ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಯುಪಿ ಯೋಧ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಹೋರಾಟ ತೀವ್ರ ಕುತೂಹಲ ಕೆರಳಿಸಿತ್ತು. ಆರಂಭದಲ್ಲಿ ಯುಪಿ ಮುನ್ನಡೆ ಪಡೆದುಕೊಂಡರೆ, ಬಳಿಕ ಬೆಂಗಾಲ್ ಗೆಲುವಿನ ನಗೆ ಬೀರಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಹೈದರಾಬಾದ್(ಜು.24): ಯುಪಿ ಯೋಧ ವಿರುದ್ಧ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 48-17 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 7ನೇ ಆವೃತ್ತಿಯಲ್ಲಿ ಬಂಗಾಳ ಗೆಲುವಿನೊಂದಿಗೆ ಶುಭಾರಂಭ ಮಾಡಿದರೆ, ಯುಪಿ ಸೋಲಿನ ನಿರಾಸೆ ಅನುಭವಿಸಿದೆ.
ಮೊದಲಾರ್ಧದ ಆರಂಭದಲ್ಲಿ ಅಂಕ ಖಾತೆ ತೆರೆದು ಮುನ್ನಡೆ ಪಡೆದಿದ್ದ ಯುಪಿ ಯೋಧಾ ಪಂದ್ಯದ 10 ನಿಮಿಷ ಮಿಂಚಿನ ಆಟ ಪ್ರದರ್ಶಿಸಿತ್ತು. ಆದರೆ 10ನೆ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ 6-6 ಅಂಕಗಳೊಂದಿಗೆ ಸಮಬಲ ಮಾಡಿತು. 11ನೇ ನಿಮಿಷದಿಂದ ಮುನ್ನಡೆ ಪಡೆದ ಬೆಂಗಾಲ್ ಮೊದಲಾರ್ಧದ ಅಂತ್ಯದಲ್ಲಿ 11-8 ಅಂಕ ಪಡೆದು ನಿಟ್ಟುಸಿರುಬಿಟ್ಟಿತು.
ದ್ವಿತಿಯಾರ್ಧದಲ್ಲಿ ಬಂಗಾಳ ಆರ್ಭಟಿಸಿತು. ಯುಪಿ ಯೋಧ ಹೋರಾಟಕ್ಕೆ ಅವಕಾಶ ನೀಡಲಿಲ್ಲ. ಅದ್ಭುತ ಹೋರಾಟ ನೀಡಿದ ಬಂಗಾಳ ಅಂಕ ಅಂತರ ಕಾಯ್ದುಕೊಂಡಿತು. ಅಂತಿಮ ಹಂತದಲ್ಲಿ ಬೆಂಗಾಲ್ ವಾರಿಯರ್ಸ್ 49-17 ಅಂಕಗಳಿಂದ ಭರ್ಜರಿ ಗೆಲುವು ಸಾಧಿಸಿತು.
ಪ್ರೊ ಕಬಡ್ಡಿ:
ವೃತ್ತಿಪರ ಕಬಡ್ಡಿ ಪಟುಗಳ ಲೀಗ್ ಟೂರ್ನಿಯಾಗಿರುವ ಪ್ರೊ ಕಬಡ್ಡಿ 6 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿ ಇದೀಗ 7ನೇ ಆವೃತ್ತಿಗೆ ಕಾಲಿಟ್ಟಿದೆ. ಕ್ರಿಕೆಟ್ ಹಾಗೂ ಫುಟ್ಬಾಲ್ ಕ್ರೀಡೆಗಳು ಲೀಗ್ ಟೂರ್ನಿಗಳಾಗಿ ಪ್ರಖ್ಯಾತಿ ಪಡೆದಿದೆ. ಆದರೆ 2014ರ ವರೆಗೆ ಕಬಡ್ಡಿ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಸೇರಿದಂತೆ ಕ್ರೀಡಾಕೂಟಗಳಿಗೆ ಸೀಮಿತವಾಗಿತ್ತು. ಆದರೆ 2014ರಲ್ಲಿ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಗೊಂಡಿತು. ಇದೀಗ ಭಾರತದಲ್ಲಿ ಐಪಿಎಲ್ ರೀತಿಯಲ್ಲೇ ಪ್ರೊ ಕಬಡ್ಡಿ ಕೂಡ ಜನಪ್ರಿಯವಾಗಿದೆ.
8 ತಂಡಗಳೊಂದಿಗೆ ಆರಂಭಗೊಂಡ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸದ್ಯ 12 ತಂಡಗಳು ಕಣದಲ್ಲಿವೆ. 6ನೇ ಆವೃತ್ತಿಯಲ್ಲಿ(2018) ಬೆಂಗಳೂರು ಬುಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೊದಲ ಬಾರಿಗೆ ಬೆಂಗಳೂರು ಈ ಸಾಧನೆ ಮಾಡಿತು. ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪಾಟ್ನಾ ಪೈರೇಟ್ಸ್ 3 ಬಾರಿ ಪ್ರಶಸ್ತಿ ಗೆದ್ದುಕೊಂಡು, ಗರಿಷ್ಠ ಟ್ರೋಫಿ ಗೆದ್ದ ಸಾಧನೆ ಮಾಡಿದೆ.