
ಮುಂಬೈ[ಏ.08]: ಬಹುನಿರೀಕ್ಷಿತ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್’ಗೆ ಆಟಗಾರರ ಹರಾಜು ನಡೆಯುತ್ತಿದ್ದು, ದಕ್ಷಿಣ ಕೊರಿಯಾ ಮೂಲದ ಸ್ಟಾರ್ ಕಬಡ್ಡಿ ಪಟು ಜಾಂಗ್ ಕುನ್ ಲೀ ಅವರನ್ನು ಪಾಟ್ನಾ ಪೈರೇಟ್ಸ್ ತಂಡವು 40 ಲಕ್ಷ ನೀಡಿ ಖರೀದಿಸಿದೆ. ಇದೇ ಮೊದಲ ಬಾರಿಗೆ ಕುನ್ ಲೀ ಬೆಂಗಾಲ್ ವಾರಿಯರ್ಸ್ ತೊರೆದು ನೂತನ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಇನ್ನು ’ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದ ಏಕೈಕ ವಿದೇಶಿ ಆಟಗಾರ ಇರಾನ್’ನ ಅಬೋಜರ್ ಮಿಘಾನಿಯನ್ನು ಖರೀದಿಸಲು ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಯು ಮುಂಬಾ, ಹರಿಯಾಣ ಸ್ಟೀಲರ್ಸ್ ತಂಡಗಳು ಸಾಕಷ್ಟು ಪೈಪೋಟಿ ನಡೆಸಿದವಾದರೂ ಕೊನೆಗೆ ಪಾಟ್ನಾ 75 ಲಕ್ಷ ನೀಡಿ ಖರೀದಿಸಿತು. ಆದರೆ ತೆಲುಗು ಟೈಟಾನ್ಸ್ ತಂಡವು ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಪ್ರೊ ಕಬಡ್ಡಿ ಹರಾಜು - 441 ಆಟಗಾರರ ಅದೃಷ್ಟ ಪರೀಕ್ಷೆ!
ಮೊದಲಿಗೆ ನಡೆದ ವಿದೇಶಿ ಆಟಗಾರರ ಹರಾಜಿನಲ್ಲಿ ಮೋಸೆನ್ ಅವರನ್ನು ಯುಪಿ ಯೋಧಾ ತಂಡವು 21 ಲಕ್ಷ ನೀಡಿ ಖರೀದಿಸಿದರೆ, ಹದಿ ಓಸ್ಟಾರಾಕ್ ಅವರನ್ನು ಪಾಟ್ನಾ ಪೈರೇಟ್ಸ್ ತಂಡವು 16 ಲಕ್ಷ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಇರಾನಿನ ಆಲ್ರೌಂಡರ್ ಎಸ್ಮಾಯಿಲ್ ನಬೀಭಕ್ಷ್ ಅವರನ್ನು ಬೆಂಗಾಲ್ ವಾರಿಯರ್ಸ್ 77.75 ಲಕ್ಷ ನೀಡಿ ಖರೀದಿಸಿದೆ. ಕೇವಲ 10 ಲಕ್ಷ ಮೂಲಬೆಲೆ ಹೊಂದಿದ್ದ ನಬೀಭಕ್ಷ್ ಖರೀದಿಸಲು ಪಾಟ್ನಾ ಪೈರೇಟ್ಸ್ ತಂಡವು 60 ಲಕ್ಷ ರುಪಾಯಿವರೆಗೂ ಪ್ರಯತ್ನಿಸಿತು.ಯು ಮುಂಬಾ 70 ಲಕ್ಷದವರೆಗೂ ಬಿಡ್ ಮಾಡಿತಾದರೂ ಕೊನೆಗೂ ಬೆಂಗಾಲ್ ತಂಡ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರು ಬುಲ್ಸ್ ತಂಡವು ಸಂಜಯ್ ಶ್ರೇಷ್ಠರನ್ನು 10 ಲಕ್ಷಕ್ಕೆ ಖರೀದಿಸಿದರೆ, ಸಯೀದ್ ಘಫಾರಿಯನ್ನು ದಬಾಂಗ್ ಡೆಲ್ಲಿ 16.5 ಲಕ್ಷ ನೀಡಿ ಖರೀದಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.