ಪ್ರತಿಭಟನಾ ಸ್ಥಳಕ್ಕೆ ರಾಜಕೀಯ ನಾಯಕರ ಭೇಟಿ
ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ
ಕುಸ್ತಿಪಟುಗಳ ಬೆಂಬಲಕ್ಕೆ ಪ್ರಿಯಾಂಕ, ಕೇಜ್ರಿವಾಲ್
ನವದೆಹಲಿ(ಏ.30): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ದಿನದಿಂದ ದಿನಕ್ಕೆ ರಾಜಕೀಯ ನಾಯಕರ ಬೆಂಬಲ ಹೆಚ್ಚುತ್ತಿದೆ. ಶನಿವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.
ಕುಸ್ತಿಪಟುಗಳ ಜೊತೆ ಕೆಲ ಕಾಲ ಕೂತು ಚರ್ಚಿಸಿದ ಪ್ರಿಯಾಂಕ, ಮಾಧ್ಯಮಗಳ ಜೊತೆ ಮಾತನಾಡುತ್ತಾ ‘ಎಫ್‌ಐಆರ್ ವಿವರಗಳನ್ನು ಪೊಲೀಸರು ಬಹಿರಂಗಪಡಿಸುತ್ತಿಲ್ಲ ಏಕೆ?, ಕುಸ್ತಿಪಟುಗಳು ಪದಕ ಗೆದ್ದಾಗ ನಾವೆಲ್ಲಾ ಟ್ವೀಟ್ ಮಾಡಿ ಸಂಭ್ರಮಿಸುತ್ತೇವೆ. ಆದರೆ ಈಗ ಅವರು ರಸ್ತೆಯಲ್ಲಿ ಕೂತು ಪ್ರತಿಭಟಿಸುತ್ತಿದ್ದಾರೆ. ಅವರಿಗೆ ನ್ಯಾಯ ಸಿಗುತ್ತಿಲ್ಲ. ಸರ್ಕಾರ ಬ್ರಿಜ್‌ಭೂಷಣ್ ಸಿಂಗ್‌ರನ್ನು ಏಕೆ ರಕ್ಷಿಸುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ’ ಎಂದರು.
ಬಳಿಕ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿಯಾಗಿ ಬೆಂಬಲ ಸೂಚಿಸಿದ ಕೇಜ್ರಿವಾಲ್, ‘ಪಕ್ಷ ಯಾವುದೇ ಇರಲಿ, ಎಲ್ಲರೂ ಆಗಮಿಸಿ ಕುಸ್ತಿಪಟುಗಳಿಗೆ ಬೆಂಬಲ ನೀಡಬೇಕಿದೆ. ಕುಸ್ತಿಪಟುಗಳಿಗೆ ಬೇಕಿರುವ ಎಲ್ಲಾ ಸೌಕರ್ಯವನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದರು. ಬಳಿಕ ಟ್ವೀಟ್ ಮೂಲಕವೂ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ‘ಈ ವನಿತೆಯರು ನಮ್ಮ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಆರೋಪಿ ಎಷ್ಟೇ ಬಲಿಷ್ಠನಾಗಿದ್ದರೂ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು’ ಎಂದಿದ್ದಾರೆ.
ಪ್ರತಿಭಟನೆ ಹಿಂದೆ ಕಾಂಗ್ರೆಸ್ ಕೈವಾಡ: ಬ್ರಿಜ್‌ಭೂಷಣ್ ಸಿಂಗ್ ಆರೋಪ
ರಾಜಕೀಯ ಬೇಡ: ಭಜರಂಗ್
ರಾಜಕೀಯ ನಾಯಕರ ಭೇಟಿಯಿಂದಾಗಿ ಕುಸ್ತಿಪಟುಗಳು ಗೊಂದಲಕ್ಕೆ ಸಿಲುಕಿದ್ದು, ತಮ್ಮ ಹೋರಾಟವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳದಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಮಾತನಾಡಿರುವ ತಾರಾ ಕುಸ್ತಿಪಟು ಭಜರಂಗ್ ಪೂನಿಯಾ, ‘ಇದು ಭಾರತೀಯ ಕುಸ್ತಿಯನ್ನು ಉಳಿಸಲು ನಡೆಯುತ್ತಿರುವ ಹೋರಾಟ. ದಯವಿಟ್ಟು ಇದರಲ್ಲಿ ರಾಜಕೀಯ ಬೆರೆಸಬೇಡಿ’ ಎಂದಿದ್ದಾರೆ.
ಬಬಿತಾ ಫೋಗಾಟ್ ವಿರುದ್ಧ ವಿನೇಶ್ ಅಸಮಾಧಾನ!
ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ ಕುಸ್ತಿಪಟುಗಳ ನಡುವೆಯೇ ಭಿನಾಭಿಪ್ರಾಯ ಶುರುವಾಗಿದೆ. ಈ ವರ್ಷ ಜನವರಿಯಲ್ಲಿ ಬ್ರಿಜ್‌ಭೂಷಣ್ ವಿರುದ್ಧ ಪ್ರತಿಭಟನೆ ಆರಂಭಿಸಿದ ಪ್ರಮುಖರ ಪೈಕಿ ಒಬ್ಬರಾದ ಬಬಿತಾ ಫೋಗಾಟ್ ಬಗ್ಗೆ ಅವರ ಸೋದರ ಸಂಬಂಧಿ ವಿನೇಶ್ ಫೋಗಾಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿರುವ ಬಬಿತಾ ವಿರುದ್ಧ ಟ್ವೀಟ್ ಮಾಡಿರುವ ವಿನೇಶ್, ‘ಸಹೋದರಿ ಬಬಿತಾ, ನೀವು ನಮ್ಮ ಹೋರಾಟವನ್ನು ದುರ್ಬಲಗೊಳಿಸಬೇಡಿ. ನಿಮ್ಮನ್ನು ಕೈಮುಗಿದು ಬೇಡಿಕೊಳ್ಳುತ್ತೇನೆ. ನಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ತಿರುಗಿ ಬೀಳಲು ಹಲವು ವರ್ಷಗಳೇ ಬೇಕಾಗಿವೆ’ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಅನಾಮಧೇಯ ಕುಸ್ತಿಪಟುವೊಬ್ಬರು ಸಹ ಬಬಿತಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ‘ನಮ್ಮನ್ನು ಪ್ರತಿಭಟನೆಗೆ ಕೂರಿಸಿ ಈಗ ಬಬಿತಾ ತಮ್ಮ ರಾಜಕೀಯ ಲಾಭಕ್ಕಾಗಿ ನಮಗೆಲ್ಲಾ ದ್ರೋಹ ಮಾಡುತ್ತಿದ್ದಾರೆ’ ಎಂದಿದ್ದರು.