7ನೇ ಆವೃತ್ತಿ ಪ್ರೊ ಕಬಡ್ಡಿಗೆ ತಯಾರಿ ಆರಂಭ- ಏ.8,9 ಕ್ಕೆ ಆಟಗಾರರ ಹರಾಜು

By Web Desk  |  First Published Mar 9, 2019, 8:47 AM IST

6ನೇ ಆವೃತ್ತಿ ಪ್ರೊ ಕಬಡ್ಡಿ  ಲೀಗ್ ಟೂರ್ನಿ ಕನ್ನಡಿಗರಿಗೆ ಸ್ಮರಣೀಯ. ಬೆಂಗಲೂರು ಬುಲ್ಸ್ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಮೆರೆದಾಡಿದೆ. ಇದೀಗ 7ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿ ಹರಾಜು ಪ್ರಕ್ರಿಯೆಗೆ ತಯಾರಿ ಆರಂಭಗೊಂಡಿದೆ. ಹರಾಜಿನ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
 


ಮುಂಬೈ(ಮಾ.09): ಪ್ರೊ ಕಬಡ್ಡಿ 7ನೇ ಆವೃತ್ತಿಯ ಆಟಗಾರರ ಹರಾಜು ಏ.8 ಹಾಗೂ 9ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಲೀಗ್‌ ಆಯುಕ್ತ ಅನುಪಮ್‌ ಗೋಸ್ವಾಮಿ ಶುಕ್ರವಾರ ಘೋಷಿಸಿದರು. ಜುಲೈ 19ರಿಂದ 7ನೇ ಆವೃತ್ತಿ ಆರಂಭಗೊಳ್ಳಲಿದ್ದು, ಪ್ರತಿ ತಂಡ 15 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಹರಾಜಿನಲ್ಲಿ ಖರೀದಿಸಿದ್ದ 9 ಆಟಗಾರರು ಹಾಗೂ ನ್ಯೂ ಯಂಗ್‌ ಪ್ಲೇಯರ್‌ ವಿಭಾಗದಿಂದ ಆಯ್ಕೆ ಮಾಡಿಕೊಂಡಿದ್ದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಅನುಪಮ್‌ ಹೇಳಿದರು. ಯಾವ ತಂಡ ಎಷ್ಟುಆಟಗಾರರನ್ನು ಉಳಿಸಿಕೊಂಡಿದೆ, ಯಾವ್ಯಾವ ಆಟಗಾರರನ್ನು ಉಳಿಸಿಕೊಂಡಿದೆ ಎನ್ನುವ ವಿವರಗಳನ್ನು ಈ ತಿಂಗಳ ಅಂತ್ಯದಲ್ಲಿ ನೀಡುವುದಾಗಿ ತಿಳಿಸಿದರು. ಇದೇ ವೇಳೆ 2020ರಲ್ಲಿ ನಡೆಯಲಿರುವ 8ನೇ ಆವೃತ್ತಿಯನ್ನೂ ಜುಲೈ ತಿಂಗಳಲ್ಲೇ ಆರಂಭಿಸುವುದಾಗಿ ಅನುಪಮ್‌ ಹೇಳಿದರು.

ಇದನ್ನೂ ಓದಿ: ಅಂ.ರಾ.ಕಬಡ್ಡಿ ಲೀಗ್‌ನ ಲಾಭ ಯೋಧರ ಕುಟುಂಬಕ್ಕೆ!

Tap to resize

Latest Videos

ಬೆಂಗಳೂರಲ್ಲೇ ಕಬಡ್ಡಿ ನಡೆಸುವ ವಿಶ್ವಾಸ
ಕಳೆದ 2 ವರ್ಷದಿಂದ ಬೆಂಗಳೂರಲ್ಲಿ ಪ್ರೊ ಕಬಡ್ಡಿ ಪಂದ್ಯಗಳು ನಡೆದಿಲ್ಲ, ಈ ಬಾರಿ ಏನು ವ್ಯವಸ್ಥೆ ಮಾಡಲಾಗುತ್ತದೆ ಎನ್ನುವ ‘ಕನ್ನಡಪ್ರಭ’ದ ಪ್ರಶ್ನೆಗೆ ಉತ್ತರಿಸಿದ ಲೀಗ್‌ ಆಯುಕ್ತ ಅನುಪಮ್‌ ಗೋಸ್ವಾಮಿ, ‘ಸಂಬಂಧಪಟ್ಟಎಲ್ಲರನ್ನೂ ಒಗ್ಗೂಡಿಸಿ, ಫ್ರಾಂಚೈಸಿಯ ಸಹಾಯದಿಂದ ಬೆಂಗಳೂರಲ್ಲೇ ಪಂದ್ಯಗಳನ್ನು ನಡೆಸುವ ಪ್ರಯತ್ನ ನಡೆಯುತ್ತಿದೆ. ಹಾಲಿ ಚಾಂಪಿಯನ್‌ ತಂಡ ತನ್ನ ತವರಲ್ಲೇ ಪಂದ್ಯಗಳನ್ನು ಆಡಲಿದೆ ಎನ್ನುವ ವಿಶ್ವಾಸವಿದೆ. ಕರ್ನಾಟಕದ ಇತರ ನಗರಗಳನ್ನೂ ಪರಿಗಣಿಸುತ್ತಿದ್ದೇವೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಾರಣ, ಆಯೋಜನೆ ಕಷ್ಟವಾಗಲಿದೆ’ ಎಂದರು.

ಇದನ್ನೂ ಓದಿ: ಪ್ರೊ ಕಬಡ್ಡಿ v/s ನ್ಯೂ ಕಬಡ್ಡಿ- ಗೊಂದಲದಲ್ಲಿ ಆಟಗಾರರು!

ಬಂಡಾಯ ಕಬಡ್ಡಿ ಲೀಗ್‌ಗೆ ಹೋಗುವವರನ್ನು ತಡೆಯಲಾಗದು!
ನ್ಯೂ ಕಬಡ್ಡಿ ಫೆಡರೇಷನ್‌ ಆರಂಭಿಸುತ್ತಿರುವ ಇಂಡೋ-ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ಗೆ ಪ್ರೊ ಕಬಡ್ಡಿ ಆಟಗಾರರು ಹಾಗೂ ಕೋಚ್‌ಗಳು ವಲಸೆ ಹೋಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅನುಪಮ್‌, ‘ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ಆದರೆ ಪ್ರೊ ಕಬಡ್ಡಿ ವಿಶ್ವದಲ್ಲೇ ಅತಿದೊಡ್ಡ ಲೀಗ್‌ ಎಂದು ಸಾಬೀತಾಗಿದೆ. ಪ್ರತಿ ವರ್ಷ 3000ರಿಂದ 4000 ಪ್ರತಿಭೆಗಳಿಗೆ ನ್ಯೂ ಯಂಗ್‌ ಪ್ಲೇಯರ್‌ ವಿಭಾಗದಲ್ಲಿ ಅವಕಾಶ ಸಿಗುತ್ತಿದೆ. ಪ್ರತಿಭೆಗಳಿಗೆ ಕೊರತೆ ಇಲ್ಲ. ನಾವು ಬೆಳೆಯುತ್ತಿದ್ದೇವೆ, ಬೆಳೆಯುತ್ತಲೇ ಇರುತ್ತೇವೆ’ ಎಂದರು.

ರವಿಶಂಕರ್‌ ಕೆ.ಭಟ್‌
ಕನ್ನಡಪ್ರಭ ವಾರ್ತೆ ಮುಂಬೈ

click me!