ರೈಡ್ ಮಷಿನ್ ಎಂದೇ ಖ್ಯಾತಿಯಾಗಿರುವ ಪ್ರದೀಪ್ ನರ್ವಾಲ್ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ 1000 ಅಂಕಗಳ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ರೈಡಿಂಗ್‌ನಲ್ಲಿ 1016 ಸೇರಿ ಒಟ್ಟು 1023 ಅಂಕ ಗಳಿಸಿರುವ ಪ್ರದೀಪ್ ಇದೀಗ ಹೊಸ ಇತಿಹಾಸ ರಚಿಸಿದ್ದಾರೆ.
ಕೋಲ್ಕತಾ(ಸೆ.10): ಪ್ರೊ ಕಬಡ್ಡಿಯಲ್ಲಿ ಇತಿಹಾಸದಲ್ಲೇ 1000 ಅಂಕಗಳ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಪಾಟ್ನಾ ಪೈರೇಟ್ಸ್‌ನ ರೈಡ್ ಮಷಿನ್ ಪ್ರದೀಪ್ ನರ್ವಾಲ್ ಬರೆದಿದ್ದಾರೆ. 7ನೇ ಆವೃತ್ತಿಯಲ್ಲಿ ಪಾಟ್ನಾ ತಂಡ ಮಂಕಾಗಿದ್ದರೂ, ಪ್ರದೀಪ್ ಅತ್ಯುತ್ತಮ ಲಯ ಕಾಯ್ದುಕೊಂಡಿದ್ದಾರೆ. ಸೋಮವಾರ ಇಲ್ಲಿ ನಡೆದ ತಮಿಳ್ ತಲೈವಾಸ್ ವಿರುದ್ಧದ ಪಂದ್ಯದಲ್ಲಿ 26 ಅಂಕ ಗಳಿಸಿದ ಪ್ರದೀಪ್, 1000 ಅಂಕಗಳ ಸಾಧನೆ ಮಾಡಿದರು.
ಇದನ್ನೂ ಓದಿ: ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ!
99 ಪಂದ್ಯಗಳನ್ನು ಆಡಿರುವ ಪ್ರದೀಪ್ ರೈಡಿಂಗ್‌ನಲ್ಲಿ 1016 ಅಂಕಗಳಿಸಿದ್ದಾರೆ. ಅವರು 7 ಟ್ಯಾಕಲ್ ಅಂಕಗಳನ್ನೂ ಪಡೆದಿದ್ದು ಲೀಗ್‌ನಲ್ಲಿ ಒಟ್ಟು 1023 ಅಂಕ ಗಳಿಸಿದ್ದಾರೆ. ರೈಡಿಂಗ್ನಲ್ಲಿರುವ ಬಹುತೇಕ ಎಲ್ಲಾ ದಾಖಲೆಗಳು ಪ್ರದೀಪ್ ಹೆಸರಿನಲ್ಲಿವೆ. ಅತಿಹೆಚ್ಚು ಅಂಕ, ಅತಿಹೆಚ್ಚು ರೈಡ್ ಅಂಕ, ಅತಿಹೆಚ್ಚು ಯಶಸ್ವಿ ರೈಡ್ (765), ಸೂಪರ್ ರೈಡ್ (43) ಹಾಗೂ ಸೂಪರ್ ಟೆನ್ (52) ಪಟ್ಟಿಯಲ್ಲಿ ಪ್ರದೀಪ್ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ...
ಪ್ರೊ ಕಬಡ್ಡಿಯಲ್ಲಿ ಗರಿಷ್ಠ ಅಂಕ
(ರೈಡ್+ಟ್ಯಾಕಲ್)
ಪ್ರದೀಪ್ ನರ್ವಾಲ್ =1023(ಪಂದ್ಯ 99)
ರಾಹುಲ್ ಚೌಧರಿ=974(ಪಂದ್ಯ 115)
ದೀಪಕ್ ಹೂಡಾ =873(ಪಂದ್ಯ116)
ಅಜಯ್ ಠಾಕೂರ್ =811(ಪಂದ್ಯ115)
ರೋಹಿತ್ ಕುಮಾರ್=687(ಪಂದ್ಯ 87)
ಪಾಟ್ನಾ, ಯೋಧಾಗೆ ಜಯ
ಕೋಲ್ಕತಾ: ಸೋಮವಾರ ನಡೆದ ಪ್ರೊ ಕಬಡ್ಡಿ ಪಂದ್ಯಗಳಲ್ಲಿ ಪಾಟ್ನಾ ಹಾಗೂ ಯು.ಪಿ.ಯೋಧಾ ತಂಡಗಳು ಜಯ ಸಾಧಿಸಿದವು. ಪ್ರದೀಪ್ ನರ್ವಾಲ್ 26 ಅಂಕಗಳ ಅಬ್ಬರದ ನೆರವಿನಿಂದ ಪಾಟ್ನಾ, ತಮಿಳ್ ತಲೈವಾಸ್ ವಿರುದ್ಧ 51-25ರಲ್ಲಿ ಗೆಲುವು ಸಾಧಿಸಿತು. ಸತತ 6 ಸೋಲುಗಳ ಬಳಿಕ ಪಾಟ್ನಾ ಗೆಲುವಿನ ಸಂಭ್ರಮ ಆಚರಿಸಿತು. ತಲೈವಾಸ್ಗಿದು ಸತತ 7ನೇ ಸೋಲು. ಮೊದಲ ಪಂದ್ಯದಲ್ಲಿ ಯೋಧಾ ತಂಡ ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ 33-26ರಲ್ಲಿ ಜಯಿಸಿತು. ಸತತ 4 ಜಯ ಸಾಧಿಸಿದ ಯೋಧಾ, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.