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 7 ವಿಕೆಟ್‌ಗಳ ಸೋಲು ಕಂಡಿದೆ.

ನವದೆಹಲಿ (ಮೇ.6): ಆರ್‌ಸಿಬಿಗೆ ಮತ್ತೆ ಬೌಲರ್‌ಗಳದ್ದೇ ಫಾಲ್ಟ್‌ ಶುರುವಾಗಿದೆ. ಲಕ್ನೋ ವಿರುದ್ಧ ಅಲ್ಪ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಮಿಂಚಿನ ನಿರ್ವಹಣೆ ತೋರಿದ್ದ ಬೌಲರ್‌ಗಳು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎಡವಿದ್ದಾರೆ. ಅರುಣ್‌ ಜೇಟ್ಲಿ ಮೈದಾನದಲ್ಲಿ ತೀರಾ ಸುಲಭವಾಗಿ ರಕ್ಷಿಸಿಕೊಳ್ಳಬಹುದಾಗಿದ್ದ 181 ರನ್‌ಗಳ ಮೊತ್ತವನ್ನು ರಕ್ಷಣೆ ಮಾಡಿಕೊಳ್ಳಲು ಆರ್‌ಸಿಬಿ ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಫಿಲಿಪ್‌ ಸಾಲ್ಟ್‌ ಆರ್‌ಸಿಬಿಗೆ ನೀರು ಕುಡಿಸಿದ್ದರಿಂದ 7 ವಿಕೆಟ್‌ಗಳ ಕೆಟ್ಟ ಸೋಲನ್ನು ತಂಡ ಎದುರಿಸಿದೆ. ಬೆನ್ನುಬೆನ್ನಿಗೆ ಸೋಲು ಕಂಡು ಸುಣ್ಣವಾಗಿದ್ದ ಡೇವಿಡ್‌ ವಾರ್ನರ್‌ ಸಾರಥ್ಯದ ತಂಡ ಈ ಪಂದ್ಯದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದ್ದು, ಸನ್‌ರೈಸರ್ಸ್‌ ಹೈದಾರಾಬಾದ್‌ ತಂಡವನ್ನು ಕಡೆಯ ಸ್ಥಾನಕ್ಕೆ ನೂಕಿದೆ. ಇನ್ನು ಆರ್‌ಸಿಬಿ ತಂಡ ಈ ಸೋಲಿನ ನಡುವೆಯೂ 5ನೇ ಸ್ಥಾನದಲ್ಲಿ ಮುಂದುವರಿದ್ದರೂ, ತಂಡದ ರನ್‌ರೇಟ್‌ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಗೆಲುವಿಗೆ 182 ರನ್‌ಗಳನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಪಂದ್ಯದ ಯಾವ ಹಂತದಲ್ಲೂ ಸಮಸ್ಯೆ ಎದುರಾಗಲಿಲ್ಲ. ಡೆಲ್ಲಿ ತಂಡದ ಬ್ಯಾಟ್ಸ್‌ಮನ್‌ಗಳ ಅಬ್ಬರವನ್ನು ಕಡಿಮೆ ಮಾಡಲು ಆರ್‌ಸಿಬಿ ಏಳು ಮಂದಿ ಬೌಲರ್‌ಗಳನ್ನು ಬಳಸಿಕೊಂಡರೂ ಎಲ್ಲರೂ ದಾರಾಳವಾಗಿ ರನ್‌ ಬಿಟ್ಟುಕೊಟ್ಟರು. ಇದರ ಪರಿಣಾಮವಾಗಿ ಡೆಲ್ಲಿ ತಂಡ ಇನ್ನೂ 20 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಕಂಡಿತು.

ಬಹುಶಃ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬ್ಯಾಟಿಂಗ್‌ ವಿಭಾಗದ ನಿಜವಾದ ಶಕ್ತಿ ಎಲ್ಲರಿಗೂ ಅರಿವಾಗಿದ್ದು ಇಂದಿನ ಪಂದ್ಯದ ಮೂಲಕ. ಚೇಸಿಂಗ್‌ ಮಾಡುವ ಯಾವ ಹಂತದಲ್ಲೂ ಕೂಡ ಡೆಲ್ಲಿ ಪರದಾಟ ನಡೆಸಿದ್ದು ಕಾಣಲಿಲ್ಲ. ಮೊದಲ ವಿಕೆಟ್‌ಗೆ ಡೇವಿಡ್‌ ವಾರ್ನರ್‌ (22ರನ್‌, 14 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹಾಗೂ ಫಿಲ್‌ ಸಾಲ್ಟ್‌ ಕೇವಲ 37 ಎಸೆತಗಳಲ್ಲಿ 60 ರನ್‌ ಚಚ್ಚಿದ್ದರು. ವಾರ್ನರ್‌ ಔಟಾಗುವ ವೇಳೆಗೆ, ಪವರ್‌ ಪ್ಲೇ ಮುಗಿಯಲು ಇನ್ನೂ 5 ಎಸೆತಗಳು ಬಾಕಿ ಇದ್ದವು.

ವಾರ್ನರ್‌ ಔಟಾದ ಬಳಿಕವೂ ಡೆಲ್ಲಿ ತಂಡದ ಇನ್ನಿಂಗ್ಸ್‌ ನಿಧಾನವಾಗುವ ಲಕ್ಷಣ ತೋರಲಿಲ್ಲ. ಮಿಚೆಲ್ ಮಾರ್ಷ್‌ ಕ್ರೀಸ್‌ಗೆ ಇಳಿಯುತ್ತಿದ್ದಂತೆ ಅಬ್ಬರದ ಆಟದಲ್ಲಿ ಇನ್ನೊಂದು ಲಯ ಕಂಡುಕೊಂಡ ಫಿಲ್‌ ಸಾಲ್ಟ್‌, ಆರ್‌ಸಿಬಿಯ ಪ್ರಮುಖ ಬೌಲರ್‌ಗಳೆಲ್ಲರನ್ನೂ ಚೆಂಡಾಡಿದರು. ಹರ್ಷಲ್‌ ಪಟೇಲ್‌ ಹಾಗೂ ಮೊಹಮದ್ ಸಿರಾಜ್‌ಗೆ ಸಾಕಷ್ಟು ರನ್‌ಗಳಿಸಿದರು. ಅದರಲ್ಲೂ ಹಾಲಿ ಐಪಿಎಲ್‌ನಲ್ಲಿ ಆರ್‌ಸಿಬಿಯ ಬೆಸ್ಟ್‌ ಬೌಲರ್‌ ಆಗಿರುವ ಸಿರಾಜ್‌ಗೆ ಎರಡು ಸಿಕ್ಸರ್‌ ಹಾಗೂ ಒಂದು ಬೌಂಡರು ಚಚ್ಚಿದರು. ತಮ್ಮ 87 ರನ್‌ಗಳ ಇನ್ನಿಂಗ್ಸ್‌ನಲ್ಲಿ 6 ಮನಮೋಹಕ ಸಿಕ್ಸರ್‌ಗಳನ್ನು ಸಿಡಿಸಿದ ಫಿಲ್‌ ಸಾಲ್ಟ್‌, 16ನೇ ಓವರ್‌ನಲ್ಲಿ ಔಟಾಗುವ ವೇಳೆ ಡೆಲ್ಲಿ ತಂಡ ಪಂದ್ಯದಲ್ಲಿ ಗೆಲವು ಕಾಣುವುದು ಖಚಿತವಾಗಿತ್ತು. 

IPL 2023: ಐಪಿಎಲ್‌ನಲ್ಲಿ ಅರ್ಧಶತಕಗಳ 'ಫಿಫ್ಟಿ' ದಾಖಲಿಸಿದ ದಿಗ್ಗಜ, ಆರ್‌ಸಿಬಿ ಸವಾಲಿನ ಮೊತ್ತ!

17 ಎಸೆತಗಳಲ್ಲಿ1 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 26 ರನ್‌ ಬಾರಿಸಿದ್ದ ಮಿಚೆಲ್‌ ಮಾರ್ಷ್‌ ಇದಕ್ಕೂ ಮುನ್ನವೇ ಹರ್ಷಲ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದ್ದರು. ಫಿಲ್‌ ಸಾಲ್ಟ್‌ ಔಟಾದ ಬಳಿಕ ಜೊತೆಯಾದ ರಿಲ್ಲಿ ರೋಸೋ (35 ರನ್‌, 22 ಎಸೆತ,  1 ಬೌಂಡರಿ, 3 ಸಿಕ್ಸರ್‌) ಹಾಗೂ ಅಕ್ಷರ್‌ ಪಟೇಲ್‌ (8 ರನ್,‌ 3 ಎಸೆತ, 1 ಸಿಕ್ಸರ್‌) ಡೆಲ್ಲಿ ತಂಡದ ಗೆಲುವನ್ನು ಇನ್ನಷ್ಟು ಸುಲಭ ಮಾಡಿದರು. ಆರ್‌ಸಿಬಿಯ ಪೈಕಿ ಸಿರಾಜ್‌ 2 ಓವರ್‌ಗಳಲ್ಲಿ 28 ರನ್‌ ನೀಡಿದರೆ, ಹರ್ಷಲ್‌ ಪಟೇಲ್‌ 2 ಓವ್‌ಗಳಲ್ಲಿ 32 ರನ್‌ ನೀಡಿ ದುಬಾರಿ ಎನಿಸಿದರು. ಇತ್ತೀಚೆಗೆ ತಂಡ ಸೇರಿಕೊಂಡ ಕೇದಾರ್‌ ಜಾದವ್‌ಗೆ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನ ಯಾವ ಅವಕಾಶ ಕೂಡ ಸಿಗಲಿಲ್ಲ.

IPL 2023: ಟಾಸ್‌ ಗೆದ್ದ ಆರ್‌ಸಿಬಿ ತಂಡದಲ್ಲಿ ಆಗಿರೋ ಬದಲಾವಣೆ ಏನು?

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ