
ಮುಂಬೈ: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜಿಗೂ ಮುನ್ನ 12 ಫ್ರಾಂಚೈಸಿಗಳು ಒಟ್ಟು 83 ಆಟಗಾರರನ್ನು ರೀಟೈನ್ ಮಾಡಿಕೊಂಡಿವೆ. ಶನಿವಾರ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಆಯೋಜಕರು ಪ್ರಕಟಗೊಳಿಸಿದರು. ಬೆಂಗಳೂರು ಬುಲ್ಸ್ (Bengaluru Bulls) ನಾಲ್ವರು ಯುವ ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಗಮನ ಸೆಳೆದಿದ್ದ ರೈಡರ್ ಪಂಕಜ್ ಜೊತೆಗೆ, ಮನ್‌ಜೀತ್, ಲಕ್ಕಿ ಕುಮಾರ್ ಹಾಗೂ ಚಂದ್ರನಾಯ್ಕ್‌ರನ್ನು ಉಳಿಸಿಕೊಂಡಿದೆ. ಕಳೆದ ವರ್ಷ ತಂಡವನ್ನು ಮುನ್ನಡೆಸಿದ್ದ ಹಿರಿಯ ಆಟಗಾರ ಪ್ರದೀಪ್ ನರ್ವಾಲ್‌ರನ್ನು ಕೈಬಿಡಲಾಗಿದೆ.
ಇದೇ ವೇಳೆ ಲೀಗ್‌ನ ಅತ್ಯಂತ ದುಬಾರಿ ಆಟಗಾರ ಪವನ್ ಶೆರಾವತ್ ಮತ್ತೊಮ್ಮೆ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಇನ್ನು ದಬಾಂಗ್ ಡೆಲ್ಲಿಯ ನಾಯಕರಾಗಿದ್ದ ನವೀನ್ ಕುಮಾರ್(Naveen Kumar) ಇದೇ ಮೊದಲ ಬಾರಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ . ನವೀನ್, ಪ್ರೊ ಕಬಡ್ಡಿಯಲ್ಲಿ 1000ಕ್ಕೂ ಹೆಚ್ಚು ರೈಡ್ ಅಂಕ ಗಳಿಸಿದ್ದಾರೆ. ಪಿಕೆಎಲ್ ಅನುಭವಿಗಳಾದ ಮಣಿಂದರ್ ಸಿಂಗ್ ಮತ್ತು ಪರ್ದೀಪ್ ನರ್ವಾಲ್ ಅವರೊಂದಿಗೆ ಇರಾನಿನ ಶಕ್ತಿಶಾಲಿಗಳಾದ ಫಝೆಲ್ ಅತ್ರಾಚಲಿ ಮತ್ತು ಮೊಹಮದ್ರೆಜಾ ಶಾದ್ಲೋಯಿ ಕೂಡ ಪಿಕೆಎಲ್ 12 ಹರಾಜಿಗೆ ಪ್ರವೇಶಿಸಲಿದ್ದಾರೆ.
ಮೇ 31, ಜೂ.1ಕ್ಕೆ ಪ್ರೊ ಕಬಡ್ಡಿ ಹರಾಜು
ಮುಂಬೈ: 12ನೇ ಆವೃತ್ತಿಯ ಪ್ರೊ ಕಬಡ್ಡಿ ಆಟಗಾರರ ಹರಾಜು (Pro Kabaddi league Players Auction) ಪ್ರಕ್ರಿಯೆ ಮೇ 31 ಹಾಗೂ ಜೂ.1ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಲೀಗ್‌ನ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ಶುಕ್ರವಾರ ಪ್ರಕಟಣೆ ಮೂಲಕ ತಿಳಿಸಿದೆ. 2024ರಲ್ಲಿ ನಡೆದಿದ್ದ 11ನೇ ಆವೃತ್ತಿಯಲ್ಲಿ ಹರ್ಯಾಣ ಸ್ಟೀಲರ್ಸ್ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಹರಾಜಿನಲ್ಲಿ, ದೇಶೀಯ ಮತ್ತು ವಿದೇಶಿ ಆಟಗಾರರನ್ನು ಎ, ಬಿ, ಸಿ ಮತ್ತು ಡಿ ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗುವುದು. ಪ್ರತಿ ವಿಭಾಗದಲ್ಲಿ ಆಟಗಾರರನ್ನು 'ಆಲ್ ರೌಂಡರ್ಸ್', 'ಡಿಫೆಂಡರ್ಸ್' ಮತ್ತು 'ರೈಡರ್ಸ್' ಎಂದು ವರ್ಗೀಕರಿಸಲಾಗುತ್ತದೆ. ಪ್ರತಿ ವರ್ಗಕ್ಕೆ ಮೂಲ ಬೆಲೆಗಳು ಹೀಗಿವೆ:
* ವರ್ಗ ಎ: 30 ಲಕ್ಷ ರೂ.
* ವರ್ಗ ಬಿ: 20 ಲಕ್ಷ ರೂ.
* ವರ್ಗ ಸಿ: 13 ಲಕ್ಷ ರೂ.
* ವರ್ಗ ಡಿ: 9 ಲಕ್ಷ ರೂ.
ಪ್ರತಿ ಫ್ರಾಂಚೈಸಿಯು ಹರಾಜಿನಲ್ಲಿ ತನ್ನ ತಂಡ ರಚನೆಗಾಗಿ ಒಟ್ಟು 5 ಕೋಟಿ ರೂ.ಗಳ ಪರ್ಸ್ ಹೊಂದಿರುತ್ತದೆ. ಭಾರತದ ಪ್ರಮುಖ ಆಟಗಾರರಾದ ಪವನ್ ಶೆರಾವತ್, ಅರ್ಜುನ್ ದೇಶ್ವಾಲ್, ಅಶು ಮಲಿಕ್ ಮತ್ತು ಪಿಕೆಎಲ್ 11 ರ ಅಗ್ರ ರೈಡರ್ ದೇವಂಕ್ ದಲಾಲ್ ಸೇರಿದಂತೆ 500ಕ್ಕೂ ಅಧಿಕ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಕೂಟಕ್ಕೆ ಪಾರುಲ್‌ಗೆ ಅರ್ಹತೆ
ದೋಹಾ: ಭಾರತದ ತಾರಾ ಅಥ್ಲೀಟ್ ಪಾರುಲ್ ಚೌಧರಿ ಶುಕ್ರವಾರ ರಾತ್ರಿ ಇಲ್ಲಿ ನಡೆದ ಡೈಮಂಡ್ ಲೀಗ್ ಕೂಟದಲ್ಲಿ 3000 ಮೀ. ಸ್ಟೀಪಲ್ ಚೇಸ್ ಓಟವನ್ನು 9 ನಿಮಿಷ 13.39 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ರಾಷ್ಟ್ರೀಯ ದಾಖಲೆ ಬರೆದರು. ಓಟವನ್ನು 6ನೇ ಸ್ಥಾನದಲ್ಲಿ ಮುಗಿಸಿದ ಪಾರುಲ್, ಈ ವರ್ಷ ಸೆಪ್ಟೆಂಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದರು. ಪಾರುಲ್ 2 ವರ್ಷ ಹಿಂದೆ ಹಂಗೇರಿಯ ಬುಡಾಪೆಸ್ಟ್‌ನಲ್ಲಿ 9 ನಿಮಿಷ 15.31 ಸೆಕೆಂಡ್‌ಗಳ ಓಟ ಪೂರ್ತಿಗೊಳಿಸಿ ಬರೆದಿದ್ದ ದಾಖಲೆಯನ್ನು ಉತ್ತಮಪಡಿಸಿಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.