ಮುಷ್ತಾಕ್‌ ಅಲಿ ಟಿ20: ಕರ್ನಾಟಕದ ಅಬ್ಬರಕ್ಕೆ ಮುಂಬೈ ಮಂಕು!

By Web DeskFirst Published Mar 9, 2019, 8:34 AM IST
Highlights

ಮುಷ್ತಾಕ್ ಆಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಸತತ 8ನೇ ಗೆಲುವು ದಾಖಲಿಸಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಕರ್ನಾಟಕ 13.2 ಓವರ್‌ಗಲ್ಲಿ ಗೆಲುವು ಸಾಧಿಸಿದೆ. ಇಲ್ಲಿದೆ ಕನ್ನಡಿಗರು ಅದ್ಬುತ ಪ್ರದರ್ಶನದ ಹೈಲೈಟ್ಸ್.

ಇಂದೋರ್‌(ಮಾ.08): ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ಗೆಲುವಿನ ಓಟ ಮುಂದುವರಿಸಿದೆ. ಶುಕ್ರವಾರದಿಂದ ಆರಂಭಗೊಂಡ ಸೂಪರ್‌ ಲೀಗ್‌ನಲ್ಲೂ ತಂಡ ಶುಭಾರಂಭ ಮಾಡಿದ್ದು, ಟೂರ್ನಿಯಲ್ಲಿ ಇದು ಸತತ 8ನೇ ಗೆಲುವಾಗಿದೆ. ‘ಬಿ’ ಗುಂಪಿನಲ್ಲಿರುವ ಕರ್ನಾಟಕ, ಬಲಿಷ್ಠ ಮುಂಬೈ ವಿರುದ್ಧ 9 ವಿಕೆಟ್‌ ಜಯ ಸಾಧಿಸಿತು.

ಇದನ್ನೂ ಓದಿ: ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಂ ಇಂಡಿಯಾ

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 97 ರನ್‌ ಗಳಿಸಿತು. ಸುಲಭ ಗುರಿ ಬೆನ್ನತ್ತಿದ ಕರ್ನಾಟಕ, 13.2 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 98 ರನ್‌ ಗಳಿಸಿ ಜಯದ ನಗೆ ಬೀರಿತು.

ಪ್ರಚಂಡ ಲಯದಲ್ಲಿರುವ ರೋಹನ್‌ ಕದಂ ಹಾಗೂ ಬಿ.ಆರ್‌.ಶರತ್‌ ಮೊದಲ ವಿಕೆಟ್‌ಗೆ 79 ರನ್‌ ಜೊತೆಯಾಟವಾಡಿದರು. ಶರತ್‌ (25) 12ನೇ ಓವರ್‌ನಲ್ಲಿ ಔಟಾದ ಬಳಿಕ, ಮಯಾಂಕ್‌ ಅಗರ್‌ವಾಲ್‌ (07) ರೋಹನ್‌ ಜತೆ ಸೇರಿ ಗುರಿ ತಲುಪಿಸಿದರು. 45 ಎಸೆತಗಳನ್ನು ಎದುರಿಸಿದ ರೋಹನ್‌ 8 ಬೌಂಡರಿ, 1 ಸಿಕ್ಸರ್‌ನೊಂದಿಗೆ 62 ರನ್‌ ಸಿಡಿಸಿ ಅಜೇಯರಾಗಿ ಉಳಿದರು.

ಇದನ್ನೂ ಓದಿ: IPL 12: ಥೀಮ್ ಸಾಂಗ್ ರಿಲೀಸ್..! ಪ್ರೇಕ್ಷಕರು ಫುಲ್ ಖುಷ್..!

ಇದಕ್ಕೂ ಮುನ್ನ ಕರ್ನಾಟಕದ ಬಿಗುವಿನ ದಾಳಿ ಎದುರು ಮುಂಬೈ ತತ್ತರಿಸಿತು. ಪೃಥ್ವಿ ಶಾ (0), ಸೂರ್ಯಕುಮಾರ್‌ ಯಾದವ್‌ (14), ಶ್ರೇಯಸ್‌ ಅಯ್ಯರ್‌ (10), ಆದಿತ್ಯ ತರೆ (0) ಔಟಾದರು. ಕರ್ನಾಟಕದ ಪರ ವಿನಯ್‌ ಕುಮಾರ್‌ ಹಾಗೂ ಮನೋಜ್‌ ತಲಾ 2 ವಿಕೆಟ್‌ ಕಿತ್ತರು.

ಸೂಪರ್‌ ಲೀಗ್‌ನ 2ನೇ ಪಂದ್ಯದಲ್ಲಿ ಶನಿವಾರ ಕರ್ನಾಟಕ ತಂಡ ಉತ್ತರ ಪ್ರದೇಶ ವಿರುದ್ಧ ಆಡಲಿದೆ. ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿದೆ.

ಸ್ಕೋರ್‌: ಮುಂಬೈ 20 ಓವರ್‌ಗಳಲ್ಲಿ 97/8 (ಆಕಾಶ್‌ 22, ವಿನಯ್‌ 2-15, ಮನೋಜ್‌ 2-11), ಕರ್ನಾಟಕ 13.2 ಓವರ್‌ಗಳಲ್ಲಿ 98/1 (ರೋಹನ್‌ 62*, ಶರತ್‌ 25)

click me!