Pro Kabaddi League: ಬೆಂಗಳೂರಲ್ಲಿಂದು ಬುಲ್ಸ್‌ vs ಡೆಲ್ಲಿ ಫೈಟ್, ಪಂದ್ಯ ನೋಡಲು ಬರುತ್ತಿದ್ದಾರೆ ಕಿಚ್ಚ ಸುದೀಪ್

By Kannadaprabha NewsFirst Published Dec 8, 2023, 8:57 AM IST
Highlights

ಸೌರಭ್‌ ನಂದಲ್‌ ನಾಯಕತ್ವದ ಬೆಂಗಳೂರು ಬುಲ್ಸ್‌ ಮೊದಲೆರಡು ಪಂದ್ಯಗಳಲ್ಲಿ ಗುಜರಾತ್‌ ಜೈಂಟ್ಸ್‌ ಹಾಗೂ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಸೋಲನುಭವಿಸಿದೆ. ಆದರೆ ಇವೆರಡೂ ಬುಲ್ಸ್‌ಗೆ ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದ ಪಂದ್ಯಗಳು. ಆರಂಭದಲ್ಲಿ ಪಡೆದಿದ್ದ ಮುನ್ನಡೆಯನ್ನು ಉಳಿಸಿಕೊಳ್ಳಲಾಗದೆ ಕೊನೆ ಕ್ಷಣದಲ್ಲಿ ತಂಡಕ್ಕೆ ಸೋಲು ಎದುರಾಗಿದ್ದವು. 

ಬೆಂಗಳೂರು(ಡಿ.08): ಗೆಲ್ಲಬಹುದಾಗಿದ್ದ ಪಂದ್ಯಗಳನ್ನು ಕೊನೆ ಕ್ಷಣದ ಒತ್ತಡದಿಂದಾಗಿ ಕೈಚೆಲ್ಲಿ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಇನ್ನಷ್ಟೇ ಜಯದ ಖಾತೆ ತೆರೆಯಬೇಕಿರುವ ಬೆಂಗಳೂರು ಬುಲ್ಸ್‌ ತಂಡ ಇನ್ನು ತವರಿನ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದೆ. ಶುಕ್ರವಾರ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಲ್ಸ್‌ಗೆ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ 8ನೇ ಆವೃತ್ತಿಯ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಸವಾಲು ಎದುರಾಗಲಿದೆ.

ಸೌರಭ್‌ ನಂದಲ್‌ ನಾಯಕತ್ವದ ಬೆಂಗಳೂರು ಬುಲ್ಸ್‌ ಮೊದಲೆರಡು ಪಂದ್ಯಗಳಲ್ಲಿ ಗುಜರಾತ್‌ ಜೈಂಟ್ಸ್‌ ಹಾಗೂ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಸೋಲನುಭವಿಸಿದೆ. ಆದರೆ ಇವೆರಡೂ ಬುಲ್ಸ್‌ಗೆ ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದ ಪಂದ್ಯಗಳು. ಆರಂಭದಲ್ಲಿ ಪಡೆದಿದ್ದ ಮುನ್ನಡೆಯನ್ನು ಉಳಿಸಿಕೊಳ್ಳಲಾಗದೆ ಕೊನೆ ಕ್ಷಣದಲ್ಲಿ ತಂಡಕ್ಕೆ ಸೋಲು ಎದುರಾಗಿದ್ದವು. 

ಜೈಂಟ್ಸ್‌ ವಿರುದ್ಧ ಕೇವಲ 3 ಅಂಕ (31-34) ಹಾಗೂ ಬೆಂಗಾಲ್ ವಿರುದ್ಧ 2 ಅಂಕ (30-34)ಗಳ ಅಂತರದಲ್ಲಿ ವೀರೋಚಿತ ಸೋಲು ಕಂಡಿತ್ತು. ಹೀಗಾಗಿ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಜಯದ ಖಾತೆ ತೆರೆಯಲು ಬುಲ್ಸ್‌ ಆಟಗಾರರು ಎದುರು ನೋಡುತ್ತಿದ್ದಾರೆ. ಅತ್ತ ಡೆಲ್ಲಿ ಕೂಡಾ ಆರಂಭಿಕ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ ಸೋತಿದ್ದು, ಮೊದಲ ಗೆಲುವಿಗಾಗಿ ಕಾತರಿಸುತ್ತಿದೆ.

Good News: ನಿವೃತ್ತಿ ವಾಪಾಸ್ ಪಡೆದು ಟಿ20 ವಿಶ್ವಕಪ್ ಆಡಲು ತೀರ್ಮಾನಿಸಿದ ದಕ್ಷಿಣ ಆಫ್ರಿಕಾದ ಆರ್‌ಸಿಬಿ ಕ್ರಿಕೆಟಿಗ..!

ಒತ್ತಡದಲ್ಲಿ ಭರತ್‌, ವಿಕಾಸ್‌

ಬುಲ್ಸ್‌ನ ತಾರಾ ರೈಡರ್‌ಗಳಾದ ಭರತ್‌ ಹೂಡಾ ಹಾಗೂ ವಿಕಾಸ್‌ ಖಂಡೋಲಾ ಮೊದಲೆರಡು ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. ಭರತ್‌ ಹಾಗೂ ವಿಕಾಸ್‌ ಎರಡು ಪಂದ್ಯಗಳಿಂದ ಕ್ರಮವಾಗಿ 12 ಹಾಗೂ 9 ರೈಡ್‌ ಅಂಕಗಳನ್ನಷ್ಟೇ ಗಳಿಸಿದ್ದಾರೆ. ಇವರಿಬ್ಬರ ವೈಫಲ್ಯದಿಂದಾಗಿ ಹೆಚ್ಚು ರೈಡ್‌ ಅಂಕಗಳನ್ನು ಕಲೆಹಾಕಲು 3ನೇ ರೈಡರ್‌ ಆಗಿ ಆಡುತ್ತಿರುವ ಆಲ್ರೌಂಡರ್ ನೀರಜ್‌ ನರ್ವಾಲ್‌ ಮೇಲೆ ಒತ್ತಡ ಹೆಚುತ್ತಿದೆ. ರೈಡರ್‌ಗಳ ವೈಫಲ್ಯವು ಡಿಫೆಂಡರ್‌ಗಳನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದು, ಸಂಘಟಿತ ಪ್ರದರ್ಶನ ತೋರಿದರಷ್ಟೇ ಬುಲ್ಸ್‌ಗೆ ಜಯ ದಕ್ಕಲಿದೆ.

ಪಂದ್ಯ ವೀಕ್ಷಣೆಗೆ ಸುದೀಪ್‌

ನಟ ಸುದೀಪ್‌ ಶುಕ್ರವಾರ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಬೆಂಗಳೂರು ಬುಲ್ಸ್‌-ದಬಾಂಗ್‌ ಡೆಲ್ಲಿ ಪಂದ್ಯ ವೀಕ್ಷಿಸಲಿದ್ದಾರೆ.ಇನ್ನೂ ಕೆಲ ಗಣ್ಯರು ಆಗಮಿಸುವ ನಿರೀಕ್ಷೆ ಇದೆ.

ಅಖಾಡಕ್ಕೆ ಕಿಚ್ಚೇರಿಸಲು ಖುದ್ದು ಕಿಚ್ಚನೇ ಬರಲಿದ್ದಾರೆ ❤️‍🔥

ನೋಡಿರಿ 📺 | PKL | Bengaluru Bulls v Dabang Delhi ನಾಳೆ ರಾತ್ರಿ 7:30ಕ್ಕೆ | ನಿಮ್ಮ ಮತ್ತು Disney+Hotstar ನಲ್ಲಿ
pic.twitter.com/XMy5SUF0x4

— Star Sports Kannada (@StarSportsKan)

ಪಾಟ್ನಾಗೆ ಸತತ ಎರಡನೇ ಜಯ

ಅಹಮದಾಬಾದ್‌: ಕೊನೆ ಕ್ಷಣದಲ್ಲಿ ಅತ್ಯಾಕರ್ಷಕ ಆಟ ಪ್ರದರ್ಶಿಸಿದ ಹೊರತಾಗಿಯೂ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ 4ನೇ ಗೆಲುವು ದಾಖಲಿಸುವ ಗುಜರಾತ್ ಜೈಂಟ್ಸ್ ಕನಸು ನನಸಾಗಲಿಲ್ಲ. ಗುರುವಾರ ಜೈಂಟ್ಸ್‌ಗೆ ಪಾಟ್ನಾ ಪೈರೇಟ್ಸ್‌ ವಿರುದ್ದ 30-33ರಲ್ಲಿ ಸೋಲು ಎದುರಾಯಿತು. ಪಾಟ್ನಾಗೆ ಇದು ಸತತ ಎರಡನೇ ಜಯ.

ಈ ಹಿಂದೆ ಹರಾಜಿನಲ್ಲಿ ಮಾಡಿದ ಈ 6 ತಪ್ಪು RCB ಮಾಡದಿರಲಿ..! ನಿಮಗೆ ನೆನಪಿವೆಯಾ ಆರ್‌ಸಿಬಿ ಫ್ರಾಂಚೈಸಿ ಎಡವಟ್ಟುಗಳು?

ಆರಂಭದಿಂದಲೂ ತೀವ್ರ ಪೈಪೋಟಿಯಿಂದಲೇ ಸಾಗಿದ ಪಂದ್ಯದಲ್ಲಿ ಇತ್ತಂಡಗಳು ಮೊದಲ 20 ನಿಮಿಷದ ಆಟ ಮುಕ್ತಾಯಕ್ಕೆ 12-12ರಿಂದ ಸಮಬಲ ಸಾಧಿಸಿದ್ದವು. ಆದರೆ ದ್ವಿತಿಯಾರ್ಧದಲ್ಲಿ ಅಂಕಗಳಿಕೆಯ ವೇಗ ಹೆಚ್ಚಿಸಿದ ಪಾಟ್ನಾ ಒಂದು ಹಂತದಲ್ಲಿ 29-17ರಿಂದ ಮುನ್ನಡೆ ಸಾಧಿಸಿ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಪುಟಿದೆದ್ದ ಜೈಂಟ್ಸ್ ತನ್ನ ಹಿನ್ನಡೆಯನ್ನು 29-31 ತಗ್ಗಿಸಿದರೂ, ಪಾಟ್ನಾ ಕೈಯಿಂದ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೈಂಟ್ಸ್‌ ಪರ ರಾಕೇಶ್ 11 ಅಂಕ ಗಳಿಸಿದರು.

ಟೂರ್ನಿಯ ಮೊದಲ ಟೈ:

ಬೆಂಗಾಲ್ ವಾರಿಯರ್ಸ್ ಹಾಗೂ ಜೈಪುರ ಪಿಂಕ್‌ಪ್ಯಾಂಥರ್ಸ್‌ ನಡುವಿನ ಮತ್ತೊಂದು ಪಂದ್ಯ 28-28ರಿಂದ ಟೈ ಆಯಿತು. ಇದು ಈ ಟೂರ್ನಿಯಲ್ಲಿ ಟೈ ಆದ ಮೊದಲ ಪಂದ್ಯ. ಹಾಲಿ ಚಾಂಪಿಯನ್ ಜೈಪುರಕ್ಕೆ ಸತತ ಎರಡನೇ ಪಂದ್ಯದಲ್ಲೂ ಜಯ ಸಿಗಲಿಲ್ಲ.
 

click me!